13 ದಿನಗಳ ಅಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಜಯ|ಉಜನಿ ನೀರಿಗಾಗಿ ಸುಪ್ರೀಂಕೋರ್ಟ್ ಮೊರೆ ಹೋಗಲು ಚಿಂತನೆ|ಭೀಮಾ ನದಿ ನೀರು ಸೇವಿಸಿ ಉಪವಾಸ ಸತ್ಯಾಗ್ರಹ ಕೈ ಬಿಟ್ಟ ನಾಟೀಕಾರ

ಅಫಜಲಪುರ: ಮಾ.28:ಭೀಮಾ ನದಿಗೆ ನೀರು ಹರಿಸುವಂತೆ ಆಗ್ರಹಿಸಿ ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ಶಿವಕುಮಾರ ನಾಟೀಕಾರ ಹೋರಾಟಕ್ಕೆ ಸರ್ಕಾರ ಸ್ಪಂದಿಸಿ 1 ಟಿಎಂಸಿ ನೀರನ್ನು ನಾರಾಯಣಪುರ ಜಲಾಶಯದಿಂದ ಹರಿಸುವಂತೆ ಆದೇಶ ಹೊರಡಿಸಿದೆ. ಭೀಮಾ ನೀರಿಗಾಗಿ ಒಗ್ಗಟ್ಟಾಗಿ ಎಲ್ಲರೂ ಪಕ್ಷಾತೀತವಾಗಿ ಬೆಂಬಲಿಸಿದ್ದಕ್ಕಾಗಿ ಜಯ ಸಿಕ್ಕಿದೆ ಎಂದು ಶಾಸಕ ಎಂ.ವೈ.ಪಾಟೀಲ್ ಹೇಳಿದರು.

ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಕಳೆದ 13 ದಿನಗಳ ಪರಿಯಂತ ಭೀಮಾ ನದಿಗೆ ನೀರು ಹರಿಸುವಂತೆ ಆಗ್ರಹಿಸಿ ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ಶಿವಕುಮಾರ ನಾಟೀಕಾರ ಹೋರಾಟಕ್ಕೆ ಜಯ ಸಿಕ್ಕಿರುವ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಭೀಮಾತೀರ ಅಂದರೆ ಕೆಟ್ಟದಾಗಿ ನೋಡುವ ಕಾಲದಲ್ಲಿ ಈಗ ಭೀಮ ರಥಿ ಎನ್ನುವ ಕಾಲ ಬಂದಿದೆ. ಭೀಮಾ ನದಿ ನೈಸರ್ಗಿಕವಾಗಿ ಹರಿಯಲು ಬಲಿಷ್ಠವಾಗಿ ಇಲ್ಲ. ಮಳೆಯ ನೀರಿನ ಮೇಲೆ ಅವಲಂಬನೆಯಾಗಿದೆ. ಹಿಂದಿನ ಸರ್ಕಾರಗಳು ಭೀಮಾನದಿಯ ನೀರು ಮಹಾರಾಷ್ಟ್ರ ಸರ್ಕಾರ ಸೀನಾ ನದಿಗೆ ಹರಿಸಿ, ಹತ್ತಾರು ಬ್ಯಾರೇಜ್ ಗಳನ್ನು ನಿರ್ಮಾಣ ಮಾಡಿಕೊಂಡಾಗ ಸುಮ್ಮನೆ ಕುಳಿತಿದ್ದರಿಂದ ಇವತ್ತು ಈ ಪರಿಸ್ಥಿತಿ ಬರಲು ಕಾರಣವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ನಿರಂತರವಾಗಿ ನೀರಾವರಿ ಅಧಿಕಾರಿಗಳ ಜೊತೆ ಚರ್ಚಿಸಿ ನೀರು ಹರಿಸಲು ಒತ್ತಡ ಹಾಕಿದ್ದಾರೆ. ಅಲ್ಲದೇ ಈಗ ಉಜನಿ ಜಲಾಶಯದಿಂದ ನಮ್ಮ ಹಕ್ಕಿನ ನೀರು ನಮಗೆ ಮಹಾರಾಷ್ಟ್ರ ಸರ್ಕಾರ ನೀಡಬೇಕೆಂದು ಸುಪ್ರೀಂಕೋರ್ಟ್ ನಲ್ಲಿ ದಾವೆ ಹೂಡಲು ನಿರ್ಧರಿಸಿದ್ದಾರೆ. 200 ಕೋಟಿ ರೂ. ಅನುದಾನದಲ್ಲಿ ನಾರಾಯಣಪುರ ಜಲಾಶಯದಿಂದ ಭೀಮಾನದಿಗೆ ನೇರವಾಗಿ ಪೈಪ್ ಲೈನ್ ಮೂಲಕ ನೀರು ತುಂಬಿಸುವ ಯೋಜನೆ ರೂಪಿಸಲಾಗಿದೆ ಎಂದರು.

ಹೋರಾಟಗಾರ ಶಿವಕುಮಾರ ನಾಟೀಕಾರ ಮಾತನಾಡಿ, 2015ರಿಂದ ಭೀಮಾ ನದಿಯ ಉಳಿವಿಗಾಗಿ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದೇನೆ.ಈಗ ಭೀಮಾ ನದಿಗೆ ನೀರು ಹರಿಸುವಂತೆ ಹೋರಾಟ ನಡೆಸದಿದ್ದರೆ ಮುಂದೊಂದು ದಿನ ಭೀಕರ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಅಮರಣಾಂತ ಉಪವಾಸ ಸತ್ಯಾಗ್ರಹದ ಫಲವಾಗಿ ಒಗ್ಗಟ್ಟಾಗಿ ಹೋರಾಟ ನಡೆಸಿದ ಫಲವಾಗಿ ಸರ್ಕಾರ ಎಚ್ಚೆತ್ತುಕೊಂಡು 1 ಟಿಎಂಸಿ ನೀರು ಹರಿಸುತ್ತಿದೆ.ಹೋರಾಟಕ್ಕೆ ಜಯ ಸಿಕ್ಕಿದೆ ಅನ್ನೋದಕ್ಕಿಂತ ಸಾರ್ವತ್ರಿಕವಾಗಿ ಚರ್ಚೆಗೆ ಬಂದಿದೆ. ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಗಟ್ಟಿಯಾಗಿ ನಿಂತು ಹೋರಾಟಕ್ಕೆ ಬರಬೇಕಾಗಿತ್ತು. ಆದರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇವತ್ತು ಭೀಮಾ ನದಿಗಾಗಿ ನಾವೆಲ್ಲರೂ ಒಂದು ಎಂಬ ಸಂದೇಶ ರಾಜ್ಯಕ್ಕೆ ಹೋಗಿದೆ.ಮಹಾರಾಷ್ಟ್ರ ಸರ್ಕಾರ ಅಕ್ರಮವಾಗಿ ಬಚಾವತ್ ಆದೇಶ ಉಲ್ಲಂಘಿಸಿ 40ರಿಂದ 50 ಟಿಎಂಸಿ ನೀರು ಬಳಕೆ ಮಾಡಿಕೊಳ್ಳುತ್ತಿದೆ.ಹೀಗಾಗಿ ನಾವೆಲ್ಲರೂ ಒಗ್ಗಟ್ಟಾಗಿ ನಮ್ಮ ಹಕ್ಕಿನ 15 ಟಿಎಂಸಿ ನೀರನ್ನು ಭೀಮಾ ನದಿಗೆ ಹರಿಸುವಂತೆ ಮುಂದೆಯೂ ಸಹ ಹೋರಾಡೋಣ.ಈ ಹೋರಾಟಕ್ಕೆ ಬೆಂಬಲಿಸಿದ ಪ್ರತಿಯೊಬ್ಬರಿಗೂ ತುಂಬು ಹೃದಯದಿಂದ ಕೃತಜ್ಞತೆಗಳು ಸಲ್ಲಿಸುತ್ತೇನೆ ಎಂದರು. ನಂತರ ಹಲವು ಬೇಡಿಕೆಗಳ??? ಸರ್ಕಾರದ ಮುಂದಿಟ್ಟರು.

ಪ್ರಮುಖ ಬೇಡಿಕೆಗಳು:
(1) ಉಜನಿ ಆಣೆಕಟ್ಟೆಗೆ ತಜ್ಞರ ತಂಡದೊಂದಿಗೆ ಭೇಟಿ ನೀಡುವ ಯೋಜನೆ ರೂಪಿಸಿ ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಸರ್ಕಾರದ ಗಮನಕ್ಕೆ ತರಬೇಕು.

(2) ನಮ್ಮ ಹಕ್ಕಿನ 15 ಟಿಎಂಸಿ ನೀರಿನ ಪಾಲಿನ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ, ನೀರಾವರಿ ಸಚಿವರಿಗೆ ರಾಜ್ಯದಿಂದ ಸರ್ವಪಕ್ಷ ನಿಯೋಗ ತೆರಳಿ ಸೌಹಾರ್ದತೆ ಮಾತುಕತೆ ನಡೆಸಿ ಮನವರಿಕೆ ಮಾಡಿಕೊಡಬೇಕು.

(3) ಮಹಾರಾಷ್ಟ್ರ ಸರ್ಕಾರ ಮಾತುಕತೆಗೆ ಒಪ್ಪದಿದ್ದರೆ ಸುಪ್ರೀಂ ಕೋರ್ಟ್ ನಲ್ಲಿ ಸರ್ಕಾರದಿಂದಲೇ ದಾವೆ ಹೂಡಬೇಕು.

(4) ಬೋರಿ ನದಿ, ಕೆರೆಗಳು, ಹಳ್ಳಕೊಳ್ಳ ಅಭಿವೃದ್ಧಿಪಡಿಸಿ ಮಳೆಗಾಲದಲ್ಲಿ ನೀರು ನಿಲ್ಲುವಂತೆ ಮಾಡಬೇಕು.

(5)ಭೀಮಾ ನದಿ ನೈಸರ್ಗಿಕವಾಗಿ ಹರಿಸುವಂತೆ ಕಾಪಾಡಿಕೊಳ್ಳಬೇಕು.

ಈ ಸಂದರ್ಭದಲ್ಲಿ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು, ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳು, ಅಭಿನವ ಗುರುಬಸವ ಶಿವಾಚಾರ್ಯರು, ಮರುಳಾರಾಧ್ಯ ಶಿವಾಚಾರ್ಯರು, ಶಂಭುಲಿಂಗ ಶಿವಾಚಾರ್ಯರು, ಹಿರಿಯ ಮುಖಂಡರಾದ ಮಕ್ಬೂಲ್ ಪಟೇಲ್, ಪಪ್ಪು ಪಟೇಲ್, ಲಚ್ಚಪ್ಪ ಜಮಾದಾರ, ಚಿದಾನಂದ ಮಠ, ಚಂದು ದೇಸಾಯಿ, ರಮೇಶ ಬಾಕೆ, ರಾಜಶೇಖರ ಜಿಡ್ಡಗಿ, ರಮೇಶ ಪೂಜಾರಿ, ಶಂಕರ ಮ್ಯಾಕೇರಿ, ರಮೇಶ ಹೂಗಾರ, ವಿಶ್ವನಾಥ ರೇವೂರ, ಬಸವರಾಜ ಸಪ್ಪನಗೋಳ, ರಾಜುಗೌಡ ಅವರಳ್ಳಿ, ಬೀರಣ್ಣ ಕನಕ ಟೇಲರ, ಈರಣ್ಣ ಪಂಚಾಳ್, ದಯಾನಂದ ದೊಡ್ಮನಿ, ರಾಜಕುಮಾರ ಉಕ್ಕಲಿ, ಸಿದ್ದುಗೌಡ ಪಾಟೀಲ, ಡಾ. ಶರಣಗೌಡ ಪಾಟೀಲ, ರಾಜೇಂದ್ರ ಸರದಾರ, ಜಮೀಲ್ ಗೌಂಡಿ, ಅಮರಸಿಂಗ ರಜಪೂತ ಅನೇಕರು ಉಪಸ್ಥಿತರಿದ್ದರು.


ಧರಣಿ ಸತ್ಯಾಗ್ರಹ ಕೈಬಿಟ್ಟ ನಂತರ ತಾಲೂಕಿನ ಮಣ್ಣೂರ ಗ್ರಾಮದ ಭೀಮಾ ನದಿಗೆ ತೆರಳಿ ನೀರು ಸೇವಿಸಿ ತಮ್ಮ ಉಪವಾಸ ಸತ್ಯಾಗ್ರಹವನ್ನು ನಾಟೀಕಾರ ಅಂತ್ಯಗೊಳಿಸಿದರು.