14 ಜಿಲ್ಲೆಗಳಲ್ಲಿ ಭಾರೀ ಮಳೆ

ಬೆಂಗಳೂರು,ಏ.೩೦-ಬೇಸಿಗೆಯಿಂದ ಬಳಲಿದ್ದ ರಾಜ್ಯದ ಜನರಿಗೆ ಕಳೆದ ಎರಡು ದಿನಗಳಿಂದ ಮಳೆರಾಯ ತಂಪೇರೆಯುತ್ತಿದ್ದಾನೆ. ಇಂದು ಕೂಡ ಬೆಂಗಳೂರು ಸೇರಿದಂತೆ ರಾಜ್ಯದ ೧೪ ಜಿಲ್ಲೆಗಳಲ್ಲಿ ಮುಂದಿನ ಮೂರು ಗಂಟೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮೀಣ, ಮೈಸೂರು, ಮಂಡ್ಯ, ತುಮಕೂರು, ಕೊಡಗು, ದಾವಣಗೆರೆ, ಚಾಮರಾಜನಗರ, ಚಿತ್ರದುರ್ಗ, ಗದಗ, ಕಲಬುರಗಿ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಗಾಳಿ ಮಳೆಯಾಗುವ ಹಿನ್ನೆಲೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಾಸವಾಗಲಿದ್ದು, ಟ್ರಾಫಿಕ್ ಸಮಸ್ಯೆ, ಮರಗಳು ಉರುಳಿ ಬೀಳುವ ಸಾಧ್ಯತೆ ಇದೆ. ಹೀಗಾಗಿ ಜನರಿಗೆ ಮನೆಯಲ್ಲೇ ಉಳಿದುಕೊಳ್ಳಲು ಸಲಹೆ ನೀಡಲಾಗಿದ್ದು, ಮನೆಯ ಬಾಗಿಲು, ಕಿಟಕಿ ಮುಚ್ಚಿಡುವಂತೆ ತಿಳಿಸಿದೆ. ಹೊರ ಪ್ರದೇಶದಲ್ಲಿರುವ ಸಂದರ್ಭದಲ್ಲಿ ಮಳೆಯಿಂದ ರಕ್ಷಣೆ ಪಡೆಯಲು ಯಾವುದೇ ಕಾರಣಕ್ಕೂ ಮರದ ಕೆಳಗೆ ನಿಂತುಕೊಳ್ಳದಂತೆ ಎಚ್ಚರಿಕೆ ನೀಡಿದೆ.
ಅಲ್ಲದೆ ಮಳೆಯಾಗುವ ಸಂದರ್ಭದಲ್ಲಿ ಗೋಡೆಗಳಿಗೆ ಒರಗಿಕೊಂಡು ನಿಲ್ಲುವುದು, ವಿದ್ಯುತ್ ಕಂಬಗಳನ್ನು ಮುಟ್ಟುವುದು ಮಾಡಬಾರದು ಎಂದು ತಜ್ಞರು ಸಲಹೆ ನೀಡಿದ್ದಾರೆ. ವಾಹನ ಚಲಾಯಿಸುವ ಸಂದರ್ಭದಲ್ಲಿ ಜಾಗೃತಿ ವಹಿಸುವಂತೆ ತಿಳಿಸಿದ್ದಾರೆ.
ನಿನ್ನೆ ಕೂಡ ಬೆಂಗಳೂರಿನ ವಿಧಾನಸೌಧ, ಮೆಜೆಸ್ಟಿಕ್, ಕಾರ್ಪೊರೇಷನ್, ಕೆ.ಆರ್ ಮಾರುಕಟ್ಟೆ, ಶಾಂತಿನಗರ ಸುತ್ತಮುತ್ತ ಮಳೆಯಾಗಿದೆ. ಮಧ್ಯಾಹ್ನದ ವೇಳೆ ಮಳೆಯಾದ ಪರಿಣಾಮ ಬಿಸಿಲಿನಿಂದ ಬಳಲಿದ್ದ ಬೆಂಗಳೂರು ಕೂಲ್ ಕೂಲ್ ವಾತಾವರಣ ಕಂಡು ಬಂತು.