137 ಗ್ರಾಮಗಳ ಕುಡಿಯುವ ನೀರು ಪೂರೈಕೆಗೆ ಸಂಪುಟದ ಸಮ್ಮತಿ

ಬೀದರ: ಫೆ. 24: ಜಲ ಜೀವನ ಮಿಷನ್ ಅಡಿ ರಾಜ್ಯ ಸರ್ಕಾರದ ಅನುದಾನವನ್ನೂ ಸಂಯೋಜಿಸಿ ಒಟ್ಟು 330 ಕೋಟಿ ರೂ. ವೆಚ್ಚದಲ್ಲಿ ಬೀದರ್ ತಾಲೂಕು ಬಗ್ದಾಲ್ ಮತ್ತು ಇತರೆ 104 ಹಾಗೂ ಚಿಟಗುಪ್ಪ ತಾಲೂಕು ಮನ್ನಾ ಎ ಖೇಳಿ ಮತ್ತು ಇತರೆ 32 ಜನ ವಸತಿಗಳಿಗೆ ಬಹುಗ್ರಾಮ ಕುಡಿಯುವ ನೀರು ಪೂರೈಸುವ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಿನ್ನೆ ಸಂಜೆ ನಡೆದ ಸಂಪುಟ ಸಭೆಯಲ್ಲಿ ಬೀದರ್ ತಾಲೂಕಿನ 105 ಮತ್ತು ಚಿಟಗುಪ್ಪ ತಾಲೂಕಿನ 33 ಸೇರಿ ಒಟ್ಟು 137 ಜನವಸತಿಗಳಿಗೆ ಕೊಳವೆ ನೀರು ಸರಬರಾಜು ಯೋಜನೆ/ ಕಿರು ನೀರು ಸರಬರಾಜು ಯೋಜನೆ ಅಡಿಯಲ್ಲಿ ತೆರೆದ ಬಾವಿ/ ಕೊಳವೆ ಬಾವಿಯನ್ನು ಜಲಮೂಲವನ್ನಾಗಿ ಪರಿಗಣಿಸಿ ನೀರು ಪೂರೈಕೆ ಮಾಡಲು ಅನುಮೋದನೆ ನೀಡಲಾಗಿದೆ.
137 ಗ್ರಾಮಗಳ ಕುಡಿಯುವ ನೀರು ಯೋಜನೆಯ ಬಂಡವಾಳ ವೆಚ್ಚ 291.20 ಕೋಟಿ ಮತ್ತು ಸಗಟು ವೆಚ್ಚ 38.80 ಕೋಟಿ ರೂ. ಸೇರಿ ಒಟ್ಟು ಮೊತ್ತ 330 ಕೋಟಿ ರೂ. ಆಗಿದೆ. ಈ ಪೈಕಿ ಕೇಂದ್ರ ಸರ್ಕಾರ ಬಂಡವಾಳ ವೆಚ್ಚದ ಶೇ.50ರಷ್ಟು ಅಂದರೆ 145 ಕೋಟಿ ರೂ. ಮಾತ್ರ ಒದಗಿಸುತ್ತಿದ್ದರೆ, ಕರ್ನಾಟಕ ಸರ್ಕಾರ ಬಂಡವಾಳ ವೆಚ್ಚದ ಶೇ.50ರಷ್ಟು ಅಂದರೆ 145 ಕೋಟಿ ರೂ. ಜೊತೆಗೆ ಸಗಟು ನೀರಿನ ವೆಚ್ಚವಾದ 38.80 ಕೋಟಿ ರೂ. ಸೇರಿ ಒಟ್ಟು 184.40 ಕೋಟಿ ರೂ. ಭರಿಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.