13ರಂದು ರಾಜ್ಯಾದ್ಯಂತ ಬೃಹತ್ ಪ್ರತಿಭಟನೆಗೆ ನಿರ್ಧಾರ: ಸಿದ್ರಾಮ ಪಾಟೀಲ

ಬೀದರ್: ಫೆ.11:ಕರ್ನಾಟಕ ರಾಜ್ಯ ನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರ ನೇರಪಾವತಿಗೆ ಆಗ್ರಹಿಸಿ ಬೀದರನಲ್ಲಿ ಸೇರಿದಂತೆ ರಾಜ್ಯಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಕಲ್ಯಾಣ ಕರ್ನಾಟಕ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಸಿದ್ರಾಮ ಪಾಟೀಲ ತಿಳಿಸಿದರು.
ಶನಿವಾರ ನಗರದ ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಸಂಬಳದಲ್ಲಿ ಕಡಿತಗೊಳಿಸಿ ಅರ್ಧದಷ್ಟು ಮಾತ್ರ ಸಂಬಳ ನೀಡುತ್ತಾರೆ. ಹೀಗಾಗಿ ನೇರವಾಗಿ ನಮ್ಮ ಸಂಬಳ ನಮಗೆ ಪಾವತಿಯಾದರೆ ನಮ್ಮ ಕುಟುಂಬ ನಿರ್ವಹಣೆಗೆ ಅನುಕೂಲವಾಗುತ್ತದೆ. ನಮ್ಮ ಕೆಲಸ ಖಾಯಮಾತಿಗೊಳಿಸಬೇಕೆಂಬುದು ನಮ್ಮ ಬೇಡಿಕೆಯಾಗಿದೆ. ಈ ಬಾರಿ ಸರ್ಕಾರದಿಂದ ಫಲಿತಾಂಶ ಹೊರಬರೋ ವರೆಗೆ ನಮ್ಮ ಧರಣಿ ಪ್ರತಿಭಟನೆ ನಿಲ್ಲದು ಎಂದು ಪಾಟೀಲ ತಿಳಿಸಿದರು.
ಈ ಹಿಂದೆ ಸಚಿವ ಈಶ್ವರ ಖಂಡ್ರೆಯವರು ಕೂಡ ನಮ್ಮ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದ್ದರು. ಹಾಲಿ ಪೌರಾಡಳಿತ ಸಚಿವ ರಹಿಮ್ ಖಾನ್ ಕೂಡಾ ನಮ್ಮ ಜಿಲ್ಲೆಯವರೇ ಇದ್ದಾರೆ. ನಮ್ಮ ಸಮಸ್ಯೆಗೆ ಸ್ಪಂದಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಅದನ್ನು ಕಾರ್ಯರೂಪಕ್ಕೆ ಬರದೇ ಇರುವ ಕಾರಣ ಪ್ರತಿಭಟನೆ ಮಾಡುತ್ತಿದ್ದೇವೆ. ಕಸ ಗುಡಿಸುವುದು, ಸ್ವಚ್ಛಗೊಳಿಸುವುದು, ಕಸ ವಿಲೇವಾರಿ ಸೇರಿದಂತೆ ಯಾವ ಕಾರ್ಯಗಳೂ ಮಾಡುವುದಿಲ್ಲ. ಎಲ್ಲವೂ ಸ್ಥಗಿತಗೊಳಿಸಿ ಧರಣಿ ಮುಂದುವರೆಸಲಾಗುವುದು ಎಂದು ಎಚ್ಚರಿಸಿದರು.
ಫೆಬ್ರುವರಿ 13 ರಿಂದ ನಮ್ಮ ಹಕ್ಕಿಗಾಗಿ ನಿರಂತರ ಧರಣಿ ಕೈ ಗೊಳ್ಳುತ್ತಲಿದ್ದೇವೆ. ಆಯಾ ಜಿಲ್ಲಾ ಕೇಂದ್ರಗಳಲ್ಲಿ ಸೇರಿದಂತೆ ರಾಜ್ಯದಾದ್ಯಂತ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.
ನಮ್ಮ ಸಮಸ್ಯೆ ಬಗೆಹರಿಯದಿದ್ದಲ್ಲಿ ಈ ತಿಂಗಳ 15ರಂದು ಬೆಂಗಳೂರು ಚಲೊ ಅಭಿಯಾನ ಹಮ್ಮಿಕೊಂಡು, ಹೊರಗುತ್ತಿಗೆ ನೌಕರರ ನಡಿಗೆ, ಮುಖ್ಯಮಂತ್ರಿಗಳ ಮನೆ ಕಡೆಗೆ ಎಂಬ ಬೃಹತ್ ಅಭಿಯಾನ ಹಮ್ಮಿಕೊಳ್ಳಲಾಗುತ್ತದೆ. ಇಡೀ ರಾಜ್ಯದ ಎಲ್ಲ ಹೊರಗುತ್ತಿಗೆ ಪೌರ ಕಾರ್ಮಿಕರು ಅಲ್ಲಿ ಪಾಲ್ಗೊಳ್ಳುವರು ಎಂದು ಸಿದ್ರಾಮ ಪಾಟೀಲ ಎಚ್ಚರಿಸಿದರು.
ಸುದ್ದಿಗೋಷ್ಟಿಯಲ್ಲಿ ಕರ್ನಾಟಕ ಕೂಲಿ ಕಾರ್ಮಿಕರ ಸಂಘದ ಅಧ್ಯಕ್ಷ ರಮೇಶ ಪಾಸ್ವಾನ್ ಕೂಡಾ ಮಾತನಾಡಿದರು. ಪ್ರಮುಖರಾದ ರಾಜಕುಮಾರ, ಪವನ, ಯೇಸುದಾಸ, ಮಾರುತಿ ಕಂಟಿ ಸೇರಿದಂತೆ ಇನ್ನಿತರರು ಪತ್ರಿಕಾ ಗೋಷ್ಟಿಯಲ್ಲಿ ಉಪಸ್ತಿತರಿದ್ದರು.