1512 ಲೀ. ಅಕ್ರಮ ಮದ್ಯ ವಶ : ಪ್ರಕರಣ ದಾಖಲು

ವಿಜಯಪುರ:ಮಾ.29: ಅಕ್ರಮವಾಗಿ ಸಾಗಿಸುತ್ತಿದ್ದ 1512 ಲೀ. ಮದ್ಯವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಅಕ್ರಮ ಮದ್ಯ ವಶಪಡಿಸಿಕೊಂಡು ಕರ್ನಾಟಕ ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಬಲೇಶ್ವರ ಪಟ್ಟಣದ ಶಾಂತವೀರ ಸರ್ಕಲ್ ಹತ್ತಿರ ಗಸ್ತು ಕಾರ್ಯದಲ್ಲಿದ್ದಾಗ, ಬಬಲೇಶ್ವರ ತಾಲೂಕಿನ ಚಿಕ್ಕಗಲಗಲಿ ಗ್ರಾಮದಿಂದ ಹೊಸೂರಕ್ಕೆ ಬರುವ ರಸ್ತೆಯಲ್ಲಿ ಮಹಿಂದ್ರಾ ಪಿಕ್‍ಅಪ್ ವಾಹನದಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ವಿಜಯಪುರ ಅಬಕಾರಿ ನಿರೀಕ್ಷಕರ ನೇತೃತ್ವದ ತಂಡ ದಾಳಿ ನಡೆಸಿ, ವಾಹನ ಸಂಖ್ಯೆ.ಕೆಎ-28, ಬಿ-3432 ರಲ್ಲಿರುವ 175 ರಟ್ಟಿನ ಬಾಕ್ಸಗಳಲ್ಲಿ 180 ಎಂ.ಎಲ್.ನ 48 ಮದ್ಯದ ಟೆಟ್ರಾ ಪಾಕಟ್‍ಗಳಂತೆ ಒಟ್ಟು 150 ರಟ್ಟಿನ ಪೆಟ್ಟಿಗೆಗಳಲ್ಲಿ 7200 ಮದ್ಯದ ಟೆಟ್ರಾ ಪಾಕೆಟ್‍ಗಳು ಹಾಗೂ ಹೈವರ್ಡ ವಿಸ್ಕಿ ಎಂಬುದಾಗಿ ಮುದ್ರಿತ 1200 ಮದ್ಯದ ಟೆಟ್ರಾ ಪಾಕೆಟ್ ಸೇರಿದಂತೆ 7,08,912 ಮೊತ್ತದ ಒಟ್ಟು 1512 ಲೀಟರ್ ಮದ್ಯ ಹಾಗೂ ಸಾಗಾಣಿಕೆಗೆ ಬಳಸಿದ ವಾಹನವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.
ಈ ದಾಳಿಯಲ್ಲಿ ಅಬಕಾರಿ ನಿರೀಕ್ಷಕ ಅನೀಲ ಎಂ.ಪತ್ತಾರ ನೇತೃತ್ವ ವಹಿಸಿದ್ದರು. ಅಬಕಾರಿ ನಿರೀಕ್ಷಕರಾದ ಎಮ.ಆರ್.ನಿಂಗರೆಡ್ಡಿ, ಪೇದೆ ಬಿ.ಎಸ್.ತಡಕಲ್, ಅರ್ಜುನ ಗೊಟಗುಣಕಿ ಸೇರಿದಂತೆ ಇತರರು ಭಾಗವಹಿಸಿದ್ದರು.