15 ಸಾವಿರಕ್ಕೆ ಜೋಡಿಕೊಲೆ ಆರೋಪಿಗಳ ಸೆರೆ

ಬೆಂಗಳೂರು,ನ.೧೨-ಹದಿನೈದು ಸಾವಿರ ರೂಗಳ ವಿಚಾರವಾಗಿ ನಡೆದ ಜಗಳದಲ್ಲಿ ಜೋಡಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಅತ್ತಿಬೆಲೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಮಿಳುನಾಡಿನ ಹೊಸೂರು ಮೂಲದ ಅರುಣ್ ಕುಮಾರ್, ಆನೇಕಲ್ ತಾಲ್ಲೂಕಿನ ಮಾರನಾಯಕನಹಳ್ಳಿಯ ಲಕ್ಷ್ಮೀ ನಾರಾಯಣ್, ಅತ್ತಿಬೆಲೆಯ ರಾಚಮಾನಹಳ್ಳಿಯ ಸುಮನ್ ಬಂಧಿತ ಆರೋಪಿಗಳಾಗಿದ್ದಾರೆ ಎಂದು ಗ್ರಾಮಾಂತರ ಎಸ್ ಪಿ ಡಾ.ವಂಶಿಕೃಷ್ಣ ತಿಳಿಸಿದ್ದಾರೆ.
ಕಳೆದ ಅ. ೨೪ರಂದು ಕೊರಮಂಗಲ ಮೂಲದ ಅತ್ತಿಬೆಲೆ ನಿವಾಸಿ ದೀಪಕ್ ಕುಮಾರ್ ಹಾಗೂ ಮಾಯಸಂದ್ರ ದೊರೆ ಭಾಸ್ಕರ್ ಸೇರಿ ಇಬ್ಬರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಜೋಡಿ ಕೊಲೆ ಮಾಡಲಾಗಿತ್ತು.
ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡ ಅತ್ತಿಬೆಲೆ ಪೊಲೀಸ್ ಇನ್ಸ್‌ಪೆಕ್ಟರ್ ವಿಶ್ವನಾಥ್ ಮತ್ತವರ ಸಿಬ್ಬಂದಿ ೨೦ ದಿನಗಳಲ್ಲಿ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ದೊರೆ ಭಾಸ್ಕರ್‌ಗೆ ಫೈನಾನ್ಸ್ ನೀಡಿದ್ದ ತಮಿಳುನಾಡಿನ ಬೇಗೆನಹಳ್ಳಿಯ ಅರುಣ್ ಕುಮಾರ್ ಪ್ರಮುಖ ಆರೋಪಿಯಾಗಿದ್ದಾನೆ. ಆರೋಪಿಗಳ ಪತ್ತೆಗಾಗಿ ಆನೇಕಲ್ ಉಪವಿಭಾಗದ ಡಿವೈಎಸ್‌ಪಿ ಮಲ್ಲೇಶ್ ನೇತೃತ್ವದಲ್ಲಿ ಮೂರು ತಂಡ ರಚಿಸಲಾಗಿತ್ತು.
ಪ್ರಕರಣ ಬೆನ್ನಟ್ಟಿದ ಪೊಲೀಸರು ಫೈನಾನ್ಸ್ ಮಾಡುತ್ತಿದ್ದ ಅರುಣ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆಯ ರಹಸ್ಯ ಹೊರಬಿದ್ದಿದೆ. ಕೊಲೆಯಾದ ದೊರೆ ಭಾಸ್ಕರ್, ಆರೋಪಿ ಅರುಣ್ ಕುಮಾರ್ ಬಳಿ ೧೫ ಸಾವಿರ ಸಾಲ ಪಡೆದುಕೊಂಡಿದ್ದ, ಆದರೆ, ಸಾಲ ವಾಪಸ್ ಹಿಂತಿರುಗಿಸುವ ವಿಚಾರದಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ.
ಸಂದಾನಕ್ಕಾಗಿ ದೊರೆ ಭಾಸ್ಕರ್ ಮತ್ತು ಸ್ನೇಹಿತ ದೀಪಕ್ ಕುಮಾರ್‌ನನ್ನು ಅರುಣ್ ಕುಮಾರ್ ಕರೆಸಿದ್ದಾನೆ.
ಈ ವೇಳೆ ಮಾತಿಗೆ ಮಾತು ಬೆಳೆದು ಜೋಡಿ ಕೊಲೆಯಲ್ಲಿ ಅಂತ್ಯವಾಗಿದೆ. ಚಾಕು, ಮದ್ಯದ ಬಾಟಲಿ ಮತ್ತು ಕಲ್ಲಿನಿಂದ ಹೊಡೆದು ಕೊಲೆ ಮಾಡಲಾಗದ್ದು ಅದನ್ನು ಆಧರಿಸಿ ತನಿಖೆಯನ್ನು ಕೈಗೊಂಡು ಬಂಧಿಸಲಾಗಿದೆ.