15 ದಿನಗಳಲ್ಲಿ ಅಂಗಡಿ, ಮುಂಗಟ್ಟುಗಳಲ್ಲಿ ಕನ್ನಡ ನಾಮಫಲಕಗಳು ಕಡ್ಡಾಯಗೊಳ್ಳದಿದ್ದಲ್ಲಿ ಹೆದ್ದಾರಿ ಬಂದ್ ಚಳುವಳಿ

ಕಲಬುರಗಿ,ಜು.20: ಇನ್ನು ಹದಿನೈದು ದಿನಗಳಲ್ಲಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿನ ಎಲ್ಲ ಅಂಗಡಿ, ಮುಂಗಟ್ಟುಗಳಲ್ಲಿ ಕನ್ನಡ ನಾಮಫಲಕಗಳನ್ನು ಕಡ್ಡಾಯಗೊಳಿಸದೇ ಹೋದಲ್ಲಿ ಹೆದ್ದಾರಿ ಬಂದ್ ಚಳುವಳಿಯನ್ನು ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಅಧ್ಯಕ್ಷ ಆನಂದ್ ದೊಡ್ಡಮನಿ ಅವರು ಇಲ್ಲಿ ಹೇಳಿದರು.
ಬುಧವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಕನ್ನಡ ನಾಮಫಲಕಗಳಿಗೆ ಆಗ್ರಹಿಸಿ ಅನೇಕ ಬಾರಿ ಹೋರಾಟ ಮಾಡಿದರೂ ಸಹ ಮಹಾನಗರ ಪಾಲಿಕೆಯು ನಿರ್ಲಕ್ಷಿಸುತ್ತ ಬಂದಿದೆ. ಹೀಗಾಗಿ ಕೊನೆಯ ಗಡುವನ್ನು ಪಾಲಿಕೆಗೆ ಕೊಡುತ್ತಿದ್ದೇವೆ. ಒಂದು ವೇಳೆ ಗಡುವಿನಲ್ಲಿ ಕ್ರಮಗಳನ್ನು ಕೈಗೊಳ್ಳದೆ ಹೋದಲ್ಲಿ ನಂತರ ನಗರದ ಹೊರವಲಯದಲ್ಲಿರುವ ನಾಲ್ಕೂ ಹೆದ್ದಾರಿಗಳನ್ನು ಬಂದ್ ಮಾಡುವ ಮೂಲಕ ಉಗ್ರ ಪ್ರತಿಭಟನೆ ರೂಪಿಸಲಾಗುವುದು ಎಂದು ಎಚ್ಚರಿಸಿದರು.
ನಗರದ ಪಾಲಿಕೆಯ ವ್ಯಾಪ್ತಿಯಲ್ಲಿ ಅನೇಕ ಅಂಗಡಿ, ಮುಂಗಟ್ಟುಗಳಲ್ಲಿ ಕೇವಲ ಆಂಗ್ಲ ನಾಮಫಲಕಗಳನ್ನು ಹಾಕಲಾಗಿದೆ. ಕನ್ನಡ ನಾಮಫಲಕಗಳು ಇಲ್ಲ. ಹೀಗಾಗಿ ಆಂಗ್ಲ ನಾಮಫಲಕಗಳೊಂದಿಗೆ ಕನ್ನಡ ನಾಮಫಲಕಗಳನ್ನೂ ಸಹ ಅಳವಡಿಸಲು ಪಾಲಿಕೆಯು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಈ ಹಿಂದೆ ಗಡುವು ನೀಡಿದ್ದರೂ ಸಹ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಹೀಗಾಗಿ ಆಂಗ್ಲ ನಾಮಫಲಕಗಳಿಗೆ ಮಸಿ ಬಳೆಯುವಂತಹ ಹೋರಾಟ ಮಾಡಿದೆವು. ಪೋಲಿಸರು ಅದನ್ನೂ ಸಹ ತಡೆದರು ಎಂದು ಅಸಮಾಧಾನ ಹೊರಹಾಕಿದ ಅವರು, ಕೂಡಲೇ ಮಹಾನಗರ ಪಾಲಿಕೆಯವರು ಕನ್ನಡ ನಾಮಫಲಕಗಳ ಕಡ್ಡಾಯ ಆದೇಶವನ್ನು ಹೊರಡಿಸಿ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಸುರೇಶ್ ಹೊಸಮನಿ, ಸಿದ್ದಣಗೌಡ ಪಾಟೀಲ್, ವಾಸವಿ ಕಡಗಂಚಿ, ಸರಸ್ವತಿ ನೀಲಮಣಿ ಮುಂತಾದವರು ಉಪಸ್ಥಿತರಿದ್ದರು.