110 ಕೆಜಿ ಗಾಂಜಾ ವಶ ಲಾರಿ ಚಾಲಕನ ಸೆರೆ

ಬೆಂಗಳೂರು,ನ.13-ತಿರುಪತಿಯಿಂದ ಗಾಂಜಾ ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ಲಾರಿ ಚಾಲಕ ನೊಬ್ಬ ನನ್ನು ಬಂಧಿಸಿರುವ ರಾಜಗೋಪಾಲನಗರ ಪೊಲೀಸರು ಬರೋಬ್ಬರಿ 110 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಚಿಕ್ಕಬಳ್ಳಾಪುರದ ಕುರುಬರ ಬೀದಿಯ ಶಿವಕುಮಾರ್ ಬಂಧಿತ ಆರೋಪಿ ಯಾಗಿದ್ದಾನೆ.ಬಂಧಿತನಿಂದ 17 ಕೆಜಿ ಗಾಂಜಾ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಚಿಕ್ಕಬಳ್ಳಾಪುರ ಮನೆಯಲ್ಲಿ 93 ಕೆಜಿ ಗಾಂಜಾ ಇಟ್ಟಿರುವುದಾಗಿ ಬಾಯ್ಬಿಟ್ಟಿದ್ದ.
ಒಟ್ಟು 110 ಕೆಜಿ ಗಾಂಜಾ, ಬೈಕ್, ₹3 ಸಾವಿರ ನಗದು ವಶಪಡಿಸಿಕೊಂಡಿರುವುದಾಗಿ ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದ್ದಾರೆ.
ಆರೋಪಿಯು ವೃತ್ತಿಯಲ್ಲಿ ಲಾರಿ ಚಾಲಕ ನಾಗಿದ್ದು,ತರಕಾರಿ ಲೋಡ್ ತೆಗೆದುಕೊಂಡು ಹೈದರಾಬಾದ್, ತಿರುಪತಿ, ವಿಜಯವಾಡ, ವಿಶಾಖಪಟ್ಟಣಗಳಿಗೆ ಹೋಗಿ ಬರುತ್ತಿದ್ದ‌ ಆರೋಪಿಯು ಆಂಧ್ರಪ್ರದೇಶದ ತಿರುಪತಿಯಲ್ಲಿ ವ್ಯಕ್ತಿಯೊಬ್ಬನಿಂದ ಕಡಿಮೆ ಬೆಲೆಗೆ ಗಾಂಜಾ ತಂದು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದುದ್ದಾಗಿ ಬಾಯ್ಬಿಟ್ಟಿದ್ದಾನೆ.
ಅಲ್ಲದೇ ಇದರಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದಾರಾ ಎಂಬ ಮಾಹಿತಿ ಪತ್ತೆ ಹಚ್ಚುವ ಸಲುವಾಗಿ ವಿಶೇಷ ತಂಡ ರಚಿಸಲಾಗಿದೆ ಎಂದು ತಿಳಿಸಿದರು.