108 ಕ್ರಿಮಿನಲ್ ಕೇಸ್‌ಗಳಲ್ಲಿ ಭಾಗಿಯಾಗಿದ್ದ ಖದೀಮನ ಸೆರೆ

ಬೆಂಗಳೂರು, ಮಾ.೨೯-ಸುಮಾರು ೬ ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ಒಟ್ಟು ೧೦೮ ಕ್ರಿಮಿನಲ್ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಉದ್ಘೋಷಿತ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗ್ರಾನಿಟಿ ಪ್ರಾಪರ್ಟಿಸ್ ನ ಮಾಲೀಕ ಅಶ್ವಾಕ್ ಅಹಮದ್ ಬಂಧಿತ ಆರೋಪಿಗಳಾಗಿದ್ದು, ಆತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ ತಿಳಿಸಿದ್ದಾರೆ.
ಬಂಧಿತ ಗ್ರಾನಿಟಿ ಪ್ರಾಪರ್ಟಿಸ್ ಸಂಸ್ಥೆಯ ಮಾಲೀಕ ಹೊಸಕೋಟೆಯ ಬಳಿ ೨೦೦೯-೨೦೧೦ ರಲ್ಲಿ ಕೃಷಿ ಜಮೀನುಗಳಲ್ಲಿ ಅಕ್ರಮವಾಗಿ ರೆವಿನ್ಯೂ ನಿವೇಶನಗಳನ್ನು ಮಾಡಿ ಅವುಗಳನ್ನು ಮೋಸದಿಂದ ಸಾರ್ವಜನಿಕರಿಗೆ ಮಾರಾಟ ಮಾಡಿ ಕೋಟ್ಯಂತರ ರೂಗಳನ್ನು ವಂಚಿಸಿದ್ದು, ಈ ಬಗ್ಗೆ ರಾಮಮೂರ್ತಿನಗರ, ಇಂದಿರಾನಗರ ಮತ್ತು ಅಶೋಕನಗರ ಪೊಲೀಸ್ ಠಾಣೆಗಳಲ್ಲಿ ೧೦೮ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು.
ಈ ಪ್ರಕರಣಗಳ ತನಿಖೆಯನ್ನು ಸಿಸಿಬಿ ಪೊಲೀಸರು ಕೈಗೊಂಡು ಆರೋಪಿಯನ್ನು ಖಚಿತವಾದ ಮಾಹಿತಿಯನ್ನು ಆಧರಿಸಿ ಬಂಧಿಸಲಾಗಿದೆ.
ಅರೋಪಿಯ ವಿರುದ್ಧ ಹಿಂದೆಯೇ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿಗಳನ್ನು ಸಲ್ಲಿಸಲಾಗಿತ್ತು.
ಬಾಕಿ ಇದ್ದ ಪ್ರಕರಣಗಳಿಗೆ ಈತನು ೨೦೧೬ ರಿಂದಲೂ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದರಿಂದ ಕೋರ್ಟ್ ಈತನನ್ನು ಉದ್ಘೋಷಿತ ಆರೋಪಿ ಎಂದು ಘೋಷಿಸಿತ್ತು. ಈತನ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಿ ಕಾರ್ಯಾಚರಣೆ ಕೈಗೊಂಡು ಬಂಧಿಸಲಾಗಿದೆ ಎಂದರು.