14 ರಂದು ವಿಶ್ವರಾಧ್ಯರ 31ನೇ ಜಾತ್ರಾ ಮಹೋತ್ಸವ

ಕಲಬುರಗಿ,ಫೆ.10-ನಗರದ ಆಳಂದ ರಸ್ತೆಯಲ್ಲಿರುವ ವಿಶ್ವರಾಧ್ಯ ದೇವಸ್ಥಾನದಲ್ಲಿ ಶ್ರೀ ಸದ್ಗುರು ವಿಶ್ವರಾಧ್ಯರ 31ನೇ ಜಾತ್ರಾ ಮಹೋತ್ಸವ ಫೆ.14 ರಂದು ಅಬ್ಬೆತುಮಕೂರಿನ ವಿಶ್ವರಾಧ್ಯ ಸಿದ್ಧ ಸಂಸ್ಥಾನ ಮಠದ ಡಾ.ಗಂಗಾಧರ ಶಿವಾಚಾರ್ಯರ ಸಾನಿಧ್ಯದಲ್ಲಿ ಜರಗುವುದು.
ಅಂದು ಬೆಳಿಗ್ಗೆ 8.30ಕ್ಕೆ ಮಲ್ಲಯ್ಯ ಶಾಸ್ತ್ರಿ ಯಳೆಗಾಂವ ಅವರಿಂದ ಮಹಾ ರುದ್ರಾಭಿಷೇಕ, ನಂತರ ಮಹಾಪ್ರಸಾದ ವಿತರಣೆ ನಡೆಯಲಿದೆ. ಸಾಯಂಕಾಲ 5 ಗಂಟೆಗೆ ಪಲ್ಲಕ್ಕಿ ಮಹೋತ್ಸವ, ಸಂಜೆ 6.30ಕ್ಕೆ ರಥೋತ್ಸವ ಜರುಗಲಿದೆ. ರಾತ್ರಿ 7 ಗಂಟೆಗೆ ಡಾ.ಗಂಗಾಧರ ಶಿವಾಚಾರ್ಯರು, ಕಡಗಂಚಿ ಹಾಗೂ ಶೇಖ್ ರೋಜಾ ಮಠದ ವೀರಭದ್ರ ಶಿವಾಚಾರ್ಯರು ಮತ್ತು ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಹಾವಿನಾಳ ಚಿರಂತಿ ಮಠದ ವಿಜಯ ಮಹಾಂತೇಶ್ವರ ಶಿವಾಚಾರ್ಯರ ಸಾನಿಧ್ಯದಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ನಾಗಲಿಂಗಯ್ಯ ಶಾಸ್ತ್ರಿಗಳು ಸ್ಥಾವರಮಠ ಅವರ ನಿರೂಪಣೆಯಲ್ಲಿ ಗವಾಯಿಗಳಾದ ಸೈದಪ್ಪ ಚೌಡಾಪೂರ ಮತ್ತು ಸಂತೋಷ ಕೋಡ್ಲಿ ಅವರ ತಬಲಾ ವಾದನದೊಂದಿಗೆ ಸಭೆ ಜರುಗಲಿದೆ.
ನಾಗೀಂದ್ರಪ್ಪ ಪಾಟೀಲ ಗೊಬ್ಬೂರ, ಸಾತಲಿಂಗಪ್ಪ ಅವರಾದ ದೇವಿ ಭಜನಾ ಮಂಡಳಿಯಿಂದ ಸಂಗೀತ ಭಜನಾ ಕಾರ್ಯಕ್ರಮ, ಕಲಾಕಾರ ಆರ್ಕೆಸ್ಟ್ರಾ ಅವರಿಂದ ರಾತ್ರಿ 9 ಗಂಟೆಗೆ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.
ಭಕ್ತಾಧಿಗಳು ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಸಂಸ್ಥಾಪಕರಾದ ಮಹಾಂತಪ್ಪ ಹಾವನಳ್ಳಿ ಪ್ರಕಟಣೆಯಲ್ಲಿ ಕೋರಿದ್ದಾರೆ.