11 ಚಿನ್ನದ ಪದಕ ಪಡೆದ ಕನ್ನಡ ವಿಭಾಗದ ಜಯಶ್ರೀಗೆ ಅಧ್ಯಾಪಕಿಯಾಗುವ ಆಸೆ

ಕಲಬುರಗಿ.ನ.20: ಗುಲಬರ್ಗಾ ವಿಶ್ವವಿದ್ಯಾಲಯದ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಜರುಗಿದ ವಿಶ್ವವಿದ್ಯಾಲಯದ 38ನೇ ವಾರ್ಷಿಕ ಘಟಿಕೋತ್ಸವದಲ್ಲಿ ಕನ್ನಡ ವಿಭಾಗದಿಂದ ಅತೀ ಹೆಚ್ಚು 11 ಚಿನ್ನದ ಪದಕಗಳನ್ನು ಪಡೆದ ವಿದ್ಯಾರ್ಥಿನಿ ಜಯಶ್ರೀ ಶಿವಶರಣಪ್ಪ ಯಳಸಂಗಿ ಅವರು ಅಧ್ಯಾಪಕಿಯಾಗುವ ಆಸೆಯನ್ನು ಹೊರಹಾಕಿದರು.
ಚಿನ್ನದ ಪದಕಗಳನ್ನು ಪಡೆದ ನಂತರ ಖುಷಿಯಿಂದ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನೆಟ್, ಸೆಟ್ ಉತ್ತೀರ್ಣಳಾಗುವ ಮೂಲಕ ಪದವಿ ಕಾಲೇಜು ಪ್ರೊಫೇಸರ್ ಆಗಬೇಕು ಎಂದರು.
ಮೂಲತ: ಜಿಲ್ಲೆಯ ಆಳಂದ್ ತಾಲ್ಲೂಕಿನ ಮಾಡ್ಯಾಳ್ ಗ್ರಾಮದವಳಾಗಿದ್ದು, ಪ್ರೌಢ ಶಾಲೆಯನ್ನು ಸ್ವಗ್ರಾಮದಲ್ಲಿ ಪೂರೈಸಿದೆ. ಆಳಂದ್ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು, ಆಳಂದ್ ಪಟ್ಟಣದ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪದವಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿದೆ ಎಂದು ಅವರು ಹೇಳಿದರು.
ತಂದೆ ಶಿವಶರಣಪ್ಪ ಒಕ್ಕಲುತನ ಮಾಡುತ್ತಿದ್ದು, ತಾಯಿ ಶೋಭಾ ಗೃಹಿಣಿಯಾಗಿದ್ದಾರೆ. ಅವರಿಗೆ ಮೂವರು ಪುತ್ರಿಯರು, ಇಬ್ಬರು ಪುತ್ರರು ಇದ್ದು, ನಾನು ಎರಡನೇ ಪುತ್ರಿ. ನನ್ನ ಸಾಧನೆಗೆ ನನ್ನ ತಂದೆ, ತಾಯಿ ಸಂತೋಷಪಡುತ್ತಿದ್ದಾರೆ ಎಂದು ಅವರು ತಿಳಿಸಿದರು.
ಕನ್ನಡ ವಿಭಾಗದ ನಿರ್ದೇಶಕ ಪ್ರೊ. ಎಚ್.ಟಿ. ಪೋತೆ ಹಾಗೂ ಅತಿಥಿ ಪ್ರಾಧ್ಯಾಪಕರ ಪಾಠ ಪ್ರವಚನದಿಂದಾಗಿ ಈ ಸಾಧನೆ ಮಾಡಿರುವೆ. ಅಲ್ಲದೇ ಗ್ರಂಥಾಲಯದಲ್ಲಿ ಅತೀ ಹೆಚ್ಚು ಕಾಲ ಕಳೆದಿದ್ದರಿಂದ ಈ ಗುರಿ ಮುಟ್ಟಲು ಸಾಧ್ಯವಾಗಿದೆ ಎಂದು ಅವರು ಹೇಳಿದರು.
ಹೆಚ್ಚಿನ ಅಂಕ ಬರುವ ನಿರೀಕ್ಷೆ ಇತ್ತು. ಆದಾಗ್ಯೂ, 11 ಚಿನ್ನದ ಪದಕ ನಿರೀಕ್ಷಿಸಿರಲಿಲ್ಲ ಎಂದು ಅವರು ತಿಳಿಸಿದರು.