15 ದಿನಗಳಿಂದ ಟಿ.ಸಿ.ದುರಸ್ತಿ ಕಾರ್ಯಕೈಗೊಳ್ಳದ ಅಧಿಕಾರಿಗಳು

ಹನೂರು: ಏ.30: ಕಳೆದ 15 ದಿನಗಳಿಂದ ಟಿ.ಸಿ.ಸುಟ್ಟು ಹೋಗಿದ್ದರು ಸೆಸ್ಕ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಟಿ.ಸಿ.ದುರಸ್ತಿ ಕಾರ್ಯಕೈಗೊಳ್ಳದ ಹಿನ್ನಲೆಯಲ್ಲಿ ಬೆಳೆಗಳು ಒಣಗುತ್ತಿರುವುದರಿಂದ ರೈತರು ಕಂಗಾಲಾಗಿರುವ ಘಟನೆ ಹುಲ್ಲೇಪುರ ಸರ್ವೇ ನಂಬರ್ ಜಮೀನುಗಳಲ್ಲಿ ಕಂಡು ಬಂದಿದೆ.
ಹನೂರು ಪಟ್ಟಣ ಸಮೀಪದ ಪೊಲೀಸ್ ಕ್ವಾಟ್ರಸ್ ಬಳಿಯ ಜಾನಕಮ್ಮ ತೋಟದಲ್ಲಿರುವ ಟಿ.ಸಿ.ಕೆಟ್ಟು ನಿಂತಿರುವ ಪರಿಣಾಮ ಈ ಟಿ.ಸಿ.ವ್ಯಾಪ್ತಿಗೆ ಒಳಪಡುವ ಜಮೀನುಗಳಲ್ಲಿ ರೈತರು ಬೆಳೆಯಲಾಗಿರುವ ಬೆಳೆ ನೀರಿಲ್ಲದೇ ಬಿಸಿಲಿನ ಬೇಗೆಗೆ ಬಾಡಿ ಬೆಂಡಾಗಿವೆ.
ಜನಕರಾಜು, ಜಗನ್ನಾಥ, ಈಶ್ವರ್, ಶ್ರೀನಿವಾಸ, ರಾಜು ಎಂಬುವರಿಗೆ ಸೇರಿದ ಜಮೀನುಗಳಲ್ಲಿ ಬೆಳೆಯಲಾಗಿರುವ ಬಾಳೆ, ಕಬ್ಬು, ಮುಸುಕಿನ ಜೋಳ, ಸೂರ್ಯಕಾಂತಿ, ಸುಗಂಧರಾಜ ಹೂ, ಬೆಳೆಗಳು ಒಣಗುತ್ತಿದ್ದು ಸೆಸ್ಕ್ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಬೇಜವಬ್ದಾರಿತನದಿಂದ ರೈತರು ಬೆಳೆದಿರುವ ಬೆಳೆಗಳು ಒಣಗುವಂತಾಗಿದ್ದು, ರೈತರು ಲಕ್ಷಾಂತರ ರೂ.ಗಳನ್ನು ವ್ಯಯಿಸಿ ಮುಂದೇನೂ ಎಂಬ ಚಿಂತೆಯಲ್ಲಿ ಕಾಲ ಕಳೆಯುವಂತಾಗಿದೆ.
ವಿದ್ಯುತ್ ಕೊರತೆಯನ್ನು ಅನುಭವಿಸುತ್ತಿರುವ ಬಗ್ಗೆ ನೊಂದ ರೈತ ಈಶ್ವರನ್ ಮಾತನಾಡಿ, ಕಳೆದ 15 ದಿನಗಳಿಂದ ಟಿ.ಸಿ.ಕೆಟ್ಟು ನಿಂತಿರುವ ಬಗ್ಗೆ ಸೆಸ್ಕ್ ಅಧಿಕಾರಿಗಳಿಗೆ ತಿಳಿಸಿದ್ದರೂ ಇಲ್ಲಿಯವರೆಗೆ ದುರಸ್ಥಿ ಕಾರ್ಯ ಮಾಡಿಲ್ಲ. ಇದರಿಂದ ಬೆಳೆಗಳು ಒಣಗುವಂತೆ ಆಗಿದೆ.
ಜನ ಜಾನುವಾರುಗಳಿಗೆ ಕುಡಿಯುವ ನೀರು ಇಲ್ಲದಂತಾಗಿದ್ದು, ಸಮೀಪದ ಅಗ್ನಿಶಾಮಕ ದಳ ಠಾಣೆ ಹಾಗೂ ಆರ್.ಎಸ್.ದೊಡ್ಡಿಗೆ ಹೋಗಿ ನೀರನ್ನು ಹೊತ್ತು ತರಬೇಕಾಗಿದೆ. ಆದ್ದರಿಂದ ಸಂಬಂಧಪಟ್ಟವರು ಕೂಡಲೇ ನಮಗೆ ವಿದ್ಯುತ್ ಸೌಕರ್ಯವನ್ನು ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.