12 ನೇ ಶತಮಾನ ವಿಶ್ವಕ್ಕೆ ಬೆಳಕು ನೀಡಿದ ಯುಗ; ಪಂಡಿತಾರಾಧ್ಯ ಶ್ರೀ

ದಾವಣಗೆರೆ. ಜು.೨೭; ಮಹಾಪುರುಷರಿಗೆ ಯಾವುದೇ ಜಾತಿ, ಭಾಷೆ, ಧರ್ಮ ಇರಲ್ಲ. ಅವರು ಮಾನವ ಧರ್ಮಕ್ಕೆ ಸೇರಿದವರಾಗಿದ್ದಾರೆ. ಅದು ಲಿಂಗಾಯತ ಧರ್ಮ. ಲಿಂಗಾಯತ  ಧರ್ಮವೇ ಮಾನವ ಧರ್ಮ. ಜಡದೇವರನ್ನು ಪೂಜಿಸುವ ಬದಲು ಇಷ್ಟಲಿಂಗ ಪೂಜೆ ಮಾಡಿ ನಮ್ಮಲ್ಲೇ ದೇವರನ್ನು ಕಾಣಬೇಕೆಂದು ಸಾಣೇಹಳ್ಳಿ ಮಠದ ಪೀಠಾಧ್ಯಕ್ಷ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.ನಗರದ ಶಿವಯೋಗಿ ಮಂದಿರದಲ್ಲಿ ಆಯೋಜಿಸಲಾಗಿದ್ದ ಶಿವಶರಣ ನಿಜಸುಖಿ ಹಡಪದ ಅಪ್ಪಣ್ಣ ಶರಣರ 888ನೇ ಜಯಂತ್ಯೋತ್ಸವದ ಸಾನಿಧ್ಯ ವಹಿಸಿ ಮಾತನಾಡಿದರು.12ನೇ ಶತಮಾನದ ಕ್ರಾಂತಿ ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತ ಆಗಿರಲಿಲ್ಲ‌ ಇಡೀ ವಿಶ್ವಕ್ಕೆ ಬೆಳಕು ನೀಡಿದ ಶತಮಾನ. ಅಂತಹ ಕ್ರಾಂತಿ ಮಾಡಿದ ಬಸವಣ್ಣನವರ ಕಾರ್ಯದರ್ಶಿ ಅಗಿ ಕೆಲಸ ಮಾಡಿದ ಮಹಾನ್ ವ್ಯಕ್ತಿ ಹಡಪದ ಅಪ್ಪಣ್ಣ ಎಂದು ಹೇಳಿದರು.ಸಮಾಜದಲ್ಲಿ ಇಂದಿಗೂ ನಾವು ಜಾತಿ ವ್ಯವಸ್ಥೆ ನೋಡುತ್ತಿದ್ದೇವೆ. ಒಬ್ಬರನ್ನೊಬ್ಬರು ಮುಟ್ಟಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ. ಅದರೆ, 12ನೇ ಶತಮಾನದಲ್ಲಿ ತಳ ಸಮುದಾಯದಲ್ಲಿದ್ದ ಹಲವು ಸಮಾಜಗಳನ್ನು ಮುಟ್ಟಿ ಮಾತನಾಡಿಸಿ ಸಾಮಾನ್ಯ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದರು. ನಾವು ಸುಂದರವಾಗಿ ಕಾಣಲು ಹಡಪದ ಸಮಾಜದ ಅಗತ್ಯ ‌ ಎಂದರು.ಬಸವಣ್ಣ ಕಾಲದಲ್ಲಿ ಕಷ್ಟ ಕುಲ ನಿವಾರಣೆ ಆಗಿದೆ. ಅಂದರೆ ಕೇವಲ ದುಡಿಮೆಯನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದ ಕುಟುಂಬಗಳಿಗೆ ಹೊಟ್ಟೆ ತುಂಬಿಸಿಕೊಳ್ಳಲು ಸಾಧ್ಯ ಆಗುತ್ತಿರಲಿಲ್ಲ. ಇಂತಹ ಅಸಮಾನತೆ, ಅನಿಷ್ಟ ಕಾಲದಲ್ಲಿ ಅವರಿಗೆ ಲಿಂಗದೀಕ್ಷೆ ನೀಡಿ ನೀವು ಯಾರಿಗೂ ಕಡಿಮೆ ಎಂದು ತೋರಿಸುವ ಮೂಲಕ ತಳ ಸಮುದಾಯದಲ್ಲಿ ಆತ್ಮವಿಶ್ವಾಸ ತುಂಬಿದರು ಎಂದು ತಿಳಿಸಿದರು.

ಇಂದಿನ ದಿನಗಳಲ್ಲಿ ಮಾನವನಿಗೆ ಸಂಸ್ಕಾರ ಅಗತ್ಯ. ಮನಸ್ಸು ಶುದ್ದವಾಗಿದ್ದರೆ ಉತ್ತಮ ಆಲೋಚನೆಗಳು ಬರುತ್ತವೆ. ಇಲ್ಲವಾದರೆ ವಿಚಾರಗಳು ನಮ್ಮ ಮನಸ್ಸನ್ನು ಹಾಳು ಮಾಡುತ್ತವೆ. ಕಾರಣ ಮನಸ್ಸಿನಲ್ಲಿ ಕೊಳಕು ತುಂಬಿಕೊಳ್ಳದೇ ಬೆಳಕು ತುಂಬಿಕೊಳ್ಳಬೇಕು‌. ಮನುಷ್ಯತ್ವ ಮೈಗೂಡಿಸಿಕೊಂಡು ಸಮಾಜದ ಅಭಿವೃದ್ಧಿ ಕಡೆ ಆಲೋಚನೆ ಮಾಡಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಹಡಪದ ಅಪ್ಪಣ್ಣ ಸಮಾಜದ ಜಿಲ್ಲಾಧ್ಯಕ್ಷ  ಹೆಚ್.ಶಶಿಧರ್ ಬಸಾಪುರ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಹೆಚ್.ಎಸ್.ಶಿವಶಂಕರ್,ತಂಗಡಗಿ ಕ್ಷೇತ್ರದ ಅನ್ನದಾನ ಭಾರತಿ ಬಸವಪ್ರಿಯ ಹಡಪದ ಅಪ್ಪಣ್ಣ ಮಹಾಸ್ವಾಮಿ, ಮುಕಂದೂರಿನ ಡಾ.ಮಹಾಂತ ಬಸವ ಲಿಂಗಸ್ವಾಮಿ, ಬಸವ ಬಳಗದ ವಿ.ಸಿದ್ದರಾಮಣ್ಣ, ದೇವರ ಮನೆ ಶಿವಕುಮಾರ್, ಹೇಮಂತರಾಜ್, ಸಿದ್ದಪ್ಪ ಹಡಪದ, ಚಿದಾನಂದ ಬಸರಕೋಡ, ಸಂಗಪ್ಪ ಹಡಪದ, ಎಸ್.ಎನ್.ಕರಿಸಿದ್ದಪ್ಪ, ಚಿದಾನಂದ ಹಡಪದ, ಎನ್. ಜೆ.ಶಿವಕುಮಾರ್ ಇತರರು ಇದ್ದರು.