108 ಅಂಬ್ಯುಲೆನ್ಸ್ ಅಕ್ರಮ ಆರೋಪ; ಹೋರಾಟದ ಎಚ್ಚರಿಕೆ

ಕಲಬುರಗಿ,ಫೆ.19:ತುರ್ತು ಚಿಕಿತ್ಸೆ ಅಗತ್ಯವಿರುವ ವ್ಯಕ್ತಿಗಳನ್ನು ಹಣದ ಆಸೆಗಾಗಿ ಸರಕಾರಿ ಸ್ವಾಮ್ಯದ 108 ಅಂಬ್ಯುಲೆನ್ಸ್ ಗಳು ಖಾಸಗಿ ಆಸ್ಪತ್ರೆಗಳಿಗೆ ಕೊಂಡೊಯ್ಯುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ನಿಟ್ಟಿನಲ್ಲಿ ನಡೆಯುತ್ತಿರುವ ಮಾಫಿಯಾಕ್ಕೆ ಕಡಿವಾಣ ಹಾಕದೆ ಹೋದರೆ ಜಿಲ್ಲೆಯಾದ್ಯಂತ ಹೋರಾಟ ರೂಪಿಸುವುದು ಅನಿವಾರ್ಯ ಆಗಲಿದೆ ಎಂದು ಕರ್ನಾಟಕ ರಾಜ್ಯ ಕೋಲಿ ಕಬ್ಬಲಿಗ ಎಸ್ಟಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಲಚ್ಚಪ್ಪ ಜಮಾದಾರ ತಿಳಿಸಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಖಾಸಗಿ ಆಸ್ಪತ್ರೆಗಳ ಮಾಫಿಯಾ ಜೊತೆಗೆ 108 ಅಂಬ್ಯುಲೆನ್ಸ್ ಚಾಲಕರು ಅನೈತಿಕ ಸಂಪರ್ಕ ಇರಿಸಿಕೊಂಡಿದ್ದು, ಇದರಿಂದ ಬಡ ಕುಟುಂಬಗಳು ಆರ್ಥಿಕವಾಗಿ ಹೊರೆ ಎದುರಿಸುವ ಸ್ಥಿತಿ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಜಿಲ್ಲೆಯ ಯಾವುದೇ ಭಾಗದಲ್ಲಿ ಸಂಭವಿಸುವ ರಸ್ತೆ ಅಪಘಾತದ ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರು 108 ಅಂಬ್ಯುಲೆನ್ಸ್ ಗೆ ಸಹಜವಾಗಿ ಕರೆ ಮಾಡುತ್ತಾರೆ. ಆದರೆ, ಅಂಬ್ಯುಲೆನ್ಸ್ ಸಿಬ್ಬಂದಿ ಚಿಕಿತ್ಸೆ ಅಗತ್ಯವಿರುವ ವ್ಯಕ್ತಿಗಳನ್ನು ಸರಕಾರಿ ಆಸ್ಪತ್ರೆಗೆ ಸಾಗಿಸುವ ಬದಲು ಕಮಿಷನ್ ಆಸೆಗಾಗಿ ಖಾಸಗಿ ಆಸ್ಪತ್ರೆಗಳಿಗೆ ಸಾಗಿಸುವ ಮೂಲಕ ತಮ್ಮ ಕಿಸೆ ತುಂಬಿಸಿಕೊಂಡು, ಬಡವರು ಆರ್ಥಿಕವಾಗಿ ದಿವಾಳಿಯಾಗುವಂತೆ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
108 ಅಂಬ್ಯುಲೆನ್ಸ್ ಚಾಲಕರು ಹಾಗೂ ಸಿಬ್ಬಂದಿ ಜಿಲ್ಲೆಯಲ್ಲಿ ಒಂದೇ ಕಡೆ 10 ವರ್ಷಗಳಿಂದ ಬೇರು ಬಿಟ್ಟಿದ್ದಾರೆ. ಆರೋಗ್ಯ ಇಲಾಖೆಯ ಕೆಲವು ಅಧಿಕಾರಿಗಳು ಮತ್ತು ವೈದ್ಯರು ಸಹ ಈ ಅಕ್ರಮ ದಂಧೆಯಲ್ಲಿ ಕೈವಾಡ ಹೊಂದಿರುವ ಸಂಶಯವಿದೆ. ಇಂತಹ ಸಿಬ್ಬಂದಿ ಮತ್ತು ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಜರುಗಿಸಬೇಕು. 108 ಅಂಬ್ಯುಲೆನ್ಸ್ ತುರ್ತು ಸಂದರ್ಭದಲ್ಲಿ ಚಿಕಿತ್ಸೆ ಅಗತ್ಯವಿರುವ ರೋಗಿಗಳು ಹಾಗೂ ಗಾಯಾಳುಗಳನ್ನು ಸರಕಾರಿ ಆಸ್ಪತ್ರೆಗಳಿಗೆ ಮಾತ್ರ ರವಾನಿಸಿ ದಾಖಲಿಸುವ ಪದ್ಧತಿ ಕಡ್ಡಾಯಗೊಳಿಸಬೇಕೆಂದು ಅವರು ಆಗ್ರಹಿಸಿದರು.
ರಾಮಲಿಂಗ ನಾಟಿಕಾರ್, ಪಿಂಟು ಜಮಾದಾರ, ಭೀಮಶಾ ಖನ್ನಾ, ಶಿವು ಧನ್ನಿ, ಮಲ್ಲಿಕಾರ್ಜುನ ಗುಡುಬಾ, ಅಂಬಾರಾಯ ಜವಳಗಾ ಸೇರಿದಂತೆ ಇತರರಿದ್ದರು.