108 ಅಡಿ ಹನುಮಧ್ವಜ ಇಳಿಕೆ ಕೆರಗೋಡು ಉದ್ವಿಗ್ನ

ಮಂಡ್ಯ,ಜ.೨೮-ಭಾರೀ ಹೈಡ್ರಾಮಾ ನಡುವೆ ೧೦೮ ಅಡಿ ಎತ್ತರದಲ್ಲಿದ್ದ ಹನುಮಧ್ವಜವನ್ನು ಪೊಲೀಸರು ಕೆಳಗಿಳಿಸಿದ್ದರಿಂದ ಪ್ರತಿಭಟನೆಯ ಕಿಚ್ಚು ಹೆಚ್ಚಾಗಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು,ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಸೆಕ್ಷನ್ ೧೪೪ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಕೆರೆಗೋಡು ಗ್ರಾಮದಲ್ಲಿ ಹನುಮಧ್ವಜ ಕೆಳಗಿಳಿಸುತ್ತಿದ್ದಂತೆ ಜಿಲ್ಲಾಡಳಿತ ಹಾಗೂ ಪೊಲೀಸರ ವಿರುದ್ಧ ಜನ ತಿರುಗಿಬಿದ್ದಿದ್ದಾರೆ. ಸ್ವಯಂಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಪ್ರತಿಭಟನೆಗೆ ಧುಮುಕಿದ್ದಾರೆ. ಈ ಹಿನ್ನೆಲೆಯಲ್ಲಿ ಕೆರಗೋಡಿನಲ್ಲಿ ೧೪೪ ಸೆಕ್ಷನ್ ಜಾರಿಗೊಳಿಸಿದ್ದು, ನೂರಕ್ಕೂ ಹೆಚ್ಚು ಮಂದಿ ಪೊಲೀಸರನ್ನು ನಿಯೋಜಿಸಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಪ್ರತಿಭಟನೆ ಕಾವು ಹೆಚ್ಚಾಗುತ್ತಿದ್ದಂತೆ ಪರಿಸ್ಥಿತಿಯನ್ನ ತಿಳಿಗೊಳಿಸಲು ಗ್ರಾಮಸ್ಥರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಅಲ್ಲದೇ ಶ್ರೀರಾಮನ ಬ್ಯಾನರ್ ಕಿತ್ತು ಹಾಕಿದ್ದಾರೆ. ಬೃಹತ್ ಧ್ವಜಸ್ತಂಬವನ್ನು ಕಟ್ ಮಾಡೋದಕ್ಕೆ ಗ್ಯಾಸ್‌ಕಟ್ಟರ್ ತರಿಸಿದ್ದಾರೆ.
ಪೊಲೀಸರ ನಡೆಗೆ ಗ್ರಾಮಸ್ಥರು, ಹಿಂದೂ ಕಾರ್ಯಕರ್ತರು, ಮಹಿಳೆಯರು ಶಾಪ ಹಾಕಿದ್ದಾರೆ. ಕಣ್ಣೀರಿಟ್ಟು, ಬಾಯಿ ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಶಾಸಕ ಗಣಿಗ ರವಿ ಫೋಟೋಗೆ ಚಪ್ಪಲಿಯಿಂದ ಹೊಡೆದು ಆಕ್ರೋಶ ಹೊರಹಾಕಿದ್ದಾರೆ. ಶಾಸಕರ ಕುಮ್ಮಕ್ಕಿನಿಂದ ಈ ರೀತಿ ಕೆಲಸವಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
ರಸ್ತೆ ತಡೆದು ಪ್ರತಿಭಟನೆ:
ಹನುಮ ಧ್ವಜ ಇಳಿಸಿದ್ದರ ವಿರುದ್ಧ ಆಕ್ರೋಶ ಹೊರಹಾಕಿದ ಕೆರೆಗೋಡು ಗ್ರಾಮಸ್ಥರು ಮಂಡ್ಯ-ಯಡಿಯೂರು ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ. ಕೈ ಶಾಸಕ ಗಣಿಗ ರವಿಕುಮಾರ್ ಫ್ಲೆಕ್ಸ್ ಹರಿದು, ಒಲೆ ಹಚ್ಚಿ, ರಸ್ತೆಯಲ್ಲೇ ಅಡುಗೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ. ಹನುಮನ ದೇವಸ್ಥಾನದ ಮುಂಭಾಗದಲ್ಲಿ ಯುವಕರೊಟ್ಟಿಗೆ ಮಹಿಳೆಯರೂ ಸಹ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.
ಆದರೆ ಇದಕ್ಕೆ ಆಸ್ಪದ ನೀಡದ ಪೊಲೀಸರು ಅಡುಗೆ ಮಾಡುವುದನ್ನ ತಡೆದಿದ್ದಾರೆ. ಅಡುಗೆ ಪಾತ್ರೆಗಳಲ್ಲಿದ್ದ ನೀರನ್ನು ಸುರಿದು, ಪಾತ್ರೆಯನ್ನು ಹೊತ್ತೊಯ್ದಿದ್ದು, ಜನರು ಇಡೀ ಶಾಪ ಹಾಕಿದ್ದಾರೆ.
ಈ ನಡುವೆ ಹನುಮಧ್ವಜ ಹಾರಾಟಕ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಇಲ್ಲಿನ ಕೆರಗೋಡು ಗ್ರಾಮದಲ್ಲಿ ಹಿಂದೂಪರ ಸಂಘಟನೆಗಳ ಪ್ರತಿಭಟನೆ ಮುಂದುವರಿದಿದೆ. ತಾಲೂಕು ಪಂಚಾಯತ್ ವಿರೋಧ ವ್ಯಕ್ತಪಡಿಸುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಗುತ್ತಿದೆ.
ಹೆಚ್ಚಿನ ಭದ್ರತೆ:
ಪ್ರಾಣ ಬೇಕಾದರೂ ಬಿಡುವೆವು, ಧ್ವಜ ಇಳಿಸಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದು ಕುಳಿತಿದ್ದಾರೆ. ತಾಲೂಕು ಪಂಚಾಯತ್ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಸ್ಥಳದಲ್ಲಿ ಪೊಲೀಸರು ಭದ್ರತೆ ಹೆಚ್ಚಿಸಿದ್ದು, ಪ್ರತಿಭಟನೆ ಸ್ಥಳದಲ್ಲಿ ಹೆಚ್ಚು ಜನ ಜಮಾವಣೆಗೊಳ್ಳುತ್ತಿದ್ದಾರೆ. ಅಯೋಧ್ಯೆಯಲ್ಲಿ ಬಾಲಕರಾಮನ ಪ್ರಾಣ ಪ್ರತಿಷ್ಠಾಪನೆ ಸ್ಮರಣಾರ್ಥವಾಗಿ ಧ್ವಜಸ್ತಂಭವನ್ನು ಗ್ರಾಮಸ್ಥರು ನಿರ್ಮಿಸಿದ್ದರು. ೧೦೮ ಅಡಿ ಸ್ತಂಭದಲ್ಲಿ ಕೇಸರಿ ಬಣ್ಣದ ಹನುಮ ಧ್ವಜವನ್ನು ಹಿಂದೂಪರ ಸಂಘಟನೆ ಕಾರ್ಯಕರ್ತರು ಹಾರಿಸಿದ್ದರು.
ಧ್ವಜ ಇಳಿಕೆಗೆ ಷರತ್ತು:
ಧ್ವಜ ಹಾರಿಸಲು ಕೆಲವು ಷರತ್ತುಗಳನ್ನು ಗ್ರಾಮ ಪಂಚಾಯತ್ ವಿಧಿಸಿತ್ತು. ಅದರ ಪ್ರಕಾರ ಕಾರ್ಯಕ್ರಮ ಮುಗಿದ ಮೇಲೆ ಅದನ್ನು ಇಳಿಸಬೇಕಾಗಿತ್ತು. ಆದರೆ, ಗ್ರಾಮಸ್ಥರು ಷರತ್ತಿನಂತೆ ಧ್ವಜ ಇಳಿಸಿರಲಿಲ್ಲ. ಬಳಿಕ ಕೆಲವರು ಧ್ವಜ ಇಳಿಸುವಂತೆ ದೂರು ನೀಡಿದ್ದರು. ತಾಲೂಕು ಆಡಳಿತದ ಸೂಚನೆಯಂತೆ ಧ್ವಜ ಇಳಿಸಲು ಮುಂದಾಗಿತ್ತು. ತಾಲೂಕು ಪಂಚಾಯತ್? ಕಾರ್ಯನಿರ್ವಹಣಾಧಿಕಾರಿ ವೀಣಾ ನೇತೃತ್ವದಲ್ಲಿ ಧ್ವಜ ಇಳಿಸಲು ಮುಂದಾಗಲಾಗಿತ್ತು,ಈ ವೇಳೆ ಕೆರಳಿದ ಹಿಂದೂಪರ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ಆರಂಭಿಸಿದ್ದಾರೆ.
ಸರ್ಕಾರಿ ಜಾಗದಲ್ಲಿ ಧ್ವಜಸ್ತಂಭ ನಿರ್ಮಾಣ ಮಾಡಲಾಗುತ್ತಿರುವ ಕಾರಣ ತೆರವು ಮಾಡಬೇಕು ಎಂದು ತಾಪಂ ಅಧಿಕಾರಿ ವೀಣಾ ಅವರು ಹಿಂದೂಪರ ಸಂಘಟನೆ ಕಾರ್ಯಕರ್ತರ ಮನವೊಲಿಸಲು ಮುಂದಾಗಿದ್ದರು.
ಜೈ ಹನುಮಾನ್:
ವೀಣಾ ಅವರ ಮಾತಿಗೆ ಸಿಟ್ಟಿಗೆದ್ದ ಗ್ರಾಮಸ್ಥರಿಂದ ಪ್ರತಿಭಟನೆ ಹೆಚ್ಚಿಸಿದ್ದಾರೆ. ಜೈ ಶ್ರೀರಾಮ್, ಜೈ ಹನುಮಾನ್ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಾಣ ಬೇಕಾದರೂ ಬಿಡುವೆವು. ಧ್ವಜ ಇಳಿಸಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಧ್ವಜ ಸ್ತಂಭದ ಬಳಿ ಹೆಚ್ಚಿನ ಪೊಲೀಸರ ನಿಯೋಜನೆ ಮಾಡಲಾಗಿದೆ.