111 ಭಕ್ತರಿಂದ ಹಾವಗಿಲಿಂಗೇಶ್ವರ ಶಿವಾಚಾರ್ಯರಿಗೆ ತುಲಾಭಾರ

ಬೀದರ್:ಜ.13: ರಾಚೋಟೇಶ್ವರ ಸಂಸ್ಥಾನ ಮಠದ 11 ದಿನಗಳ ಸಿದ್ಧರಾಮೇಶ್ವರ ನಮ್ಮೂರ 11ನೇ ಜಾತ್ರಾ ಮಹೋತ್ಸವ ಭಾಲ್ಕಿ ತಾಲ್ಲೂಕಿನ ಹಲಬರ್ಗಾ ಗ್ರಾಮದಲ್ಲಿ ಸಡಗರ, ಸಂಭ್ರಮದ ಮಧ್ಯೆ ತೆರೆ ಕಂಡಿತು.
ಕೊನೆಯ ದಿನ ರಾಚೋಟೇಶ್ವರ ಸಂಸ್ಥಾನ ಮಠದಲ್ಲಿ ರಾಚೋಟೇಶ್ವರ ಕರ್ತೃ ಗದ್ದುಗೆ, ಸಿದ್ಧರಾಮೇಶ್ವರರು ತೋಡಿದ ಬಾವಿಯ ಜಲಕ್ಕೆ ಪೂಜೆ, ಪ್ರವಚನ, ಧರ್ಮ ಸಭೆ, ಅನ್ನ ದಾಸೋಹ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.
ಜಾತ್ರೆ ಅವಧಿಯಲ್ಲಿ ಮಹಾದೇವ ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಕರಿಬಸವೇಶ್ವರ ಉದ್ಯಾನ, ಸೋಮೇಶ್ವರ ನಿಲಯದ ಉದ್ಘಾಟನೆ ನಡೆದವು. ಹಲಬರ್ಗಾ ಹಾಗೂ ಸುತ್ತಮುತ್ತಲಿನ ಗ್ರಾಮಗಳ 111 ಭಕ್ತರು ನಾಣ್ಯಗಳಿಂದ ಮಠದ ಪೀಠಾಧಿಪತಿ ಹಾವಗಿಲಿಂಗೇಶ್ವರ ಶಿವಾಚಾರ್ಯರ ತುಲಾಭಾರ ಮಾಡಿ ಭಕ್ತಿ ಸಮರ್ಪಿಸಿದರು.
ಜೀವಂತ ಸಮಾಧಿ ಪಡೆದ ಸ್ಥಳ: ರಾಚೋಟೇಶ್ವರ ಸಂಸ್ಥಾನ ಮಠವು ರಾಚೋಟೇಶ್ವರರು ಜೀವಂತ ಸಮಾಧಿ ಪಡೆದ ಸ್ಥಳವಾಗಿದೆ. ರಾಚೋಟೇಶ್ವರರ ಶಕ್ತಿಯಿಂದಾಗಿಯೇ ಐನೂರು ವರ್ಷಗಳ ಇತಿಹಾಸದ ಮಠಕ್ಕೆ ಈಗ ಮತ್ತೆ ಗತವೈಭವ ಮರುಕಳಿಸಿದೆ ಎಂದು ಸಮಾರೋಪ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಹಾವಗಿಲಿಂಗೇಶ್ವರ ಶಿವಾಚಾರ್ಯರು ತಿಳಿಸಿದರು.
ಮಠವು ಆಧ್ಯಾತ್ಮಿಕ ಜಾಗೃತಿ ಮೂಡಿಸುತ್ತಿದೆ. ಭಕ್ತರಿಗೆ ಸಂಸ್ಕಾರ ಕೊಡುವ ಕಾರ್ಯದಲ್ಲಿ ನಿರತವಾಗಿದೆ. ಭಕ್ತರ ಸಹಕಾರದಿಂದಾಗಿ 11 ವರ್ಷಗಳ ಅವಧಿಯಲ್ಲಿ ಬೃಹದಾಕಾರವಾಗಿ ಬೆಳೆದಿದೆ ಎಂದು ಹೇಳಿದರು.
ಮನುಷ್ಯನ ಜೀವನದಲ್ಲಿ ಗುರುವಿನ ಪಾತ್ರ ಬಹಳ ಮಹತ್ವದ್ದಾಗಿದೆ. ಗುರು ಮೋಕ್ಷದ ದಾರಿಯನ್ನು ತೋರಿಸುತ್ತಾನೆ. ಹೀಗಾಗಿ ಗುರುವಿಗೆ ವಿಧೇಯರಾಗಿರಬೇಕು. ಅವರ ವಾಣಿಯನ್ನು ಆಲಿಸಬೇಕು ಎಂದು ತಿಳಿಸಿದರು.
ಮಾನವ ಜನ್ಮ ಕರುಣಿಸಿದ ಭಗವಂತನ ಧ್ಯಾನ ಮಾಡಬೇಕು. ಜೀವನದಲ್ಲಿ ಶಾಂತಿ, ನೆಮ್ಮದಿಗಾಗಿ ಪೂಜೆ, ಜಪ, ತಪ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಅಬ್ಬೆ ತುಮಕೂರಿನ ತೋಟಯ್ಯ ಶಾಸ್ತ್ರಿ ಪ್ರವಚನ ನಡೆಸಿಕೊಟ್ಟರು. ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಉಮಾಕಾಂತ ಪ್ರಭಾ, ಪ್ರಮುಖರಾದ ಮಲ್ಲಿಕಾರ್ಜುನ ಚಲುವಾ, ವೀರಶೆಟ್ಟಿ ಪಾಟೀಲ, ಶಿವರಾಜ ಮೂಲಗೆ, ವೈಜಿನಾಥ ಮೂಲಗೆ, ಸಂಜು ಪ್ರಭಾ, ಧನರಾಜ ಬಿರಾದಾರ, ಶಿವಕುಮಾರ ಬಿರಾದಾರ, ಶಿವಕುಮಾರ ಪಾಟೀಲ ತೇಗಂಪುರ, ಪ್ರೇಮಕುಮಾರ ಪ್ರಭಾ, ಸುರೇಶ ಕುಂಬಾರ, ಗಣೇಶ ಪಾಟೀಲ ಜ್ಯಾಂತಿ, ಶಿವು ಕರಡ್ಯಾಳ್, ದಿಗಂಬರ ಮೂಲಗೆ ಮೊದಲಾದವರು ಇದ್ದರು.