144ನೇ ತಿಂಗಳ ಅನುಭವ ಮಂಟಪ ಕಾರ್ಯಕ್ರಮ

ಬೀದರ :ಸೆ.14:ನಗರದ ಪ್ರಸಾದ ನಿಲಯದಲ್ಲಿ 144ನೇ ತಿಂಗಳ ಅನುಭವ ಮಂಟಪ ಕಾರ್ಯಕ್ರಮ ಜರುಗಿತು.
ಬಸವಕಲ್ಯಾಣ ಅನುಭವ ಮಂಟಪ ಅಧ್ಯಕ್ಷರಾದ ಪರಮ ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಾ, ಜಗತ್ತಿನ ಯಾವುದೇ ಧರ್ಮದಲ್ಲಿ ಸಮಾನತೆಯ ತತ್ವ ಕಾಣಲಾರದ ಸಮಯದಲ್ಲಿ 12ನೇ ಶತಮಾನದಲ್ಲಿ ಬಸವಣ್ಣನವರು ಸಮಾನತೆಗಾಗಿ ವೈಚಾರಿಕ ಕ್ರಾಂತಿ ಮಾಡಿ ಸಕಲ ಮಾನವ ಜೀವಿಗಳ ಕಲ್ಯಾಣಕ್ಕಾಗಿ ಸಮಾನತೆಯನ್ನು ಲಿಂಗಾಯತ ಧರ್ಮದಿಂದ ಜಗತ್ತಿಗೆ ತಂದುಕೊಟ್ಟಿದ್ದಾರೆ.
ಮುಂದುವರೆದು ಮಾತನಾಡುತ್ತ ಶರಣೆ ಸತ್ಯಕ್ಕ ಕಸಗೂಡಿಸುವ ಕಾಯಕ ಮಾಡಿ ತನ್ನ ನಿಜ ಸ್ವರೂಪ ತೋರಿಸಿದ್ದಾರೆ. ಅದೇ ರೀತಿಯಾಗಿ ಶರಣ ಹೂಗಾರ ಮಾದಯ್ಯಾನವರು ಹೂ ಮಾರುವ ಕಾಯಕ ಮಾಡಿ ಜೀವ ಭಾವ ಹೋಗಿ ಶಿವ ಭಾವ ಬರುವಂತೆ ಹೂವಿನಂತೆ ಪರಿಮಳ ಬೀರುವ ಬದುಕು ನಮ್ಮದ್ದಾಗಬೇಕೆಂದು ಜನಮಾನಸಕ್ಕೆ ಮುಟ್ಟುವಂತೆ ಕಾಯಕ ಮಾಡಿದ್ದಾರೆ. ದೇವರೇ ನಿನ್ನ ಸ್ವರ್ಗಕ್ಕಿಂತ ನನ್ನ ಕಾಯಕ ಶ್ರೇಷ್ಠವೆಂದು ಶರಣ ಮಾದಯ್ಯಾ ನವರು ಕಾಯಕ ಶ್ರೇಷ್ಠತೆಯ ಸಂದೇಶವನ್ನು ಲೋಕಕ್ಕೆ ನೀಡಿದ್ದಾರೆ ಎಂದು ನುಡಿದರು.
ಬೀದರ ಜಂಟಿ ಕೃಷಿ ನಿರ್ದೇಶಕರಾದ ಶರಣ ಜಿ.ಎಚ್. ತಾರಾಮಣಿಯವರು ಬಸವಜ್ಯೋತಿ ಪ್ರಜ್ವಲನೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ ಪ್ರತಿಯೊಬ್ಬ ಸಮಾಜದಲ್ಲಿ ಅಳಲು ಸೇವೆ ಮಾಡುವ ಮನೋಭಾವನೆ ಉಳ್ಳವರಾಗಬೇಕು, ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ವದ್ದೇವರು ತ್ರಿವಿಧ ದಾಸೋಹಗಳಾಗಿದ್ದು, ಅನಾಥ, ಬಡ ಮಕ್ಕಳ ಪ್ರತಿಭಾವಂತ ಮಕ್ಕಳಿಗೆ ಜ್ಞಾನ ದಾಸೋಹ ನೀಡುವ ಸೇವೆ ಮಾಡುತ್ತಿರುವುದು ಪ್ರಶಂಸನೀಯವಾದುದು. ಹಗಲು ರಾತ್ರಿಯೆನ್ನದೆ ಬಸವತತ್ವದ ಸಂದೇಶವನ್ನು ಜಗತ್ತಿಗೆ ಮುಟ್ಟಿಸುವಂತಹ ಮಹಾಕಾರ್ಯ ಮಾಡುತ್ತಿರುವುದು ಅವರೊಬ್ಬರು ಬಸವತತ್ವ ಪರಿಪಾಲಕರಾಗಿದ್ದಾರೆ ಎಂದು ತಿಳಿಸಿದರು.
ಸಾಹಿತಿಗಳಾದ ಶರಣೆ ಜೈಶ್ರೀ ಸುಕಾಲೆಯವರು ವೀರ ಶರಣೆ ಗುಡ್ಡಾಪುರ ದಾನಮ್ಮರವರ ಬದುಕು ಮತ್ತು ಆಧ್ಯಾತ್ಮಿಕ ಸಾಧನೆ ಕುರಿತು ಅನುಭಾವ ನುಡಿ ಮಂಡಿಸುತ್ತಾ ದಾನಮ್ಮನವರು ಇಷ್ಟ ಲಿಂಗ ಪೂಜೆ ಆರಾಧಕರಾಗಿದ್ದು, ಅಂತಹ ಸಂದರ್ಭದಲ್ಲಿ ಕುಷ್ಟ ರೋಗಿಗಳ ಬೆರಳು ಗಾಯಗಳಾಗಿದ್ದ ಸಮಯದಲ್ಲಿ ಆ ರೋಗಿಗಳ ಗಾಯಾಳುಗಳಿಗೆ ಮುಟ್ಟಿ ಆರೋಗಣೆ ಮಾಡುತ್ತಿದ್ದರು. ಅವರು ಅಂತರಂಗದ ಅರಿವನ್ನು ಜಾಗೃತಗೊಳಿಸಲು ಇಷ್ಟಲಿಂಗ ಪೂಜೆ ಅಗತ್ಯವಾದುದ್ದು, ಇಡೀ ಜೀವನವನ್ನು ಇಷ್ಟಲಿಂಗ ಪೂಜೆಯಲ್ಲಿ ತೊಡಗಿಸಿಕೊಂಡು, ವಚನಗಳನ್ನು ಅಧ್ಯಯನ ಮಾಡಿ, ವಚನಗಳ ಪ್ರಚಾರದ ಜೊತೆ ವಚನ ಸಂರಕ್ಷಣೆ ಮಾಡಿರುವ ವೀರಶೂರ ಶರಣೆ ಗುಡ್ಡಾಪುರದ ದಾನಮ್ಮರವರಾಗಿದ್ದಾರೆ ಎಂದು ವಿಷಯ ಪ್ರತಿಪಾದಿಸಿದರು.
ಇದೆ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ಬೀದರ ಜಿಲ್ಲೆಯ ರಾಜಕೀಯ ಧುರಿಣರಾದ ಸಂಜಯ ಖೇಣಿ, ಗೌರವ ಉಪಸ್ಥಿತರಾದ ಗೋರಖನಾಥರೆಡ್ಡಿ ಕೊತ್ತಕಾಪೆ, ಸಂಗಾರೆಡ್ಡಿ ಜಿಲ್ಲೆಯ ಲಿಂಗಾಯತ ಸಮಾಜದ ಪ್ರಧಾನ ಕಾರ್ಯದರ್ಶಿಗಳಾದ ಲತಾ ಜಯಪ್ರಕಾಶ ಅಣಮಶೆಟ್ಟಿ, ಜಹೀರಾಬಾದ ಲಿಂಗಾಯತ ಸಮಾಜದ ಮಹಿಳಾ ಘಟಕದ ಅಧ್ಯಕ್ಷರಾದ ಪದ್ಮಾಜಾ, ಪದಾಧಿಕಾರಿಗಳಾದ ಶಿವರಾಜು, ಉದಯ, ಚಂದ್ರಶೇಖರ, ವೀರಶರಣಪ್ಪಾ ಮತ್ತು ಶಿವಕುಮಾರ ರವರನ್ನು ಶ್ರೀಗಳು ಸನ್ಮಾನಿಸಿದರು.
ದಾಸೋಹಿಗಳಾದ ಶರಣೆ ಗೋದಾವರಿ ಬಿರಾದಾರ ರವರು ಬಸವಗುರು ಪೂಜೆ ಮತ್ತು ಪೂಜ್ಯ ಶ್ರೀ ಡಾ|| ಚನ್ನಬಸವ ಪಟ್ಟದ್ದೇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಹಿರೇಮಠ ಸಂಸ್ಥಾನ ಭಾಲ್ಕಿಯ ಪೂಜ್ಯ ಶ್ರೀ ಮಹಾಲಿಂಗ ಸ್ವಾಮಿಗಳು ಸಮ್ಮುಖ ವಹಿಸಿದರು. ಶರಣ ಚನ್ನಬಸಪ್ಪ ನೌಬಾದೆ, ಕು|| ವಚನಶ್ರೀ ನೌಬಾದೆ, ಚಂದ್ರಕಲಾ ಮತ್ತು ರೇವಣಪ್ಪಾ ಮೂಲಗೆ ಅವರು ವಚನ ಸಂಗೀತ ನಡೆಸಿಕೊಟ್ಟರು.
ಉಮಾಕಾಂತ ಮೀಸೆ ಸ್ವಾಗತ ಕೋರಿದರೆ, ಲಕ್ಷ್ಮೀ ಬಿರಾದಾರ ನಿರೂಪಿಸಿದರು, ನೀಲಾಂಬಿಕಾ ಕೌಠಾ ರವರು ವಂದಿಸಿದರು. ಪ್ರಮುಖರಾದ ಶರಣೆ ಸುವರ್ಣಾ ಚಿಮಕೋಡೆ, ಶರಣಪ್ಪಾ ಚಿಮಕೋಡೆ, ಶ್ರೀಕಾಂತ ಬಿರಾದಾರ, ಸಂಗ್ರಾಮಪ್ಪಾ ಬಿರಾದಾರ, ನೀಲಕಂಠ ಬಿರಾದಾರ, ಮಲ್ಲಿಕಾರ್ಜುನ ಹುಡಗೆ, ಗುರುನಾಥ ಬಿರಾದಾರ ಹಾಗೂ ಅನೇಕ ಶರಣ-ಶರಣೆಯರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ರಾವ ಬಹಾದ್ದೂರ ಶಾಲೆಯ ಮಕ್ಕಳಿಂದ ವಚನ ನೃತ್ಯ ಪ್ರದರ್ಶಿಸಲಾಯಿತು.
ಪ್ರಸಾದ ನಿಲಯದ ವ್ಯವಸ್ಥಾಪಕರಾದ ಶ್ರೀಕಾಂತ ಸ್ವಾಮಿ ಕಾರ್ಯಕ್ರಮ ಸಂಘಟಿಸಿದರು.