12+ ವಯಸ್ಕರಿಗೆ ಫೈಜರ್ ಲಸಿಕೆ ಸೂಕ್ತ

ನವದೆಹಲಿ, ಮೇ ೨೭-ಹನ್ನೆರಡು ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟವರಿಗೆ ತಾವು ಅಭಿವೃದ್ಧಿ ಪಡಿಸಿರುವ ಕೋವಿಡ್ ಲಸಿಕೆ ಸೂಕ್ತ ಎಂದು ಅಮೇರಿಕಾದ ದೈತ್ಯ ಔಷಧ ತಯಾರಿಕಾ ಕಂಪನಿ ಫೈಝರ್ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿದ್ದು ಶೀಘ್ರ ಅನುಮತಿ ನೀಡುವಂತೆ ಮನವಿ ಮಾಡಿದೆ.
ಭಾರತದಲ್ಲಿ ಕಾಣಿಸಿಕೊಂಡಿರುವ ರೂಪಾಂತರ ಸೋಂಕು ತಡೆಗಟ್ಟಲು ಪೈಝರ್ ಲಸಿಕೆ ಅತ್ಯಂತ ಪರಿಣಾಮಕಾರಿಯಾಗಿದೆ. ಹೀಗಾಗಿ ಶೀಘ್ರ ಅನುಮತಿ ನೀಡುವ ಸಂಬಂಧ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿರುವುದಾಗಿ ಸಂಸ್ಥೆಯ ಸಿಇಒ ಅಲ್ಬರ್ಟ್ ಬೌರ್ಲಾ ತಿಳಿಸಿದ್ದಾರೆ .
ಜುಲೈ ಮತ್ತು ಅಕ್ಟೋಬರ್ ತಿಂಗಳ ಒಳಗಾಗಿ ಭಾರತ ಸರ್ಕಾರಕ್ಕೆ ೫ ಕೋಟಿ ಲಸಿಕೆಯನ್ನು ಪೂರೈಕೆ ಮಾಡಲು ಕೂಡ ಸಿದ್ಧವಿದ್ದು ಕಳೆದ ಎರಡು ಮೂರು ವಾರಗಳಿಂದ ಕೇಂದ್ರ ಸರ್ಕಾರ ಮತ್ತು ಔಷಧ ತಯಾರಿಕಾ ಸಂಸ್ಥೆಯ ನಡುವೆ ಮಾತುಕತೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.
ಅಮೆರಿಕದ ಫೈಜರ್ ಹಾಗೂ ಬಯೋನ್ ಟೆಕ್ ಸಂಸ್ಥೆ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕೊರೊನಾ ಲಸಿಕೆ ೨-೮ ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಸಂಗ್ರಹಿಸಬಹುದು. ಹೀಗಾಗಿ ಕೊರೊನಾ ತಡೆಗಟ್ಟುವಲ್ಲಿ ಲಸಿಕೆ ಶೇಕಡಾ ೯೧ಕ್ಕಿಂತಲೂ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಹೇಳಿದೆ.

ಈಗಾಗಲೇ ಕ್ಲಿನಿಕಲ್ ಪ್ರಯೋಗದ ಫಲಿತಾಂಶಗಳು, ಈ ಲಸಿಕೆ ವಯಸ್ಕರಿಗಿಂತಲೂ ಮಕ್ಕಳ ಮೇಲೆ ಪ್ರಯೋಜನಕಾರಿ ಪರಿಣಾಮ ಬೀರಲಿದೆ ಎಂಬುದನ್ನು ತೋರಿಸಿದೆ. ಹೀಗಾಗಿ ೧೨ ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟವರಿಗೆ ನಮ್ಮ ಲಸಿಕೆ ಸೂಕ್ತ ಎಂದು ಸಂಸ್ಥೆ ತಿಳಿಸಿದೆ.

ಈಗಾಗಲೇ ಅಮೆರಿಕದಲ್ಲಿ ೧೨ ರಿಂದ ೧೫ ವರ್ಷ ವಯಸ್ಸಿನ ಮಕ್ಕಳಿಗೆ ಫೈಜರ್ ಲಸಿಕೆ ನೀಡಲಾಗುತ್ತಿದೆ. ಭಾರತಕ್ಕೆ ಲಸಿಕೆ ತರಲು ಕೆಲವು ಷರತ್ತುಗಳಿದ್ದು, ಕೇಂದ್ರ ಸರ್ಕಾರ ಹಾಗೂ ಫೈಜರ್ ಈ ಬಗ್ಗೆ ಚರ್ಚಿಸಿವೆ. ಷರತ್ತುಗಳಿದ್ದರೂ ಫೈಜರ್ ೨೦೨೧ ರಲ್ಲಿ ತನ್ನ ೫೦ ದಶಲಕ್ಷ ಲಸಿಕೆಗಳನ್ನು ಭಾರತಕ್ಕೆ ಪೂರೈಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.

ಅಮೆರಿಕದ ಮತ್ತೊಂದು ಲಸಿಕೆ ತಯಾರಿಕಾ ಕಂಪನಿಯಾದ ಮಾಡೆರ್ನಾ ಕೂಡ, ಮುಂಬೈ ಮೂಲದ ಸಿಪ್ಲಾ ಔಷಧೀಯ ಕಂಪನಿಯೊಂದಿಗಿನ ವಿಶ್ಲೇಷಣೆಯ ಬಳಿಕ ಭಾರತದಲ್ಲಿ ತನ್ನ ಕೋವಿಡ್-೧೯ ಲಸಿಕೆಗಳನ್ನು ತಯಾರಿಸಲು ಮುಂದಾಗಿದೆ.

೧೨ ರಿಂದ ೧೭ ವರ್ಷದ ಸುಮಾರು ೩,೭೦೦ ಮಕ್ಕಳನ್ನು ಅಧ್ಯಯನಕ್ಕೆ ಒಳಪಡಿಸಿರುವ ಮಾಡೆರ್ನಾ, ತನ್ನ ಲಸಿಕೆ ೧೨ ವರ್ಷ ವಯಸ್ಸಿನ ಮಕ್ಕಳಿಗೆ ಸಹಕಾರಿಯಾಗಿದೆ ಎಂದು ಅಮೇರಿಕಾ ಸರ್ಕಾರಕ್ಕೆ ತಿಳಿಸಿತ್ತು.

ಈ ಹಿಂದೆ ದೆಹಲಿ ಹಾಗೂ ಪಂಜಾಬ್ ಸರ್ಕಾರಗಳು ರಾಜ್ಯಕ್ಕೆ ಲಸಿಕೆ ಪೂರೈಸುವಂತೆ ಫೈಜರ್ ಮತ್ತು ಮಾಡೆರ್ನಾ ಕಂಪನಿಗಳಿಗೆ ಕೇಳಿದ್ದವು. ಆದರೆ ಕೇಂದ್ರ ಸರ್ಕಾರದೊಂದಿಗೆ ಒಪ್ಪಂದವಾಗದ ಕಾರಣ ನೇರವಾಗಿ ದೆಹಲಿ-ಪಂಜಾಬ್‌ಗೆ ವ್ಯಾಕ್ಸಿನ್ ಪೂರೈಸಲು ಫೈಜರ್ ಮತ್ತು ಮಾಡೆರ್ನಾ ನಿರಾಕರಿಸಿದ್ದವು.

ಮೂರನೇ ಕೊರೊನಾ ಅಲೆ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದು, ಫೈಜರ್ ಲಸಿಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡಲಿದೆಯೇ ಎನ್ನುವುದು ಈಗಿರುವ ಪ್ರಶ್ನೆ.

೩ ಲಸಿಕೆ ಬಳಕೆ

ದೇಶದಲ್ಲಿ ಸದ್ಯ ಮೂರು ಸೋಂಕಿನ ಲಸಿಕೆ ಬಳಕೆಗೆ ಅನುಮತಿ ನೀಡಲಾಗಿದ್ದು ಅದರಲ್ಲಿ ಎರಡು ಲಸಿಕೆಗಳು ಜನರಿಗೆ ನೀಡಲಾಗುತ್ತಿದೆ.

ಕೋವಿಶೀಲ್ಡ್, ,ಕೋವಾಕ್ಸಿನ್ ಮತ್ತು ಸ್ಪುಟ್ನಿಕ್ – ವಿ ಲಸಿಕೆಗೆ ಅನುಮತಿ ನೀಡಲಾಗಿದೆ. ಇದೀಗ ಅಮೆರಿಕದ ದೈತ್ಯ ಔಷಧ ತಯಾರಿಕಾ ಸಂಸ್ಥೆ ಫೈಜರ್ ಕೂಡ ಲಸಿಕೆಗೆ ಅನುಮತಿ ನೀಡುವಂತೆ ಮನವಿ ಮಾಡಿದೆ.