ಸಂಜೆವಾಣಿ ವಾರ್ತೆ
ಸಂಡೂರು: ಜು: 12: ಭಾರತ 142 ಕೋಟಿ ಜನಸಂಖ್ಯೆ ಹೊಂದಿದ್ದು ಇದರಿಂದ ಹಲವಾರು ಸಮಸ್ಯೆಗಳ ಜೊತೆಗೆ ಯೋಜನೆ ಅನುಷ್ಠಾನ ಮಾಡುವುದು ಸಹ ದುಸ್ತರವಾಗುತ್ತದೆ ಅದ್ದರಿಂದ ನಿಯಂತ್ರ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಲಿ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಕೆ. ಶಿವಪ್ಪ ತಿಳಿಸಿದರು.
ಅವರು ತಾಲೂಕಿನ ಕುರೇಕುಪ್ಪ ಪುರಸಭೆಯ ವ್ಯಾಪ್ತಿಯ ತೋರಣಗಲ್ಲು ರೈಲ್ವೆ ನಿಲ್ದಾಣ ಗ್ರಾಮದಲ್ಲಿ “ವಿಶ್ವ ಜನಸಂಖ್ಯಾ ದಿನಾಚರಣೆ” ಕುರಿತು ಜಾಗೃತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಜಗತ್ತು ಈಗ ಅಂದಾಜು 8 ಬಿಲಿಯನ್ ದಾಟಿದೆ, ಭಾರತ 142 ಕೋಟಿ ಜನಸಂಖ್ಯೆ ಹೊಂದಿ ಹೆಚ್ಚು ಜನಸಂಖ್ಯೆ ಹೊಂದಿರುವ ಹತ್ತು ದೇಶಗಳಲ್ಲಿ ಎರಡನೇ ಸ್ಥಾನದಲ್ಲಿದೆ, ನೆರೆಯ ಚೀನಾ 145 ಕೋಟಿ ಹೊಂದಿ ಮೊದಲ ಸ್ಥಾನದಲ್ಲಿದೆ, ನಿನ್ನೆ ಮೊನ್ನೆ ಭಾರತವೇ ಮೊದಲ ಸ್ಥಾನದಲ್ಲಿದೆ ಎಂಬ ಸುದ್ದಿಯೂ ಹೊರಬಂದಿತ್ತು, 1881 ರಲ್ಲಿ ಕುಟುಂಬ ಕಲ್ಯಾಣ ಕಾನ್ಸೆಪ್ಟ್ ಕೊಟ್ಟಿದ್ದೆ ಹೆಮ್ಮೆಯ ನಮ್ಮ ಮೈಸೂರು ರಾಜ್ಯ, ನಂತರ ಜಗತ್ತು 5 ಬಿಲಿಯನ್ ದಾಟಿದ್ದರಿಂದ 1989 ರಿಂದ ಜನಸಂಖ್ಯೆ ನಿಯಂತ್ರಣ ಮಾಡಲು “ವಿಶ್ವ ಜನಸಂಖ್ಯಾ ದಿನಾಚರಣೆ”ಯನ್ನು ಜುಲೈ 11 ರಂದು ಆಚರಿಸಿ ಜನಸಂಖ್ಯಾ ಹೊರೆಯಿಂದ ಉಂಟಾಗುವ ದುಷ್ಪರಿಣಾಮಗಳನ್ನು ಅರ್ಥಮಾಡಿಸಲು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ, ಜನಸಂಖ್ಯಾ ನಿಯಂತ್ರಣ ಮಾಡದಿದ್ದರೆ ಸಮಸ್ಯೆಗಳ ಸರಮಾಲೆ ಸೃಷ್ಟಿಯಾಗಲಿದೆ, ಜನಸಂಖ್ಯೆ ಹೆಚ್ಚಾದಷ್ಟು ಬಡತನ, ನಿರುದ್ಯೋಗ, ಆಹಾರ ,ವಸತಿ ಹೀಗೆ ಹಲವಾರು ಸಮಸ್ಯೆಗಳು ಉದ್ಭವಿಸಲಿವೆ, ಪ್ರತಿ ಕುಟುಂಬಕ್ಕೆ ಗಂಡಾಗಲಿ ಹೆಣ್ಣಾಗಲಿ ಎರಡು ಮಕ್ಕಳ ಇರಬೇಕು, ಪುರುಷ ಪ್ರಧಾನ ಸಮಾಜವೆಂಬ ಹೇಳಿಕೆಯಿಂದ ಗಂಡು ಮಗು ಜನಿಸುವವರೆಗೆ ಕಾದು ಕುಳಿತ ಎಷ್ಟೋ ಕುಟುಂಬಗಳಿಗೆ ಐದಾರು ಹೆಣ್ಣು ಮಕ್ಕಳಾಗಿವೆ, ಹಲವಾರು ಮೌಢ್ಯತೆಗಳಿಗೆ ಮಣೆ ಹಾಕಿ ಹೆಚ್ಚೆಚ್ಚು ಮಕ್ಕಳನ್ನು ಪಡೆದರೆ ಕುಟುಂಬ ಪೋಷಣೆ ಹೊರೆಯಾಗಿ ಪರಿಣಮಿಸಲಿದೆ, ಕುಟುಂಬ ಕಲ್ಯಾಣ ಯೋಜನೆಯ ಸದುಪಯೋಗ ಪಡೆದುಕೊಂಡು ಮಕ್ಕಳ ಅಂತರ ಕಾಪಾಡಿಕೊಂಡು ಎರಡು ಮಕ್ಕಳ ನಂತರ ಕುಟುಂಬ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಜನಸಂಖ್ಯೆ ನಿಯಂತ್ರಿಸಬೇಕಿದೆ, ಈ ವರ್ಷ ಭಾರತದ ಘೋಷವಾಖ್ಯ “ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಕುಟುಂಬ ಯೋಜನೆಯನ್ನು ಅಳವಡಿಸಿಕೊಂಡು ಸಂತೋಷ ಮತ್ತು ಸಮೃದ್ದಿಯ ಜೀವನವನ್ನು ಆಯ್ಕೆ ಮಾಡಿಕೊಳ್ಳುತ್ತೇವೆಂದು ಪ್ರತಿಜ್ಞೆ ಮಾಡೋಣ” ಘೋಷಣೆಯಂತೆ ಕಾರ್ಯ ನಿರ್ವಹಿಸಿ ಜನಸಂಖ್ಯಾ ಸ್ಥಿರತೆ ಕಾಪಾಡೋಣ ಎಂದು ತಿಳಿಸಿದರು,
ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆ ವಿಜಯಶಾಂತಿ, ತೇಜಮ್ಮ, ಹುಲಿಗೆಮ್ಮ, ಗೋವಿಂದಮ್ಮ, ವೆಂಕಟಲಕ್ಷ್ಮಿ, ರೇಖಾ, ಮಂಜುಳಾ, ರಾಘವಯ್ಯ, ಕೇಶವಮೂರ್ತಿ, ಶಮೀರ್ ಭಾಷ, ನರಸಿಂಗಾಚಾರಿ, ರವಿ, ಪವನ್, ಶೆಟ್ಟಿನಾಯಕ, ಸ್ವಾಮಿ,ಲಕ್ಷ್ಮಿ ಇತರರು ಉಪಸ್ಥಿತರಿದ್ದರು