12ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ವಚನ ಚಳವಳಿ ಜನಸಾಮಾನ್ಯರ ಅಂದೋಲನವಾಗಿತ್ತು:ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ,ಆ.31: 12ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ವಚನ ಚಳವಳಿ ಜನಸಾಮಾನ್ಯರ ಆಂದೋಲನವಾಗಿತ್ತು ಎಂದು ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ನುಡಿದರು.
ಕಲಬುರಗಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯತ್ ಇವುಗಳ ಸಹಯೋಗದೊಂದಿಗೆ ಗುರುವಾರ ನಗರದ ಎಸ್.ಎಂ. ಪಂಡಿತ ರಂಗ ಮಂದಿರದಲ್ಲಿ ಆಯೋಜಿಸಿದ್ದ ನುಲಿಯ ಚಂದಯ್ಯನವರ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಂದಿನ ಅನುಭವ ಮಂಟಪವೆಂಬ ಪಾರ್ಲಿಮೆಂಟ್‍ನಲ್ಲಿ ನುಲಿಯ ಚಂದಯ್ಯ ಕೂಡ ಭಾಗವಹಿಸಿ ಕಾಯಕದ ಮಹತ್ವ ಸಾರಿದ ನಿಜ ಶರಣ ನುಲಿಯ ಚಂದಯ್ಯ ಎಂದು ತಿಳಿಸಿದರು.
ನುಲಿಯ ಚಂದಯ್ಯ ಹಾಗೂ ಮುಂತಾದ ಶರಣರ ವಾರಸುದಾರರಾದ ಸಮಾಜದ ಇತರೆ ಜನಾಂದವರೆಲ್ಲರೂ ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯಬೇಕು ಎಂದು ಕರೆ ನೀಡಿದರು.
ಕೊರವ ಜನಾಂಗದ ಸಮಾಜದ ಜನಾಂಗದ ಅಭಿವೃದ್ಧಿಗಾಗಿ ಸಮುದಾಯ ಭವನಕ್ಕೆ ಶಾಸಕರ ನಿಧಿಯಿಂದ ಅನುದಾನ ಒದಗಿಸುವ ಭರವಸೆ ನೀಡಿದರು.
ಶರಣ ನುಲಿಯ ಚಂದಯ್ಯನವರ ಜೀವನ ಸಾಧನೆ ಕುರಿತು ವಿಶೇಷ ಉಪನ್ಯಾಸ ನೀಡಿದ ಸಾಹಿತಿ ಡಾ. ಶಿವರಂಜನ ಸತ್ಯಂಪೇಟೆ ಅವರು ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಶಿವಣಗಿಯಲ್ಲಿ ಹುಟ್ಟಿ ಬೆಳೆದು ಬಸವಕಲ್ಯಾಣಲ್ಲಿ ನೆಲೆನಿಂತ ಚಂದಯ್ಯನವರು ನುಲೇನೂರನಲ್ಲಿ ಐಕ್ಯರಾದರು ಎಂದು ತಿಳಿಸಿದರು.
ನುಲಿಯ ಚಂದಯ್ಯನವರು ರಚಿಸಿದ ಚಂದೇಶ್ವರ ಲಿಂಗ ಆಂಕಿತದ 48 ವಚನಗಳು ಲಭ್ಯವಿದ್ದು, ಕಾಯಕ ಮತ್ತು ದಾಸೋಹಕ್ಕೆ ಹೆಚ್ಚಿನ ಒತ್ತು ನೀಡಿದ್ದರು. ಸತ್ಯ ಶುದ್ಧ ಕಾಯಕಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ ಎಂದು ತಿಳಿಸಿದರು.
ಪಾಳಾ ಮೂಲ ಕಟ್ಟಿಮನಿ ಹಿರೇಮಠದ ಡಾ. ಗುರುಮೂರ್ತಿ ಶಿವಾಚಾರ್ಯರು, ಮಕ್ತಂಪುರದ ಗದ್ದುಗೆ ಮಠದ ಚರಲಿಂಗ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಇದೇ ಸಂದರ್ಭದಲ್ಲಿ ಸಮಾಜದ ಮುಖಂಡರುಗಳಿಗೆ ಸನ್ಮಾನಿಸಿದರು.
ಜಯಂತ್ಯುತ್ಸವ ಸಮಿತಿ ಜಿಲ್ಲಾಧ್ಯಕ್ಷ ಶರಣು ಭಜಂತ್ರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ಮುಖಂಡರಾದ ಸೂರ್ಯಕಾಂತ ನಿಂಬಾಳಕರ್, ಜಿಲ್ಲಾ ಜಯಂತೋತ್ಸವ ಸಮಿತಿ, ನೂಲಿ ಚಂದಯ್ಯ ಜಿಲ್ಲಾಧ್ಯಕ್ಷ ಶರಣು ಭಜಂತ್ರಿ, ಸಾಯಬಣ್ಣ ಭಜಂತ್ರಿ, ಈರಣ್ಣ ಭಜಂತ್ರಿ, ಮಂಜುಳಾ ಸೇರಿದಂತೆ ಗಣ್ಯ ವ್ಯಕ್ತಿಗಳು ಹಾಜರಿದ್ದರು.
ಸುನಿಲ್ ಮಾನ್ಪಡೆ ಸ್ವಾಗತಿಸಿದರು. ಸಿದ್ದು ಪಾಳಾ ವಂದಿಸಿದರು.