14 ಚಿನ್ನದ ಪದಕ ಪಡೆದ ಗ್ರಾಮೀಣ ಪ್ರತಿಭೆ ರುಕ್ಮಿಣಿ ಹಣಮಂತ್ರಾಯ:ಮಗಳ ಸಾಧನೆ ಕಂಡು ಭಾವುಕನಾದ ತಂದೆ

ಕಲಬುರಗಿ,ಜೂ.19: ಸೋಮವಾರ ಗುಲಬರ್ಗಾ ವಿ.ವಿ.ಯ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ನಡೆದ ವಿಶ್ವವಿದ್ಯಾಲಯದ 41ನೇ ಘಟಿಕೋತ್ಸವದಲ್ಲಿ ಕಲಬುರಗಿ ಜಿಲ್ಲೆಯ ಕಲಬುರಗಿ ತಾಲೂಕಿನ ಆಲಗೂಡ ಮೂಲದ ಎಂ.ಎ. (ಕನ್ನಡ) ವಿಭಾಗದ ವಿದ್ಯಾರ್ಥಿನಿ ರುಕ್ಮಿಣಿ ಹಣಮಂತ್ರಾಯ 14 ಚಿನ್ನದ ಪದಕ ಪಡೆದು ವಿ.ವಿ.ಯಲ್ಲಿಯೇ ಅತೀ ಹೆಚ್ಚು ಚಿನ್ನದ ಪಡೆದ ಕೀರ್ತಿಗೆ ಪಾತ್ರರಾದರು.

ಚಿನ್ನದ ಪದಕ ಪ್ರಶಸ್ತಿ ಪಡೆದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಕು. ರುಕ್ಮಿಣಿ ತಮ್ಮ ಈ ಸಾಧನೆಗೆ ಉಪನ್ಯಾಸಕರ ಮಾರ್ಗದರ್ಶನ ಮತು ತಂದೆ-ತಾಯಿಯವರ ಮತ್ತು ಕುಟುಂಬಸ್ಥರ ಸಹಕಾರವೇ ಇದಕ್ಕೆ ಕಾರಣ. ವಿ.ವಿ.ಯಲ್ಲಿನ ಗ್ರಂಥಾಲಯಗಳು ತುಂಬಾ ನೆರವಿಗೆ ಬಂದಿವೆ. ತಾವು ಬಿ.ಎಡ್. ಸಹ ಮಾಡಿದ್ದರಿಂದ ಈಗಾಗಲೆ ಶಿಕ್ಷಕಿ ಹುದ್ದೆಗೆ ಆಯ್ಕೆಯಾಗಿದ್ದು, ಇನ್ನಷ್ಟೆ ನೇಮಕಾತಿ ಪತ್ರ ಬರಬೇಕಿದೆ. ಶಿಕ್ಷಕ ವೃತ್ತಿಯಲ್ಲಿ ಮುಂದೆ ಸಾಗುವೆ ಎಂದರು.

ಮಗಳ ಈ ಸಾಧನೆ ಕಂಡು ಅವರ ತಂದೆ ಹಣಮಂತ್ರಾಯ ಅವರು ಒಂದು ಕ್ಷಣ ಭಾವುಕರಾದರು. ಮಗಳು ಇಡೀ ವಿ.ವಿ.ಗೆ ಹೆಚ್ಚಿನ ಚಿನ್ನದ ಪದಕ ಪಡೆದಿದ್ದಾಳೆ. ನಿಮ್ಮ ಅನಿಸಿಕೆ ಏನೆಂದು ಪತ್ರಕರ್ತರು ಕೇಳಿದಾಗ ನಾನು 3ನೇ ತಕ ಸಾಲಿ ಕಲ್ತೀನ್ರಿ. 4 ಜನ ಹೆಣ್ಮಕ್ಳು, ಒಬ್ಬ ಗಂಡು ಹುಡುಗ ಇದಾನ್ರೀ. ರುಕ್ಮಿಣಿ ಕೊನೆಯವಳ್ರಿ. ನನಗೇನ್ ಹೆಚ್ಚಿಗ್ ಗೊತ್ತಿಲ್ರಿ. ಕೆಲಸ ಹುಡಕೊಂಡು ಊರು ಬಿಟ್ಟು ಹೋಗಿದ್ದೆ. ಇಜೇರಿ ಪ್ರಾಥಮಿಕ ಆರೋಗ್ಯ ಕೇಂದ್ರಲ್ಲಿ ಪಿವನ್ ಕೆಲಸ ಸಿಕ್ತು. 2 ವರ್ಷದ ಹಿಂದೆ ರಿಟೈರ್‍ಮೆಂಟ್ ಆಗೀನ್ರಿ. ಮಗಳು ಓದ್ಯಾಳ್ರಿ ಎಂದಾಗ ಮಾತು ನಿಂತು ಕಣ್ಣೀರು ತುಂಬಿಕೊಂಡವು.

ಪಿ.ಎಚ್.ಡಿ. ಮಾಡುವಾಸೆ: ಪ್ರಾಣಿಶಾಸ್ತ್ರ ವಿಭಾಗದಲ್ಲಿ 9 ಚಿನ್ನದ ಪದಕ ಪಡೆದ ಬೀದರ ಮೂಲದ ಕು. ಆದಿತಿ ರೆಡ್ಡಿ ಮಂದಹಾಸದೊಂದಿಗೆ ಮಾತನಾಡುತ್ತಾ, ಪಿ.ಎಚ್.ಡಿ. ಮಾಡುವುದಾಗಿ ತಿಳಿಸಿದರು.

ಹೆತ್ತವರಿಗೆ ಅರ್ಪಣೆ: ಯಾದಗಿರಿ ಜಿಲ್ಲೆಯ ಸುರಪೂರ ಮೂಲದ ಕು. ಬಿ.ರಾಜಶ್ರೀ ಅವರು ಸೂಕ್ಷ್ಮ ಜೀವವಿಜ್ಞಾನ ವಿಭಾಗದಲ್ಲಿ 7 ಚಿನ್ನದ ಪದಕ ಪಡೆದಿದ್ದಕ್ಕೆ ಪ್ರತಿಕ್ರಿಯೆಸಿ ತಮ್ಮ ಈ ಸಾಧನೆಗೆ ತಂದೆ-ತಾಯಿ ಹಾಗೂ ತಮ್ಮ ಅಜ್ಜನಿಗೆ ಅರ್ಪಿಸುವುದಾಗಿ ತಿಳಿಸಿ ಉಪನ್ಯಾಸಕ ವೃತ್ತಿಯಲ್ಲಿ ಮುಂದುವರೆಯುವೆ ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.