11 ಮಂದಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಜಯ

ತಿ.ನರಸೀಪುರ.ಜ.04-ಗ್ರಾ.ಪಂ.ಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಯಾವುದೇ ಬಂದರೂ ಕಾಂಗ್ರೆಸ್ ಪಕ್ಷದ ಸದಸ್ಯರು ಯಾವುದೇ ಒಡಕುಂಟು ಮಾಡಿಕೊಳ್ಳದೇ ಒಮ್ಮತದ ಅಭ್ಯರ್ಥಿಯ ಆಯ್ಕೆ ಮಾಡಿಕೊಳ್ಳುವಂತೆ ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ ಉಕ್ಕಲಗೆರೆ ಬಸವಣ್ಣ ನೂತನ ಸದಸ್ಯರಲ್ಲಿ ಮನವಿ ಮಾಡಿದರು.
ಇತ್ತೀಚೆಗೆ ನಡೆದ ಗ್ರಾ.ಪಂ.ಚುನಾವಣೆಯಲ್ಲಿ ತಾಲೂಕಿನ ಉಕ್ಕಲಗೆರೆ ಗ್ರಾ.ಪಂ.ಯಲ್ಲಿ 11 ಮಂದಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಜಯಗಳಿಸಿದ ಹಿನ್ನೆಲೆಯಲ್ಲಿ ಪಟ್ಟಣದ ಮರಿಗೌಡ ಸ್ಮಾರಕ ಭವನದಲ್ಲಿ ವಿಜೇತ ಸದಸ್ಯರಿಗೆ ಹಮ್ಮಿಕೊಳ್ಳಲಾಗಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಂಘಟಿತ ಹೋರಾಟದಿಂದಾಗಿ ಇಂದು ಉಕ್ಕಲಗೆರೆ ಗ್ರಾ.ಪಂ.ಯಲ್ಲಿ 14 ಸದಸ್ಯರ ಪೈಕಿ 11 ಮಂದಿ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.ಕ್ಷೇತ್ರದಲ್ಲಿ ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪರವರು ಮಾಡಿದ ಜನೋಪಯೋಗಿ ಅಭಿವೃದ್ಧಿ ಕಾರ್ಯಗಳು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ವರದಾನವಾಗಿದೆ ಎಂದರು.ವಿಜೇತ ಅಭ್ಯರ್ಥಿಗಳು ಬಹುತೇಕ ಯುವಕರಾಗಿದ್ದು ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವ ಕಡೆಗೆ ಗಮನಹರಿಸಬೇಕು.ಮುಂಬರುವ ತಾ.ಪಂ.ಜಿ.ಪಂ.ಹಾಗು ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಸುಲಲಿತ ಗೆಲುವಿಗೆ ಪೂರಕ ವಾತಾವರಣ ನಿರ್ಮಿಸಿಕೊಡುವ ನಿಟ್ಟಿನಲ್ಲಿ ಸದಸ್ಯರು ಗಮನಹರಿಸುವಂತೆ ಕಿವಿಮಾತು ಹೇಳಿದರು.
ಸದಸ್ಯ ಉಕ್ಕಲಗೆರೆ ಅಡುಗೆ ಕುಮಾರ್ ಮಾತನಾಡಿ ನಮ್ಮಗಳ ಗೆಲುವು ಕಾಂಗ್ರೆಸ್ ಪಕ್ಷದ ಗೆಲುವಾಗಿದ್ದು ವಿಜೇತರಾಗಿರುವ 11 ಮಂದಿ ಸದಸ್ಯರು ಒಗ್ಗಟ್ಟು ಪ್ರದರ್ಶನ ಮಾಡುವ ಮೂಲಕ ಮೀಸಲಾತಿ ಯಾವುದೇ ಬಂದರೂ ನಿರಾಶರಾಗದೇ ಅವಕಾಶ ಇರುವ ಅಭ್ಯರ್ಥಿಗೆ ಅವಕಾಶ ಮಾಡಿಕೊಡಬೇಕು.ಗೆಲುವು ತಂದು ಕೊಟ್ಟಿರುವ ಪಕ್ಷಕ್ಕೆ ಋಣಿಯಾಗಿ ಕೆಲಸ ಮಾಡಿ ಮತದಾರನ ಅಗತ್ಯತೆಗಳನ್ನು ಪೂರೈಸಲು ಶ್ರಮಿಸಬೇಕು ಎಂದರು.ಮೊದಲಿಗೆ ನಾವು ಸಂಘಟಿತರಾಗಿ ಒಗ್ಗಟ್ಟು ಪ್ರದರ್ಶನ ಮಾಡಬೇಕು.ಇತರೆ ಪಕ್ಷಗಳು ತೋರಿಸುವ ಆಮಿಷಕ್ಕೆ ಬಲಿಯಾಗದೇ ಪಕ್ಷ ನಿಷ್ಠೆ ಪ್ರದರ್ಶಿಸಬೇಕೆಂದು ತಿಳಿಸಿದರು.
ಇದೇ ವೇಳೆ ಗ್ರಾ.ಪಂ.ಗೆ ನೂತನವಾಗಿ ಆಯ್ಕೆಯಾದ ಎಂ.ಕುಮಾರ್,ಆರ್.ರವಿಶಂಕರ್, ಪುಟ್ಟಮ್ಮ,ಲತಾ,ಮಹದೇವ, ಮಹದೇವಮ್ಮ, ನಿಂಗರಾಜು,ಶಿವಪ್ರಸಾದ್, ನಾಗಲಾಂಬಿಕೆ,ಮಂಜುಳಾ,ಶಿವಮ್ಮರವರನ್ನು ಸನ್ಮಾನಿಸಲಾಯಿತು.
ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷ ನಾಗೇಂದ್ರ,ಗ್ರಾ.ಪಂ.ಮಾಜಿ ಸದಸ್ಯ ನಂಜುಂಡಯ್ಯ,ಪ್ರಭುಸ್ವಾಮಿ,ಶ್ರೀಕಂಠಸ್ವಾಮಿ,ರಾಜು,ಕನ್ನಾಯಕನಹಳ್ಳಿ ಮಹದೇವಯ್ಯ,ಶಿವರಾಜು,ಕಳ್ಳೀಪುರ ದೇವರಾಜು,ಗ್ರಾ.ಪಂ.ಮಾಜಿ ಅಧ್ಯಕ್ಷ ನಾಗಣ್ಣ,ರೈತ ಸಂಘದ ಮಹದೇವ ಸ್ವಾಮಿ,ಆರ್.ಗಿರಿಧರ್ ಮತ್ತಿತರರಿದ್ದರು