
ಕಲಬುರಗಿ,ಆ.19-ಆಲ್‍ಲೈನ್ ಆಫ್ ಲೈನ್ ಡಿಪಾರ್ಟ್‍ಮೆಂಟ್ ಸ್ಟೋರ್‍ನಲ್ಲಿ ಬಂದ ಲಾಭಾಂಶದಲ್ಲಿ ಸಮಪಾಲು ನೀಡುವುದಾಗಿ ಹೇಳಿ ಹಣ ನೀಡದೆ ಸ್ನೇಹಿತನೊಬ್ಬ ಇನ್ನೊಬ್ಬ ಸ್ನೇಹಿತನಿಗೆ 12.14 ಕೋಟಿ ರೂಪಾಯಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ನಗರದ ರಾಮ ಮಂದಿರ ರಸ್ತೆಯ ನ್ಯೂ ಓಝಾ ಲೇಔಟ್‍ನ ರಾಘವೇಂದ್ರ ಡಬರಬಾದ ಅವರು ವಂಚನೆಗೊಳಗಾಗಿದ್ದು, ಅವರು ಈ ಸಂಬಂಧ ಬಿಹಾರ ರಾಜ್ಯದ ಮುಜಾಫರಪುರದ ವಿನಯಕುಮಾರ ಎಂಬುವವರ ವಿರುದ್ಧ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಬೆಂಗಳೂರಿನ ಸಾಫ್ಟವೇರ್ ಕಂಪನಿಯಲ್ಲಿ ಸಾಫ್ಟವೇರ್ ಇಂಜಿಯರಾಗಿದ್ದ ರಾಘವೇಂದ್ರ ಡಬರಾಬಾದ ಅವರು ನಿವೃತ್ತಿಯ ನಂತರ ವ್ಯಾಪಾರ ವಹಿವಾಟು ಮಾಡುತ್ತ ಜೀವನ ಸಾಗಿಸುತ್ತಿದ್ದರು. ಸಾಫ್ಟವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಪರಿಚಯವಾಗಿ ಸ್ನೇಹಿತನಾಗಿದ್ದ ಬಿಹಾರ ರಾಜ್ಯದ ಮುಜಾಫರಪುರದ ವಿನಯಕುಮಾರ ಸಾಫ್ಟವೇರ್ ಇಂಜಿಯರ್ ಉದ್ಯೋಗದಿಂದ ಸ್ವಯಂ ನಿವೃತ್ತಿ ಪಡೆದು ರಾಘವೇಂದ್ರ ಡಬರಾಬಾದ ಬಳಿ ಬಂದು ಸಾಫ್ಟವೇರ್ ಇಂಜಿನಿಯರ್ ಕೆಲಸಕ್ಕಿಂತಲೂ ನಾವು ಹೆಚ್ಚಿನ ಹಣ ಗಳಿಸಬಹುದು ಎಂದು ನಂಬಿಸಿ ಇಬ್ಬರು ತಲಾ 12 ಲಕ್ಷ ರೂ.ಬಂಡವಾಳ ಹಾಕಿ ಕಂಪನಿಯೊಂದನ್ನು ಆರಂಭಿಸಿದರು. ನಂತರ ವಿನಯಕುಮಾರ ಈ ಕಂಪನಿ ಅಡಿಯಲ್ಲಿ ಮುಜಾಫರಪುರದಲ್ಲಿ ತಮ್ಮ ತಾಯಿಯ ಹೆಸರಿನಲ್ಲಿರುವ ಸ್ವಂತ ಕಟ್ಟಡದಲ್ಲಿ ಆನ್‍ಲೈನ್ ಮತ್ತು ಆಫ್‍ಲೈನ್ ಡಿಪಾರ್ಟಮೆಂಟಲ್ ಸ್ಟೋರ್ ಆರಂಭಿಸಿ ಈ ವ್ಯವಹಾರದಿಂದ ಬರುವ ಲಾಭಾಂಶವನ್ನು ಸಮಾನಾಗಿ ಹಂಚಿಕೊಳ್ಳುವ ಒಪ್ಪಂದ ಮಾಡಿಕೊಂಡಿದ್ದರು. ಅಲ್ಲದೆ ಲಾಭಾಂಶ ಬರುವವರೆಗೆ ತಮ್ಮ ತಾಯಿಯ ಹೆಸರಿನಲ್ಲಿರುವ ಕಟ್ಟಡದ ಬಾಡಿಗೆ ತೆಗೆದುಕೊಳ್ಳುವುದಿಲ್ಲ ಎಂದು ವಿನಯಕುಮಾರ ಹೇಳಿದ್ದ. ಇದಲ್ಲದೆ ಕಂಪನಿಯಲ್ಲಿ ರಾಘವೇಂದ್ರ ಅವರ ಪತ್ನಿಯನ್ನು ಡೈರೆಕ್ಟರ್-1 ಮತ್ತು ವಿನಯಕುಮಾರ ಪತ್ನಿಯನ್ನು ಡೈರೆಕ್ಟರ್-2 ಎಂದು ನಾಮ ನಿರ್ದೇಶನ ಮಾಡಲಾಗಿತ್ತು. 12 ಲಕ್ಷ ರೂ.ಬಂಡವಾಳ ಹೂಡಿರುವ ರಾಘವೇಂದ್ರ ಅವರಿಗೆ ವಿನಯಕುಮಾರ ಆನ್‍ಲೈನ್ ಆಫ್‍ಲೈನ್ ಡೀಪಾರ್ಟ್‍ಮೆಂಟಲ್ ಸ್ಟೋರ್‍ದಿಂದ ಬಂದ ಲಾಭಾಂಶ ನೀಡೆದೆ 12.14 ಕೋಟಿ ರೂ.ವಂಚನೆ ಮಾಡಿದ್ದು, ಈ ಸಂಬಂಧ ರಾಘವೇಂದ್ರ ಅವರು ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ತನಿಖೆ ನಡೆದಿದೆ.