13,800 ಶಾಲೆಗಳ ಸ್ಥಗಿತಕ್ಕೆ ಎಐಡಿಎಸ್‍ಓ ಖಂಡನೆ

ಕಲಬುರಗಿ,ಜು.20: ಮಾದರಿ ಶಾಲೆಗಳನ್ನು ಮಾಡುತ್ತೇವೆ ಎಂಬ ನೆಪವೊಡ್ಡಿ ಅಂತಿಮವಾಗಿ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳನ್ನು ಹೊಂದಿರುವ ಸುಮಾರು 13,800 ಸರ್ಕಾರಿ ಶಾಲೆಗಳನ್ನು ಶಾಶ್ವತವಾಗಿ ಮುಚ್ಚುವ ಕ್ರಮವು ಉಗ್ರ ಖಂಡನಾರ್ಹ ಎಂದು ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಮಟ್ಸ್ ಆರ್ಗನೈಸೇಷನ್ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಅವರು ತಿಳಿಸಿದ್ದಾರೆ.
ಈ ಶೈಕ್ಷಣಿಕ ವರ್ಷದಲ್ಲಿ 25ಕ್ಕಿಂತಲೂ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳನ್ನು ಹೊಂದಿರುವ ರಾಜ್ಯದ 13,800 ಸರ್ಕಾರಿ ಶಾಲೆಗಳನ್ನು ಇತರ ಶಾಲೆಗಳೊಂದಿಗೆ ವಿಲೀನಗೊಳಿಸಲು ಅಂದರೆ, ಶಾಶ್ವತವಾಗಿ ಮುಚ್ಚಲು ಸರ್ಕಾರ ನಿರ್ಧರಿಸಿದೆ. ಸರ್ಕಾರವೇ ಹೇಳಿರುವ ಪ್ರಕಾರ, ಆ ಶಾಲೆಗಳಲ್ಲಿ ದಾಖಲಾತಿ ಕಡಿಮೆ ಇರುವುದರಿಂದ ಅವುಗಳಿಗೆ ಕ್ರಮೇಣ ಶಾಲೆಗಳಿಗೆ ಬೀಗ ಹಾಕಲಾಗುವುದು ಎಂದು ಅವರು ಹೇಳಿಕೆಯಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ದಾಖಲಾತಿ ಪ್ರಮಾಣ ಕುಸಿಯಲು ಶಾಲೆಗಳ ಕಳಪೆ ಗುಣಮಟ್ಟವೆ ಕಾರಣವೆಂದು ಶಿಕ್ಷಣ ಮಂತ್ರಿಗಳೇ ಒಪ್ಪಿಕೊಂಡಿದ್ದಾರೆ. ಹಾಗಾದರೆ, ಸರ್ಕಾರದ ಆದ್ಯತೆ, ಗುಣಮಟ್ಟವನ್ನು ಅಭಿವೃದ್ಧಿಗೊಳಿಸಿ, ಅಂತಹ ಶಾಲೆಗಳ ದಾಖಲಾತಿಯನ್ನು ಏರಿಸುವಲ್ಲಿ ಇರಬೇಕಿತ್ತು. ಕಳೆದ ವರ್ಷ 10 ಲಕ್ಷ ಮಕ್ಕಳು, ಆರ್ಥಿಕ ಬಿಕ್ಕಟ್ಟಿನಿಂದಾಗಿ ಖಾಸಗಿ ಶಾಲೆಗಳಿಂದ ಸರ್ಕಾರಿ ಶಾಲೆಗಳಿಗೆ ಬಂದಿದ್ದಾರೆ. ಪರಿಸ್ಥಿತಿ ಇಷ್ಟು ಗಂಭೀರವಾಗಿದೆ. ಹೀಗಿರುವಾಗ, ಸರ್ಕಾರಿ ಶಾಲೆಗಳಿಗೆ ಅನುದಾನ ಹೆಚ್ಚಿಸಿ, ಉತ್ತಮ ಮೂಲಸೌಕರ್ಯಗಳನ್ನು ಒದಗಿಸಿ, ಹೆಚ್ಚುವರಿ ಶಿಕ್ಷಕರನ್ನು ನೇಮಕ ಮಾಡಿ, ಶಾಲೆಗಳ ಸಂಖ್ಯೆ ಹೆಚ್ಚಿಸಿ, ದಾಖಲಾತಿ ಏರಿಸಲು ಪ್ರಯತ್ನ ಪಡಬೇಕಿತ್ತು. ಆದರೆ, ವಿಲೀನದ ಹೆಸರಿನಲ್ಲಿ ಮಾದರಿ ಶಾಲೆ ರೂಪಿಸುತ್ತವೆ ಎನ್ನುವ ಸರ್ಕಾರದ ನಿರ್ಧಾರದಲ್ಲಿ ‘ ಸರ್ಕಾರಿ ಶಾಲೆಗಳನ್ನು ಶಾಶ್ವತವಾಗಿ ಮುಚ್ಚುವ ಆತುರ ಕಾಣುತ್ತದೆಯೇ ಹೊರತು ಅವುಗಳ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸುವ ಇರಾದೆ ಇದ್ದಂತಿಲ್ಲ ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.
ಮತ್ತೆ ಮತ್ತೆ ನಾವು ಈ ವಿಷಯವನ್ನು ಪುನರುಚ್ಚರಿಸುತ್ತೇವೆ. ಈ ಎಲ್ಲ ಶಿಕ್ಷಣ ವಿರೋಧಿ, ಬಡ ಜನ ವಿರೋಧಿ ಯೋಜನೆಗಳು ಹೊಸ ಶಿಕ್ಷಣ ನೀತಿ – 2020ರ ಭಾಗವೇ ಆಗಿದೆ. ಸರ್ಕಾರಿ ಶಿಕ್ಷಣ ಸಂಸ್ಥೆಗಳು ಉಳಿಯಬೇಕು ಮತ್ತು ಒಟ್ಟಾರೆಯಾಗಿ ಎನ್. ಇ. ಪಿ.-2020 ಅನ್ನು ಪ್ರತಿರೋಧಿಸಿ ದೇಶದಾದ್ಯಂತ ಒಂದು ಕೋಟಿ ಸಹಿ ಸಂಗ್ರಹಿಸಲು ಆರಂಭವಾಗಿರುವ ಅಭಿಯಾನದ ಭಾಗವಾಗಿ ನಡೆಯುತ್ತಿರುವ ಸಹಿ ಸಂಗ್ರಹಣೆಗೆ ಈಗಾಗಲೇ ರಾಜ್ಯದ 3 ಲಕ್ಷಕ್ಕೂ ಹೆಚ್ಚು ಜನರು ತಮ್ಮ ಸಹಿ ನೀಡಿದ್ದಾರೆ. ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಉಳಿಸಲು ಹಾಗೂ ಸಾರ್ವಜನಿಕ ಶಿಕ್ಷಣವನ್ನು ಉಳಿಸಲು ಒಂದು ಪ್ರಬಲವಾದ ಹೋರಾಟದ ಅಗತ್ಯ ಇದೆ. ಈ ಹಿನ್ನೆಲೆಯಲ್ಲಿ ಎಲ್ಲ ವಿದ್ಯಾರ್ಥಿಗಳು, ಶಿಕ್ಷಣ ಪ್ರೇಮಿ ಜನತೆ ಹಾಗೂ ಜನ ಸಾಮಾನ್ಯರು, ಶಿಕ್ಷಣವನ್ನು ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಉಳಿಸುವ ಚಳುವಳಿಯೊಂದಿಗೆ ಕೈಜೋಡಿಸಿ, ಸಂಘಟಿತ ಹೋರಾಟಕ್ಕೆ ಸಜ್ಜಾಗಬೇಕು ಎಂದು ಅವರು ಕರೆ ನೀಡಿದ್ದಾರೆ.