ರೈತರಿಗೆ ಧಕ್ಕೆಯಾದರೆ ಕಾಯ್ದೆಗೆ ತಿದ್ದುಪಡಿ ಮಾಡಲು ಸಿದ್ಧ: ರಾಜನಾಥ್

ನವದೆಹಲಿ‌, ಡಿ. 25-ನೂತನ ಕೃಷಿ ಕಾಯ್ದೆಗಳಿಂದ ರೈತರ ಹಿತಾಸಕ್ತಿಗೆ ಧಕ್ಕೆಯಾದರೆ ತಿದ್ದುಪಡಿ ಮಾಡಲು ಸಿದ್ಧವಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಸಿಂಘು ಗಡಿಯಲ್ಲಿ ಒಂದು ತಿಂಗಳಿಂದ ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ ಕೆಲವೊಂದುವ ತಿದ್ದುಪಡಿ ಮಾಡುವ ಬಗ್ಗೆ ರಾಜನಾಥ್ ಸಿಂಗ್ ಸುಳಿವು ನೀಡಿದ್ದಾರೆ.
ದೆಹಲಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ರೈತರ ಕೃಷಿ ಸುಧಾರಣಾ ಕಾನೂನುಗಳನ್ನು ಒಂದು ವರ್ಷ ಜಾರಿಗೆ ತರಲಿ. ಬಳಿಕ ಈ ಕಾನೂನುಗಳಿಂದ ರೈತರಿಗೆ‌ ಲಾಭದಾಯಕವಲ್ಲ ಎಂದು ದೃಢಪಟ್ಟರೆ ಅಗತ್ಯ ತಿದ್ದುಪಡಿಗೆ ಕೇಂದ್ರ ಸರ್ಕಾರ ಬದ್ದವಾಗಿದೆ ಎಂದು ಸ್ಪಷ್ಡಪಡಿಸಿದರು.
ನರೇಂದ್ರ ಮೋದಿಯವರು ರೈತರೊಂದಿಗೆ ಮಾತುಕತೆ ನಡೆಸಲು ಬಯಸುತ್ತಾರೆ. ರೈತರ ಹಿತದೃಷ್ಟಿಯಿಂದ ಎಲ್ಲ ಅಗತ್ಯ‌‌ ಕ್ರಮಕೈಗೊಂಡಿದೆ ಹೇಳಿದ ಅವರು, ನೂತನ ಕಾಯ್ದೆಗಳಿಂದ ಕನಿಷ್ಠ ಬೆಂಬಲ ಬೆಲೆ ಅಂತ್ಯವಾಗಲಿದೆ ಎಂಬುದು ತಪ್ಪು‌ ಕಲ್ಪನೆ ಎಂದು ತಿಳಿಸಿದರು.
ಧರಣಿ ನಡೆಸುತ್ತಿರುವವರು ರೈತರಾಗಿದ್ದು, ಅವರ ಬಗ್ಗೆ ಅಪಾರ ಗೌರವವಿದೆ. ಮಾತುಕತೆ ಮೂಲಕ‌ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು‌ ಎಂದು ಅವರು ತಿಳಿಸಿದರು.