15 ಇರಾನಿ ಮೀನುಗಾರರ ಬಿಡುಗಡೆಗೆ ಹೈಕೋರ್ಟ್ ಆದೇಶ

ಬೆಂಗಳೂರು, ಜ.8- ದೇಶದ ಜಲ ಗಡಿಯೊಳಗೆ ಅಕ್ರಮವಾಗಿ ಪ್ರವೇಶಿಸಿದ ಆರೋಪದಡಿ ಬಂಧನಕ್ಕೊಳಗಾಗಿದ್ದ 15 ಮಂದಿ ಇರಾನಿ ಪ್ರಜೆಗಳ ವಿರುದ್ಧ ದಾಖಲಿಸಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ ಎಂದು ವರದಿಯಾಗಿದೆ.

ಪ್ರಕರಣ ರದ್ದುಪಡಿಸುವಂತೆ ಕೋರಿ ಅಬೂಬಕರ್ ಅನ್ಸಾರಿ ಮಿಯಾ, ಮೂಸಾ ದೆಹದಾನಿ ಸೇರಿ 15 ಮಂದಿ ಇರಾನಿ ಪ್ರಜೆಗಳು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋಂವಿಂದರಾಜ್ ಅವರಿದ್ದ ಏಕಸದಸ್ಯ ವಿಚಾರಣೆ ನಡೆಸಿದ ಪೀಠವೂ, ಅರ್ಜಿಗಳನ್ನು ಭಾಗಶ ಮಾನ್ಯ ಮಾಡಿ ಬಂಧಿತರ ವಿರುದ್ಧದ ಪ್ರಕರಣವನ್ನು ರದ್ದುಪಡಿಸಿತು.

2019ನೇ ಸಾಲಿ‌ನ ಅಕ್ಟೋಬರ್ 21ರಂದು ದೇಶದ ಜಲ ಗಡಿ ರೇಖೆ ದಾಟಿ ಬಂದು ಲಕ್ಷದ್ವೀಪದ ಬಳಿ ಮೀನುಗಾರಿಕೆ ಮಾಡುತ್ತಿದ್ದ ಇರಾನ್ ದೇಶದ 15 ಮೀನುಗಾರರನ್ನು ನೌಕಾಪಡೆ ವಶಕ್ಕೆ ಪಡೆದುಕೊಂಡಿತ್ತು. ಈ ಸಂಬಂಧ ಕೋಸ್ಟ್‌ ಗಾರ್ಡ್ ಡೆಪ್ಯೂಟಿ ಕಮಾಂಡೆಂಟ್ ಹಾಗೂ ಬೋರ್ಡಿಂಗ್ ಅಧಿಕಾರಿ ಕುಲದೀಪ್ ಶರ್ಮಾ ನೀಡಿದ ದೂರಿನ ಮೇರೆಗೆ ಕರಾವಳಿ ಕಾವಲು ಪಡೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ತದನಂತರ, ಇವರ ವಿರುದ್ಧ ಮಂಗಳೂರಿನ 3ನೇ ಜೆಎಂಎಫ್‌ಸಿ ಕೋರ್ಟ್‌ನಲ್ಲಿ ವಿಚಾರಣೆ ನಡೆದಿತ್ತು. ಕೊರೋನಾ ಹಿನ್ನೆಲೆಯಲ್ಲಿ ಎಲ್ಲರನ್ನೂ ಬೆಂಗಳೂರು ಕಾರಾಗೃಹಕ್ಕೆ ವರ್ಗಾಯಿಸಲಾಗಿತ್ತು.

ಬಂಧನದ ಬಳಿಕ ಮೀನುಗಾರರು ತಮ್ಮ ವಿರುದ್ಧದ ಪ್ರಕರಣವನ್ನು ರದ್ದುಪಡಿಸಿ ಬಿಡುಗಡೆ ಮಾಡುವಂತೆ ಕೋರಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿದಾರರ ಪರ ವಾದ ಮಂಡಿಸಿದ್ದ ವಕೀಲರು, ಮೀನುಗಾರಕೊರೋನಾದ ಜಲ ಗಡಿಯೊಳಗೆ ಅರಿವಿಲ್ಲದೇ ಪ್ರವೇಶಿಸಿದ್ದಾರೆ. ಭಾರತದ ಮೀನುಗಾರರು ಕೂಡ ಹಲವು ಬಾರಿ ವಿದೇಶಿ ಜಲ ಗಡಿ ಪ್ರವೇಶಿದ್ದಾರೆ.
ಉದ್ದೇಶಪೂರ್ವಕವಾಗಿ ಅಥವಾ ದುರುದ್ದೇಶದಿಂದ ಬಂದಿಲ್ಲವಾದ್ದರಿಂದ ಮೀನುಗಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿರುವುದು ಸರಿಯಲ್ಲ.

ಈ ಸಂದರ್ಭಗಳಲ್ಲಿ ಆ ದೇಶಗಳು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿದ ನಿದರ್ಶನಗಳು ವಿರಳ. ಆದ್ದರಿಂದ ಇರಾನಿ ದೇಶದ ಮೀನುಗಾರರ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಪಡಿಸಬೇಕು ಪೀಠಕ್ಕೆ ಕೋರಿದರು ಎನ್ನಲಾಗಿದೆ.