135ಕ್ಕೂ ಹೆಚ್ಚು ಸ್ಥಾನ ಬಿಜೆಪಿ ಗೆಲುವು ನಿಶ್ಚಿತ: ರಾಜೀವ್ ಬಬ್ಬರ್

ಮೈಸೂರು: ಬಿಜೆಪಿ 135ಕ್ಕೂ ಹೆಚ್ಚು ಸ್ಥಾನ ಗೆಲುವು ಸಾಧಿಸುವ ಮೂಲಕ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ದೆಹಲಿಯ ಬಿಜೆಪಿ ರಾಜ್ಯ ಉಪಾಧ್ಯಕ್ಷ ರಾಜೀವ್ ಬಬ್ಬರ್ ತಿಳಿಸಿದರು.
ಬುಧವಾರ ಮೈಸೂರಿನ ವಾಣಿವಿಲಾಸ ರಸ್ತೆಯಲ್ಲಿರುವ ಬಿಜೆಪಿ ಮೈಸೂರು ವಿಭಾಗ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿದ ಅವರು, ನಾವು ಈಗಾಗಲೇ ಕರ್ನಾಟಕದಲ್ಲಿ ಆಂತರಿಕ ಸಮೀಕ್ಷೆಯನ್ನು ನಡೆಸಿದ್ದೇವೆ. ಅದರಲ್ಲಿ ಬಿಜೆಪಿ 135 ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂಬ ವರದಿ ಬಂದಿದೆ. ಹಾಗಾಗಿ ಈ ಬಾರಿ ಕೂಡ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಕಾಂಗ್ರೆಸ್ ಏನೇ ಪ್ರಯತ್ನ ನಡೆಸಿದರೂ, ಈ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವುದಿಲ್ಲ. ಈಗಾಗಲೇ ದೇಶದಲ್ಲಿ ಕಾಂಗ್ರೆಸ್ ತನ್ನ ಅಸ್ತಿತ್ವವನ್ನು ಕಳೆದುಕೊಂಡಿದೆ.
ಕರ್ನಾಟಕದಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವುದಕ್ಕೆ ಹೋರಾಟವನ್ನು ನಡೆಸುತ್ತಿದೆ. ಆದರೆ ರಾಜ್ಯದ ಜನರು ಈ ಬಾರಿಯೂ ಕಾಂಗ್ರೆಸ್ ನಾಯಕರ ಅಧಿಕಾರಕ್ಕೆ ಬರುವ ಕನಸನ್ನು ನನಸು ಮಾಡುವುದಿಲ್ಲ ಎಂದು ಹೇಳಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ದಿನ 39 ಕಿಲೋಮೀಟರ್ ರಸ್ತೆಯನ್ನು ಅಭಿವೃದ್ಧಿಗೊಳಿಸಿದೆ. ಬೆಂಗಳೂರು ಮೈಸೂರು ನಡುವೆ ದಶಪಥ ರಸ್ತೆಯನ್ನು ನಿರ್ಮಾಣ ಮಾಡಿದೆ. ಡಿ.ಕೆ.ಶಿವಕುಮಾರ್ ಹಾಗೂ ಕಾಂಗ್ರೆಸ್‍ನ ಶೇ.50ರಷ್ಟು ನಾಯಕರು ಭ್ರಷ್ಟಾಚಾರದ ಆರೋಪದಲ್ಲಿ ಸಿಲುಕಿದ್ದಾರೆ. ಪ್ರಿಯಾಂಕಗಾಂಧಿ ಅವರ ಪತಿ ರಾಭರ್ಟ್ ವಾದ್ರಾ ಕೂಡ ಭ್ರಷ್ಟಾಚಾರದ ಆರೋಪವನ್ನು ಎದುರಿಸುತ್ತಿದ್ದು, ಭ್ರಷ್ಟಾಚಾರದ ಬಗ್ಗೆ ಮಾತನಾಡುವುದಕ್ಕೆ ಅವರಿಗೆ ನೈತಿಕತೆ ಏನಿದೆ ಎಂದು ಪ್ರಶ್ನಿಸಿದರು.
ನರಸಿಂಹರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂದೇಶ್‍ಸ್ವಾಮಿ ಮಾತನಾಡಿ, ಕಾಂಗ್ರೆಸ್‍ನ ತನ್ವೀರ್ ಸೇಠ್ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿ ಕೋವಿಡ್ ಸಮಯದಲ್ಲಿ ಜನರ ಸಂಕಷ್ಟಕ್ಕೆ ಯಾವುದೇ ರೀತಿಯಲ್ಲೂ ಸ್ಪಂದಿಸಲಿಲ್ಲ. ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ. ಕ್ಷೇತ್ರಕ್ಕೆ ಪ್ರತ್ಯೇಕ ಆಸ್ಪತ್ರೆ, ಜನರಿಗೆ ವಸತಿ ಸೌಲಭ್ಯ ಸೇರಿ ನಾನಾ ಸೌಲಭ್ಯ ನೀಡುವಲ್ಲಿ ಶಾಸಕರು ವಿಫಲರಾಗಿದ್ದಾರೆ. ಹಾಗಾಗಿ ಈ ಬಾರಿ ಕ್ಷೇತ್ರದ ಜನರು ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿ, ನನ್ನನ್ನು ಗೆಲ್ಲಿಸಿದರೆ ಅಭಿವೃದ್ಧಿಯತ್ತ ಕ್ಷೇತ್ರವನ್ನು ಕೊಂಡೊಯ್ಯಲು ಸಹಕಾರಿಯಾಗಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಚಿತ್ರನಟ ಹಾಗೂ ಬಿಜೆಪಿ ಮುಖಂಡ ಎಸ್.ಜಯಪ್ರಕಾಶ್(ಜೆಪಿ), ಜಿಲ್ಲಾ ಸಹ ವಕ್ತಾರ ಡಾ.ಕೆ.ವಸಂತ್ ಕುಮಾರ್, ಬಿಜೆಪಿ ರಾಜ್ಯ ಪರಿಷತ್ ಕಾರ್ಯಕಾರಣಿ ಸದಸ್ಯ ಬಿ.ಪಿ.ಮಂಜುನಾಥ್, ಎನ್.ಆರ್ ಕ್ಷೇತ್ರದ ಅಧ್ಯಕ್ಷ ಭಾನುಪ್ರಕಾಶ್, ವೀಕ್ಷಕಿ ಸೌಧಮಣಿ, ಜಿಲ್ಲಾ ಮಾಧ್ಯಮ ಸಂಚಾಲಕ ಮಹೇಶ್ ರಾಜ್ ಅರಸ್, ಸಹ ವಕ್ತಾರ ಕೇಬಲ್ ಮಹೇಶ್ ಮತ್ತಿತರು ಉಪಸಿತರಿದ್ದರು.