130 ಎಕರೆ ಪ್ರದೇಶದಲ್ಲಿ
ಬಿಜೆಪಿ ಎಸ್ಟಿ ನವಶಕ್ತಿ ಸಮಾವೇಶ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ನ.18: ನಾಡಿದ್ದು ನಗರದಲ್ಲಿ ಹಮ್ಮಿಕೊಂಡಿರುವ ಭಾರತೀಯ ಜನತಾ ಪಾರ್ಟಿಯ ಎಸ್ಟಿ ಮೋರ್ಚಾದ ನವಶಕ್ತಿ ಸಮಾವೇಶಕ್ಕೆ ಟಿ.ಬಿ.ಸ್ಯಾನಿಟೇರಿಯಂ ಬಳಿಯ 130 ಎಕರೆ ಪ್ರದೇಶವನ್ನು ಬಳಕೆ ಮಾಡಿಕೊಳ್ಳುತ್ತಿದ್ದು ಗಣ್ಯರ ಹೆಲೆ ಕ್ಯಾಪ್ಟರ್ ಗಳಿಗೆ ಎರಡು ಹೆಲಿಪ್ಯಾಡ್ ರಚಿಸಲಾಗಿದೆ.
ಸಮಾವೇಶಕ್ಕೆ ಬಂದ ಜನರಿಗೆ ಗಣ್ಯರ ಭಾಷಣ ಆರಂಭ ಮಾಡುವ ಮುನ್ನ ಬೇಸರವಾಗದಂತಿರಲು 160 ವಿವಿಧ ಸಾಂಸ್ಕೃತಿಕ ಕಲಾ ತಂಡಗಳ ಪ್ರದರ್ಶನವನ್ನು ಹಮ್ಮಿಕೊಂಡಿದೆ.
ಅದಕ್ಕಾಗಿ ಮುಖ್ಯ ವೇದಿಕೆಯ ಬದಿಯಲ್ಲಿ ವಿಶೇಷ ವೇದಿಕೆ ರಚಿಸಲಾಗಿದೆ.
ವೇದಿಕೆಯ ಒಳಾಂಗಣದಲ್ಲಿ 60ಕ್ಕೂ ಹೆಚ್ಚು ಹೊರಾಂಗಣದಲ್ಲಿ 32ಕ್ಕೂ ಹೆಚ್ಚು ಎಲ್.ಇ.ಡಿ ಪರದೆ ವ್ಯವಸ್ಥೆ ಮಾಡಲಾಗುತ್ತಿದೆ. ಇದರಿಂದ ರಾಜ್ಯದ ವಿವಿಧಡೆಯಿಂದ ಬರುವ ಲಕ್ಷಾಂತರ ಜನ ಕಾರ್ಯಕ್ರಮ ವೀಕ್ಷಿಸಲು ಅನುಕೂಲವಾಗಲಿದೆ.
ಸಮಾವೇಶಕ್ಕೆ ಬರುವ ಜನರಿಗೆ 300ಕ್ಕೂ ಹೆಚ್ಚು ಕೌಟಂರ್ ಗಳಲ್ಲಿ ಊಟದ ವ್ಯವಸ್ಥೆ ಮಾಡಿದೆ. 200 ಶೌಚಾಲಯ ಸಹ ನಿರ್ಮಾಣ ಮಾಡಿದೆ.
ರಾಜ್ಯದ ವಿವಿಧೆಡೆಯಿಂದ 8 ರಿಂದ 10ಸಾವಿರ ಬಸ್ ಗಳು, 20 ಸಾವಿರ ಕ್ರೂಸರ್, 10 ಸಾವಿರ ಕಾರು, 25 ಸಾವಿರ ಬೈಕ್ ಗಳು ಬರುವ ಸಾಧ್ಯತೆ ಇದೆ. ಅದಕ್ಕಾಗಿ ನಗರದ ಸುತ್ತ ಮುತ್ತಲ 28 ಸ್ಥಳಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
ಸಮಾವೇಶಕ್ಕೆ ವಿಶೇಷವಾಗಿ ನಗರದಿಂದ ವೇದಿಕೆಯತ್ತ ಹತ್ತು ಸಾವಿರ ಮಹಿಳೆಯರು ಕಾಲ್ನಡಿಗೆ ಜಾಥಾದ ಮೂಲಕ ಆಗಮಿಸಲಿದ್ದಾರೆ. ಬಂದ ಜನತೆಗೆ ಏನಾದರೂ ಆರೋಗ್ಯ ಸಮಸ್ಯೆಯಾದರೆ ತಕ್ಷಣ ಚಿಕಿತ್ಸೆ ನೀಡಲು ವಿಮ್ಸ್ ವೈದ್ಯರ ತಂಡದ ವ್ಯವಸ್ಥೆ ಮಾಡಿದೆ ಎಂದು ಸಚಿವ ಶ್ರೀರಾಮುಲು, ನಗರ ಶಾಸಕ ಗಾಲಿ ಸೋಮಶೇಖರರೆಡ್ಡಿ ಹೇಳಿದ್ದಾರೆ.