12 ಕಂಪನಿಗಳ ವೆಬ್‌ಸೈಟ್‌ಗೆ ಶ್ರೀಕಿ ಕನ್ನ

ಬೆಂಗಳೂರು,ನ.೧೭- ಬಹುಕೋಟಿ ಬಿಟ್ ಕಾಯಿನ್ ಹಗರಣದ ಸಂಬಂಧ ಅಂತರಾಷ್ಟ್ರೀಯ ಹ್ಯಾಕರ್ ಶ್ರೀಕಿ ಅಲಿಯಾಸ್ ಶ್ರೀಕೃಷ್ಣ ಬರೋಬ್ಬರಿ ೧೨ ಕಂಪನಿಗಳನ್ನು ಹ್ಯಾಕಿಂಗ್ ಮಾಡಿರುವುದು ಬೆಳಕಿಗೆ ಬಂದಿದೆ.
ಹ್ಯಾಕರ್ ಶ್ರೀಕಿ ಹ್ಯಾಕಿಂಗ್ ಮಾಡಿರುವ ಸಂಬಂಧಿಸಿದಂತೆ ೧೨ ಕಂಪನಿಗಳಿಗೆ ಸಿಸಿಬಿ ಅಧಿಕಾರಿಗಳು ವಿವರವಾದ ಪತ್ರ ಬರೆದಿದ್ದಾರೆ.
ಸಿಸಿಬಿ ಅಧಿಕಾರಿಗಳ ಇಂಟರ್ ಪೋಲ್ ಪತ್ರಕ್ಕೆ ಎಕ್ಸ್‌ಚೇಂಜ್ ಅಧಿಕಾರಿಗಳು ಕ್ಯಾರೇ ಎಂದಿಲ್ಲ ಆದರೆ ಜಪಾನ್ ಮೂಲದ ಕಂಪನಿಯೊಂದು ಪ್ರತಿಕ್ರಿಯೆ ನೀಡಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ಈ ನಡುವೆ ಹ್ಯಾಕರ್ ಶ್ರೀಕಿ ೧೨ ಕಂಪನಿಗಳ ವೆಬ್‌ಸೈಟ್ ಹ್ಯಾಕ್ ಮಾಡಿದ್ದು ಆತನ ವಿರುದ್ಧ ಇಂಟರ್ ಪೋಲ್ ನಿಂದ ಕ್ರಮಕೈಗೊಳ್ಳಿ ಎಂದು ನಗರ ಪೊಲೀಸ್ ಆಯುಕ್ತ ಅವರಿಗೆ ತನಿಖಾಧಿಕಾರಿ ಇನ್ಸ್‌ಪೆಕ್ಟರ್ ಚಂದ್ರಾದರ್ ಪತ್ರದ ಮೂಲಕ ಮನವಿ ಸಲ್ಲಿಸಿದ್ದರು.
ಶ್ರೀಕಿ, ದೇಶ, ವಿದೇಶದಲ್ಲಿ ಸಾಕಷ್ಟು ಹ್ಯಾಕಿಂಗ್ ಮಾಡಿದ್ದಾನೆ. ದೇಶದಲ್ಲಿ ಮಾತ್ರವಲ್ಲದೇ ವಿದೇಶದಲ್ಲಿ ಕೂಡ ವಂಚನೆಮಾಡಿದ್ದು, ತನಿಖಾ ವ್ಯಾಪ್ತಿಯು ಹೆಚ್ಚಾಗಿರುದರಿಂದ ನಾವು ತನಿಖೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಇಂಟರ್ ಪೋಲ್‌ಗೆ ಪತ್ರ ಬರೆಯಲಾಗಿದೆ ಎಂದು ತಿಳಿದುಬಂದಿದೆ.
ಲ್ಯಾಪ್‌ಟಾಪ್ ಸಿಐಡಿಗೆ:
ಈ ನಡುವೆ ಹೋಟೆಲ್ ಸಿಬ್ಬಂದಿಗೆ ಹಲ್ಲೆ ನಡೆಸಿದ ಆರೋಪದ ಮೇಲೆ ಬಂಧಿತನಾಗಿದ್ದ ಹ್ಯಾಕರ್ ಶ್ರೀಕಿ ಬಳಸುತ್ತಿದ್ದ ಲ್ಯಾಪ್‌ಟಾಪ್‌ಅನ್ನು ಸಿಐಡಿಗೆ ರವಾನಿಸಲಾಗಿದೆ.
ಫೈವ್ ಸ್ಟಾರ್ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದ ಶ್ರೀಕಿ ಹಾಗೂ ಭೀಮಾ ಜ್ಯುವೆಲರ್ಸ್ ಮಾಲೀಕರ ಮಗ ವಿಷ್ಣು ಭಟ್ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿತ್ತು.
ಹೋಟೆಲ್ ಸಿಬ್ಬಂದಿ ನೀಡಿದ ದೂರಿನ ಮೇರೆಗೆ ಜೀವನ್ ಭೀಮಾನಗರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಸದ್ಯ ಜಾಮೀನಿನ ಮೇಲೆ ಶ್ರೀಕಿ ಹೊರಬಂದಿದ್ದು ಆತನ ಲ್ಯಾಪ್‌ಟಾಪ್ ವಶಪಡಿಸಿಕೊಂಡಿರುವ ಸಿಐಡಿ ಅಧಿಕಾರಿಗಳು, ಪರಿಶೀಲನೆಗೆ ಮುಂದಾಗಿದ್ದಾರೆ.
ಪೊಲೀಸರ ಸ್ಪಷ್ಟನೆ:
ಬಿಟ್‌ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷಗಳ ಆರೋಪಗಳ ನಡುವೆಯೇ ನಗರ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ್ದು, ಇಂಟರ್‌ಪೋಲ್‌ನೊಂದಿಗಿನ ಸಂವಹನದಲ್ಲಿ ಕಂಡು ಬಂದ ಅಪರಾಧ ಸಂಖ್ಯೆಯಲ್ಲಿನ ತಪ್ಪು ಮುದ್ರಣ ದೋಷವಾಗಿದೆ ಎಂದು ತಿಳಿಸಿದೆ.
ಈ ಮೂಲಕ ಪ್ರಕರಣವೊಂದಕ್ಕೆ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ನಗರ ಪೊಲೀಸರು ಸ್ಪಷ್ಟನೆ ನೀಡಿದಂತಾಗಿದೆ.
ಬಿಟ್ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಟ್ವೀಟ್ ಮಾಡಿರುವ ನಗರ ಪೊಲೀಸರು, ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಮಾಡಿದ ಹ್ಯಾಕಿಂಗ್ ಬಗ್ಗೆ ೨೦೨೧ ರ ಎಪ್ರಿಲ್ ೨೮ ರಂದು ಇಂಟರ್‌ಪೋಲ್ ಸಂಪರ್ಕ ಅಧಿಕಾರಿಯ ಸಿಐಡಿಗೆ ಪತ್ರ ಬರೆಯಲಾಗಿತ್ತು.
ಮುದ್ರಣ ದೋಷ:
ಇಂಟರ್‌ಪೋಲ್‌ನೊಂದಿಗಿನ ಹಂಚಿಕೊಂಡ ಪತ್ರದಲ್ಲಿ ಮುದ್ರಣ ದೋಷದಿಂದಾಗಿ ಅಪರಾಧಗಳ ಸಂಖ್ಯೆಯಲ್ಲಿ ತಪ್ಪಾಗಿದೆ ಎಂದು ಹೇಳಿದೆ.ಅಲ್ಲದೆ, ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ವಿರುದ್ಧ ಕಾಟನ್‌ಪೇಟೆ, ಸೈಬರ್ ಕ್ರೈಂ, ಕೆಂಪೇಗೌಡನಗರ, ಅಶೋಕನಗರ ಠಾಣೆಗಳಲ್ಲಿ ಹ್ಯಾಕಿಂಗ್ ಕುರಿತು ದಾಖಲಾಗಿರುವ ನಾಲ್ಕು ಪ್ರಕರಣಗಳ ವಿವರಗಳನ್ನು ಉಲ್ಲೇಖಿಸಿರುವುದು ಕಂಡು ಬಂದಿದೆ.
ವಿವಿಧ ವೆಬ್‌ಸೈಟ್‌ಗಳು ಮತ್ತು ಬಿಟ್‌ಕಾಯಿನ್ ವಿನಿಮಯ ಕೇಂದ್ರಗಳಲ್ಲಿ ಹ್ಯಾಕಿಂಗ್ ಮತ್ತು ರಾನ್ಸಮ್‌ವೇರ್ ದಾಳಿ ಸೇರಿದಂತೆ ಇತರ ಅಪರಾಧಗಳನ್ನು ಆರೋಪಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆಂದು ಪತ್ರದಲ್ಲಿ ತಿಳಿಸಲಾಗಿದೆ.ಇದರಲ್ಲಿ ಶ್ರೀಕಿ ಹ್ಯಾಕ್ ಮಾಡಿದ್ದಾನೆ ಎನ್ನಲಾದ ೧೨ ವೆಬ್‌ಸೈಟ್‌ಗಳು ಮತ್ತು ಬಿಟ್‌ಕಾಯಿನ್ ಎಕ್ಸ್‌ಚೇಂಜ್‌ಗಳ ಹೆಸರನ್ನೂ ಕೂಡ ಉಲ್ಲೇಖಿಸಿರುವುದು ಕಂಡು ಬಂದಿದೆ.
ಕ್ರಿಫ್ಟೋ ಕರೆನ್ಸಿ:
ಶ್ರೀಕಿಯನ್ನು ಬಳಸಿಕೊಂಡು ಪ್ರಭಾವಿಗಳು ಆತನಿಂದ ೫ಸಾವಿರಕ್ಕೂ ಹೆಚ್ಚಿನ ಕ್ರಿಫ್ಟೋ ಕರೆನ್ಸಿಗಳನ್ನು ದುರುಪಯೋಗ ಪಡಿಸಿಕೊಂಡಿರುವ ವದಂತಿಗಳು ಇರುವುದರಿಂದ ಪ್ರಕರಣ ಗಂಭೀರತೆ ಪಡೆದುಕೊಂಡಿದೆ.
ಸರ್ಕಾರ ಮತ್ತು ಪೊಲೀಸರು ಹ್ಯಾಕಿಂಗ್‌ಗೆ ಒಳಗಾದವರು ಯಾರೂ ಮುಂದೆ ಬಂದು ದೂರು ಕೊಟ್ಟಿಲ್ಲ. ಇಲ್ಲಿ ಹಗರಣವೇ ನಡೆದಿಲ್ಲ ಎಂಬರ್ಥದಲ್ಲಿ ಸಮರ್ಥನೆ ಮಾಡಿಕೊಳ್ಳಲು ಆರಂಭಿಸಿದ್ದಾರೆ.
ಇಡಿಗೆ ಸವಾಲು:
ಬಹುತೇಕ ಪ್ರಕರಣ ಇದೇ ರೀತಿಯ ತಿರುವು ಪಡೆದುಕೊಳ್ಳಲಿದೆ ಎಂಬ ಮಾಹಿತಿಯನ್ನು ಆರಂಭದಲ್ಲೇ ಪಡೆದಿದ್ದ ಚಾಣಾಕ್ಷರು ಹ್ಯಾಕರ್‌ಗಳನ್ನು ಬಳಸಿಕೊಂಡು ಹಣ ಲೂಟಿ ಮಾಡಿದ್ದಾರೆ ಎಂಬ ಆರೋಪಗಳಿವೆ.
ಇಂತಹ ಜಠಿಲ ಪ್ರಕರಣವನ್ನು ಭೇದಿಸುವುದು ಪೊಲೀಸರು, ಸಿಬಿಐ, ಇಡಿಗೆ ಸವಾಲಿನ ಕೆಲಸವಾಗಿದೆ.
ತಾಂತ್ರಿಕವಾಗಿ ಪ್ರಕರಣ ಭೇದಿಸುವುದು ಅಷ್ಟು ಸುಲಭದ ಮಾತಲ್ಲ. ಹೀಗಾಗಿ ಒಂದಷ್ಟು ದಿನ ರಾಜಕೀಯ ಅಸ್ತ್ರವಾಗಿ ಚರ್ಚೆಯಾಗಬಹುದೇ ಹೊರತು ಆರೋಪಿಗಳಿಗೆ ಶಿಕ್ಷೆಯಾಗಲಿದೆ. ದುರುಪಯೋಗವಾಗಿದ್ದ ಹಣ ವಸೂಲಿಯಾಗಲಿದೆ ಎಂಬ ನಿರೀಕ್ಷೆಗಳು ಕಾರ್ಯಸಾಧುವಲ್ಲ.