15 ವರ್ಷಗಳ ಹಿಂದೆ ತನಗಾಗಿ ತೋಡಿದ್ದ ಗುಂಡಿಯಲ್ಲಿ ಆತನ ಅಂತ್ಯಸಂಸ್ಕಾರ

ಕಲಬುರಗಿ:ಜೂ.29: ತನ್ನ ಸಾವಿನ ಬಳಿಕ ಯಾರಿಗೂ ಹೊರೆಯಾಗಬಾರದೆಂಬ ಉದ್ದೇಶದಿಂದ ಕಳೆದ ಹದಿನೈದು ವರ್ಷಗಳ ಹಿಂದೆಯೇ ಗುಂಡಿ ತೋಡಿದ್ದ (ಸಮಾಧಿ) ವ್ಯಕ್ತಿ ನಿಧನರಾಗಿದ್ದು, ಇದೀಗ ಅವರೇ ತೋಡಿದ ಗುಂಡಿಯಲ್ಲಿ ಅಂತ್ಯಸಂಸ್ಕಾರವನ್ನು ಗ್ರಾಮಸ್ಥರು ಮಾಡಿದ ಘಟನೆ ಜೇವರ್ಗಿ ತಾಲ್ಲೂಕಿನ ಹಿಪ್ಪರಗಾ ಗ್ರಾಮದಲ್ಲಿ ವರದಿಯಾಗಿದೆ.
ಸಿದ್ದಪ್ಪ (96) ಎಂಬ ವ್ಯಕ್ತಿಯೇ ತಾನು ತೋಡಿದ ಗುಂಡಿಯಲ್ಲಿ ಅಂತ್ಯಸಂಸ್ಕಾರಕ್ಕೆ ಒಳಗಾಗಿದ್ದಾನೆ. ಕಳೆದ ಹದಿನೈದು ವರ್ಷಗಳ ಹಿಂದೆ ಸಿದ್ದಪ್ಪ ಒಟ್ಟು ಎರಡು ಸಮಾಧಿಗಳನ್ನು ತೋಡಿದ್ದರು. ಒಂದು ಸಮಾಧಿ ತನ್ನ ಪತ್ನಿ ಶ್ರೀಮತಿ ನೀಲಮ್ಮಳಿಗಾಗಿ, ಇನ್ನೊಂದು ಸಮಾಧಿ ತನಗಾಗಿ ತೋಡಿಕೊಂಡಿದ್ದ. ಪತಿ, ಪತ್ನಿ ಮರಣದ ನಂತರ ಆ ಸಮಾಧಿಗಳಲ್ಲಿಯೇ ಅಂತ್ಯಕ್ರಿಯೆ ಮಾಡಲು ಸಿದ್ದಪ್ಪ ಗ್ರಾಮಸ್ಥರಿಗೆ ಹೇಳಿದ್ದ.
ಕಳೆದ ಆರು ವರ್ಷಗಳ ಹಿಂದೆಯೇ ಪತ್ನಿ ಶ್ರೀಮತಿ ನೀಲಮ್ಮ ಅಸುನೀಗಿದ್ದು, ಸಿದ್ದಪ್ಪ ಹಾಗೂ ಗ್ರಾಮಸ್ಥರು ಮೊದಲೇ ತೋಡಿದ್ದ ಸಮಾಧಿಯಲ್ಲಿಯೇ ಆಕೆಯ ಅಂತ್ಯಕ್ರಿಯೆ ಮಾಡಿದರು. ಈಗ ಸಿದ್ದಪ್ಪ ಅಸುನೀಗಿದ್ದು, ಆತನ ಕೋರಿಕೆಯಂತೆ ಪತ್ನಿಯ ಸಮಾಧಿಯ ಪಕ್ಕದಲ್ಲಿಯೇ ಇದ್ದ ಸಮಾಧಿಯಲ್ಲಿಯೇ ಸಿದ್ದಪ್ಪನ ಅಂತ್ಯಕ್ರಿಯೆಯನ್ನು ಗ್ರಾಮಸ್ಥರು ಮಾಡಿದ್ದಾರೆ.