11000 ಪೌರ ಕಾರ್ಮಿಕರ ಖಾಯಂ: ಸಚಿವ ಸಂಪುಟದ ನಿರ್ಧಾರಕ್ಕೆ ವಿರೋಧ

ಕಲಬುರಗಿ,ಸೆ.22: ರಾಜ್ಯ ಸಚಿವ ಸಂಪುಟದಲ್ಲಿ ಕೇವಲ 11000 ಪೌರ ಕಾರ್ಮಿಕರ ಸೇವೆ ಖಾಯಂಗೆ ನಿರ್ಣಯ ಕೈಗೊಂಡಿದ್ದು ಸಮಸ್ತ ಪೌರ ಕಾರ್ಮಿಕರಿಗೆ ಮಾಡಿದ ಅನ್ಯಾಯ ಎಂದು ಆರೋಪಿಸಿ ಕಲ್ಯಾಣ ಕರ್ನಾಟಕ ಗುತ್ತಿಗೆ ಸಫಾಯಿ ಕರ್ಮಚಾರಿ ಸಂಘಟನೆ ಕಾರ್ಯಕರ್ತರು ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ಮಾಡಿದರು.
ಪ್ರತಿಭಟನೆಕಾರರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ, ರಾಜ್ಯದ ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿರುವ ನೇರ ನೇಮಕಾತಿ ಪಾವತಿ ಮತ್ತು ಗುತ್ತಿಗೆ ಪೌರ ಕಾರ್ಮಿಕರು ಗುತ್ತಿಗೆ ಆಧಾರದ ಒಳಚರಂಡಿ ಕಾರ್ಮಿಕರು, ಲೋಡರ್ಸ್, ಕಸದ ವಾಹನ ಚಾಲಕರು ಮತ್ತು ಕ್ಲೀನರ್ಸ್ ಅವರು ಕಳೆದ 10ರಿಂದ 20 ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸಿ ಇನ್ನಿಲ್ಲದ ಶೋಷಣೆಗೆ ಒಳಗಾಗಿದ್ದಾರೆ. ತಮ್ಮ ಆರೋಗ್ಯದ ಕುರಿತು ಚಿಂತಿಸದೇ ಸಾರ್ವಜನಿಕರ ಆರೋಗ್ಯ ಕಾಪಾಡಲು ಕೊರೋನಾದಂತಹ ಸಾಂಕ್ರಮಿಕ ರೋಗ ಮತ್ತು ಲಾಕ್‍ಡೌನ್‍ನಂತಹ ತುರ್ತು ಸಂದರ್ಭಗಳಲ್ಲಿಯೂ ನಿರಂತರವಾಗಿ ಮಲ, ಮೂತ್ರ, ಕಸ ಮತ್ತು ತೆರೆದ ಚರಂಡಿಗಳು ಸ್ವಚ್ಛಗೊಳಿಸಿ ಸಾರ್ವಜನಿಕರನ್ನು ರಕ್ಷಿಸಿದ್ದಾರೆ. ಆದಾಗ್ಯೂ, ಸರ್ಕಾರಗಳು ಪೌರ ಕಾರ್ಮಿಕರನ್ನು ಗುತ್ತಿಗೆ ಪದ್ದತಿ ಮತ್ತು ನೇರ ಪಾವತಿ ಎಂಬ ಇನ್ನೊಂದು ರೀತಿಯ ಗುತ್ತಿಗೆ ಜಾರಿ ಮಾಡಿ, ಯಾವುದೇ ಸಾಮಾಜಿಕ ಭದ್ರತೆ ಒದಗಿಸದೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಾರ್ಮಿಕರನ್ನು ವಂಚಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕಳೆದ ಜುಲೈ 1ರಿಂದ ಅನ್ಯಾಯವನ್ನು ವಿರೋಧಿಸಿ ಪೌರ ಕಾರ್ಮಿಕರು ಕೆಲಸ ಸ್ಥಗಿತಗೊಳಿಸಿ ಅನಿರ್ಧಿಷ್ಟ ಮುಷ್ಕರ ಪ್ರಾರಂಭಿಸಲಾಗಿದೆ. ಆ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಚರ್ಚಿಸಿ ಎಲ್ಲ ಪೌರ ಕಾರ್ಮಿಕರನ್ನು ಒಮ್ಮೆಲೆ ಖಾಯಂಗೊಳಿಸಲಾಗುವುದು ಎಂದು ಭರವಸೆ ನೀಡಿದ್ದರು. ಲಿಖಿತ ಭರವಸೆ ಈಗಲೂ ಹುಸಿಯಾಗಿದೆ ಎಂದು ಅವರು ದೂರಿದರು.
ಸಚಿವ ಸಂಪುಟದ ಸಭೆಯಲ್ಲಿ ಕೇವಲ 11000 ಪೌರ ಕಾರ್ಮಿಕರನ್ನು ಖಾಯಂಗೊಳಿಸಲು ನಿರ್ಧರಿಸಿ ಉಳಿದ ಪೌರ ಕಾರ್ಮಿಕರಿಗೆ ಅನ್ಯಾಯ ಮಾಡಿದೆ. ರಾಜ್ಯದಲ್ಲಿ 30 ಸಾವಿರ ಪೌರ ಕಾರ್ಮಿಕರು ಕಳೆದ 20 ವರ್ಷಗಳಿಂದ ಖಾಯಂಗಾಗಿ ಕಾಯುತ್ತಿದ್ದಾರೆ. ಕೂಡಲೇ ಅವರೆಲ್ಲರನ್ನೂ ಖಾಯಂಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.
ಸಂಘಟನೆಯ ಅಧ್ಯಕ್ಷ ಅಲ್ಲಮಪ್ರಭು ನಿಂಬರ್ಗಾ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಅನಿಲಕುಮಾರ್ ಚಕ್ರ, ವಿಕಾಸ್ ಸವಾರಿಕರ್, ಅನಿಲಕುಮಾರ್ ಚಾಂಬಾಳ್, ತಿಮ್ಮಣ್ಣ ಬಳಿಚಕ್ರ, ಬ್ರಹ್ಮಾನಂದ್ ಮಿಂಚಾ, ಗಣೇಶ್ ಕಾಂಬಳೆ, ಅರುಣ್ ಸುತಾರ್, ಲೋಕೇಶ್ ದೊಡ್ಡಮನಿ, ಮೊಹ್ಮದ್ ಅಹ್ಮದ್ ಅಲಿ ಕುರೇಶಿ, ನದೀಮ್ ಅಹ್ಮದ್, ರವಿ ಸಿಂಗೆ, ಕವಿತಾ ಇನಾಮದಾರ್, ಮೀನಾಬಾಯಿ ಸೂರ್ಯವಂಶಿ ಮುಂತಾದವರು ಪಾಲ್ಗೊಂಡಿದ್ದರು.