115 ಪುಸ್ತಕಗಳ ಲೋಕಾರ್ಪಣೆ 25 ರಂದು

ಕಲಬುರಗಿ,ಮಾ.23-ಇಲ್ಲಿನ ಸಿದ್ಧಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನ, ಸಿದ್ಧಲಿಂಗೇಶ್ವರ ಪ್ರಕಾಶನ ಹಾಗೂ ಬಸವ ಪ್ರಕಾಶನದ 46ನೇ ವಾರ್ಷಿಕೋತ್ಸವ ಹಾಗೂ 115 ಪುಸ್ತಕಗಳ ಲೋಕಾರ್ಪಣೆ ಸಮಾರಂಭವನ್ನು ಮಾ.25 ರಂದು ಬೆಳಿಗ್ಗೆ 10.30ಕ್ಕೆ ನಗರದ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಿದ್ಧಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನ ಸಂಸ್ಥೆಯ ಸಂಸ್ಥಾಪಕರಾದ ಬಸವರಾಜ ಜಿ.ಕೊನೇಕ ತಿಳಿಸಿದರು.
ನಗರದ ಸಿದ್ಧಲಿಂಗೇಶ್ವರ ಬುಕ್ ಮಾಲ್‍ನಲ್ಲಿ ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಡದಾಳ ತೇರಿನಮಠದ ಡಾ.ಚನ್ನಮಲ್ಲ ಶಿವಯೋಗಿ ಶಿವಾಚಾರ್ಯರು ಸಮಾರಂಭದ ಸಾನಿಧ್ಯವಹಿಸುವರು. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಅವರು ಸಮಾರಂಭ ಉದ್ಘಾಟಿಸುವರು. ಹಿರಿಯ ಸಾಹಿತಿ ಪ್ರೊ.ಮಲ್ಲಿಕಾರ್ಜುನ ಹಿರೇಮಠ ಪುಸ್ತಕ ಲೋಕಾರ್ಪಣೆ ಮಾಡುವರು. ಹಿರಿಯ ಪತ್ರಕರ್ತ ರವೀಂದ್ರ ಭಟ್, ಗುಲಬರ್ಗಾ ವಿಶ್ವವಿದ್ಯಾಲಯದ ಕುಲಸಚಿವ ಬಿ.ಶರಣಪ್ಪ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.
ಯುವಕರು, ಉದಯೋನ್ಮುಖ ಬರಹಗಾರರು ಮತ್ತು ಮಹಿಳೆಯರ ಕೃತಿಗಳನ್ನು ಪ್ರಕಟಿಸುವುದರ ಮೂಲಕ ಎಲೆ ಮರೆಯ ಕಾಯಿಯಂತೆ ಇದ್ದ ಲೇಖಕರನ್ನು ಬೆಳಕಿಗೆ ರುವ ಪ್ರಾಮಾಣಿಕ ಪ್ರಯತ್ನ ಮಾಡಿದೆ. ಅಲ್ಲದೆ ಈ ಭಾಗದ ಲೇಖಕರ ಹೆಚ್ಚಿನ ಕೃತಿಗಳನ್ನು ಪ್ರಕಟಿಸುವುದರ ಮೂಲಕ ನಾಡಿನಾದ್ಯಂತ ಅವರಿಗೆ ಬೇಡಿಕೆ ಬರುವಂತೆ ಮಾಡಿದ ಶ್ರೇಯಸ್ಸು ಸಿದ್ಧಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನ ಸಂಸ್ಥೆಗೆ ಸಲ್ಲುತ್ತದೆ ಎಂದರು.
ಈ ಬಾರಿ ವಿವಿಧ ಪ್ರಕಾರದÀ 75 ಸಾಹಿತ್ಯ ಕೃತಿಗಳನ್ನು ಪ್ರಕಟಿಸಲಾಗಿದ್ದು, ಮುಂದಿನ ದಿನಗಳಲ್ಲಿ ಸಂಖ್ಯೆಗಿಂತ ಮೌಲಿಕತೆಗೆ ಹೆಚ್ಚಿನ ಒತ್ತು ನೀಡಲಾಗುವುದು. ಈ ವರ್ಷ ಬಿಡುಗಡೆಯಾಗುವ 115 ಕೃತಿಗಳಲ್ಲಿ 75 ಸಾಹಿತ್ಯ ಕೃತಿಗಳಾಗಿದ್ದು, 40 ಪಠ್ಯ ಪುಸ್ತಕಗಳಾಗಿವೆ ಎಂದು ವಿವರಿಸಿದರು.
ಸನ್ಮಾನ
ಪ್ರಕಾಶನ ಸಂಸ್ಥೆಯ ಸಲಹಾ ಸಮಿತಿ ಸದಸ್ಯರಾದ ಪ್ರೊ.ಎಚ್.ಟಿ.ಪೋತೆ ಅವರು ಗಳಗನಾಥ ಸಾಹಿತ್ಯ ಪ್ರಶಸ್ತಿ, ಡಾ.ಸ್ವಾಮಿರಾವ ಕುಲಕರ್ಣಿ ಅವರು ವಿಭಾಗ ಮಟ್ಟದ ದಾಸ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ, ಡಾ.ಚಿ.ಸಿ.ನಿಂಗಣ್ಣ ಅವರು ದೇವರಾಜ ಅರಸು ಪ್ರಶಸ್ತಿ, ಡಾ.ಗವಿಸಿದ್ದಪ್ಪ ಪಾಟೀಲ ಅವರು ಬಿ.ಶಾಮಸುಂದರ ಪ್ರಶಸ್ತಿ, ಡಾ.ಜಯದೇವಿ ಗಾಯಕವಾಡ ಅವರು ಸಾಹಿತ್ಯ ಸಾರಥಿ ಪ್ರಶಸ್ತಿ, ಡಾ.ಶ್ರೀಶೈಲ ನಾಗರಾಳ ಅವರು ಸಗರನಾಡು ಸಂಸ್ಕøತಿ ಉತ್ಸವ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ, ಕಾವ್ಯಶ್ರೀ ಮಹಾಗಾಂವಕರ ಅವರು ಉತ್ತಮ ಲೇಖಕಿ ಪ್ರಶಸ್ತಿ ಮತ್ತು ಡಾ.ಶರಣಬಸಪ್ಪ ವಡ್ಡನೇರಿ ಅವರು ಧರಿಶ್ರೀ ಪ್ರಶಸ್ತಿ ಪಡೆದ ಹಿನ್ನೆಲೆಯಲ್ಲಿ ಸಮಾರಂಭದಲ್ಲಿ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ತಿಳಿಸಿದರು.
ಸಲಹಾ ಸಮಿತಿ ಸದಸ್ಯರಾದ ಪ್ರೊ.ಶಿವರಾಜ ಪಾಟೀಲ ಮತ್ತು ಡಾ.ಗವಿಸಿದ್ದಪ್ಪ ಪಾಟೀಲ ಅವರು ಮಾತನಾಡಿ, ಸಿದ್ಧಲಿಂಗೇಶ್ವರ ಪ್ರಕಾಶನ ಸಂಸ್ಥೆ ಈ ವರ್ಷ ಹೊರತಂದ 115 ಪುಸ್ತಕಗಳಲ್ಲಿ 20 ವಿಮರ್ಶೆ, 4 ಕಾದಂಬರಿ, 4 ವಚನ ಸಾಹಿತ್ಯ, 12 ಕಥಾ ಸಂಕಲನ, 2 ಜಾನಪದ, ಕಾವ್ಯ ಸಂಪಾದನೆ, ಚಿಂತನೆ, ದೃಶ್ಯಕಲೆ ಸೇರಿದಂತೆ 75 ಸಾಹಿತ್ಯ ಕೃತಿಗಳು ಮತ್ತು 40 ರಾಷ್ಟ್ರ್ರೀಯ ಶಿಕ್ಷಣ ನೀತಿಯ (ಎನ್‍ಇಪಿ) ಪಠ್ಯ ಪುಸ್ತಕಗಳು, 10 ಜನ ಹೊಸ ಲೇಖಕರ ಕೃತಿಗಳಿವೆ ಎಂದು ವಿವರಿಸಿದರು. ವಿನಮ್ರ ಸಾಧಕ ಪ್ರಶಸ್ತಿಗೆ ಭಾಜನರಾದ ಪ್ರಕಾಶಕ ಬಸವರಾಜ ಜಿ.ಕೊನೇಕ್ ಅವರಿಗೆ ಇದೇ ವೇಳೆ ಸಲಹಾ ಸಮಿತಿ ವತಿಯಿಂದ ಅಂದು ಸನ್ಮಾನಿಸಿ ಗೌರವಿಸಲಾಗುವುದು ಎಂದು ತಿಳಿಸಿದರು.
ಸಲಹಾ ಸಮಿತಿ ಸದಸ್ಯರಾದ ಡಾ.ಸ್ವಾಮಿರಾವ ಕುಲಕರ್ಣಿ, ಡಾ.ಚಿ.ಸಿ.ನಿಂಗಣ್ಣ, ಡಾ.ಶರಣಬಸಪ್ಪ ವಡ್ಡನಕೇರಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.