
ಬೀದರ್:ಮಾ.9: ಜಿಲ್ಲಾಡಳಿತದಿಂದ ಎರಡು ದಿನ ಇಲ್ಲಿ ಆಯೋಜಿಸಿರುವ ಬಸವ ಉತ್ಸವದ ಅಂಗವಾಗಿ ಮಾರ್ಚ್ 11 ರಂದು ಮಧ್ಯಾಹ್ನ 3 ಗಂಟೆಗೆ ಬಸವಕಲ್ಯಾಣ ನಗರದ ಬಸವೇಶ್ವರ ದೇವಸ್ಥಾನದಿಂದ ತೇರು ಮೈದಾನದವರೆಗೆ ಮೆರವಣಿಗೆ ನಡೆಯುವುದು’ ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ತಿಳಿಸಿದರು.
ಅಂದು ಸಂಜೆ 7.30 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ಸವ ಉದ್ಘಾಟಿಸುವರು. ಕೇಂದ್ರದ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ, ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೆನಕೊಪ್ಪ, ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ಪಶು ಸಂಗೋಪನೆ ಸಚಿವ ಪ್ರಭು ಚವಾಣ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಸುನೀಲಕುಮಾರ್ ಪಾಲ್ಗೊಳ್ಳುವರು. ಶಾಸಕ ಶರಣು ಸಲಗರ ಅಧ್ಯಕ್ಷತೆ ವಹಿಸುವರು. ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಭಾಗವಹಿಸುವರು ಎಂದು ಸುದ್ದಿಗೋಷ್ಠಿಯಲ್ಲಿ ಎಂದರು.
ಮಾರ್ಚ್ 11 ಮತ್ತು 12 ರಂದು ಬೆಳಿಗ್ಗೆ ಮತ್ತು ಮಧ್ಯಾಹ್ನ ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯ ಕಲ್ಯಾಣ ಮಂಟಪದಲ್ಲಿ ವಚನ ಗೋಷ್ಠಿ ನಡೆಯುತ್ತವೆ. ರಾತ್ರಿ ನಾಟಕಗಳ ಪ್ರದರ್ಶನವಿರುತ್ತದೆ ಎಂದರು.
ವಿವಿಧ ಚಟುವಟಿಕೆ: ಮಾರ್ಚ್ 10 ರಂದು ಬೆಳಿಗ್ಗೆ 9 ಗಂಟೆಗೆ 770 ಅಮರ ಗಣಂಗಳ ವೇಷಧಾರಿಗಳ ಜತೆಯಲ್ಲಿ ಕೋಟೆಯಿಂದ ಬಸವ ನಡಿಗೆ ನಡೆಯಲಿದೆ. ನಂತರ 10 ಗಂಟೆಗೆ ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯ ಕಲ್ಯಾಣ ಮಂಟಪದಲ್ಲಿ ನೃತ್ಯ ಮತ್ತು ಸಂಗೀತ ಹಾಗೂ ಮಕ್ಕಳ ಆಟದ ಮೇಳ ಇರುತ್ತದೆ. ಮಾರ್ಚ್ 11 ರಂದು ತಾಲ್ಲೂಕು ಕ್ರೀಡಾಂಗಣದಿಂದ ಹೆಲಿಕಾಪ್ಟರ್ ಸಂಚಾರ, ತ್ರಿಪುರಾಂತ ಕೆರೆಯಲ್ಲಿ ಬೋಟಿಂಗ್, ತೇರು ಮೈದಾನದಲ್ಲಿ ಫಲಪುಷ್ಪ ಪ್ರದರ್ಶನ, ಸ್ತ್ರೀಶಕ್ತಿ ಗುಂಪುಗಳ ಮಾರಾಟ ಮಳಿಗೆ ಉದ್ಘಾಟನೆ, ಗಾಳಿಪಟ ಉತ್ಸವ, ಶರಣ ಸಾಹಿತ್ಯ ಪುಸ್ತಕ ಪ್ರದರ್ಶನ ಇರುತ್ತದೆ. ಮಾರ್ಚ್ 12 ರಂದು ಬೆಳಿಗ್ಗೆ 9 ಗಂಟೆಗೆ ತೇರು ಮೈದಾನದಲ್ಲಿ ಕುಸ್ತಿ ಏರ್ಪಡಿಸಲಾಗುತ್ತದೆ. ಸಂಜೆ ಮದ್ದು ಸುಡಲಾಗುತ್ತದೆ ಎಂದು ಅವರು ಹೇಳಿದರು.
ವಿವಿಧ ಕಲಾವಿದರಿಂದ ಗಾಯನ
ಮಾರ್ಚ್ 11 ರಂದು ಸಂಜೆ 6 ಗಂಟೆಗೆ ಜಯದೇವಿ ಜಂಗಮಶೆಟ್ಟಿ, ಶಿವಾನಂದ ಮಂದೆವಾಲ, ರಾಮುಲು ಗಾದಗಿ, ರಾಜಶೇಖರ ಶೀಲವಂತ, ಜಗನ್ನಾಥ ನಾನಕೇರಿ, ಭಾನುಪ್ರಿಯಾ, ರೇಖಾ ಸೌದಿ ಅವರು ಗಾಯನ ಪ್ರಸ್ತುತ ಪಡಿಸುವರು. ಸಂಧ್ಯಾ ಭಟ್, ನಾಗಭೂಷಣ, ರಾಣಿ ಸತ್ಯಮೂರ್ತಿ ವಚನ ನೃತ್ಯ ಪ್ರದರ್ಶಿಸುವರು. 8.30ಕ್ಕೆ ರಘು ದೀಕ್ಷಿತ್, ಸಾಧನಾ ಸರ್ಗಮ್ ಸಂಗೀತ ಪ್ರಸ್ತುತಪಡಿಸುವರು.
ಮಾರ್ಚ್ 12 ರಂದು ಸಂಜೆ 6 ಗಂಟೆಗೆ ರಾಯಚೂರಿನ ಮಹಾಲಕ್ಷ್ಮಿ ತಂಡ, ಗುರುಶಾಂತಯ್ಯ ಸ್ಥಾವರಮಠ, ಬಸವರಾಜ ಭಂಟನೂರ, ಶಂಭುಲಿಂಗ ವಾಲ್ದೊಡ್ಡಿ, ಶಿವಾಜಿ ಸಗರ, ಶಿವಕುಮಾರ ಪಂಚಾಳ, ರಮೇಶ ಕೋಳಾರ, ಸೂರ್ಯಕಾಂತ ಬಿರಾದಾರ, ವಿಜಯಕುಮಾರ ಸೋನಾರೆ ಅವರ ಗಾಯನವಿರುತ್ತದೆ. ಉಷಾ ಪ್ರಭಾಕರ ನೃತ್ಯ ಪ್ರದರ್ಶಿಸುವರು. 8.30 ಗಂಟೆಗೆ ಅನನ್ಯಾ ಭಟ್, ಷಣ್ಮುಖಪ್ರಿಯಾ, ನಿಹಾಲ್ ತೌರೋ ಸಂಗೀತ ಪ್ರಸ್ತುತಪಡಿಸುವರು ಎಂದರು.