108ರ ಆಂಬ್ಯುಲೆನ್ಸ್ ಚಾಲಕರ ದಿನಾಚರಣೆ, ತುರ್ತುಸೇವೆಗೈದ ಉತ್ತಮ ಚಾಲಕರಿಗೆ ಸನ್ಮಾನ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಮೇ 28 :- ಜೀವನ್ಮರಣಗಳ ತುರ್ತು ಸಂದರ್ಭದಲ್ಲಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಜೀವದ ಹಂಗು ತೊರೆದು ಪ್ರಾಣರಕ್ಷಣೆ ಮಾಡುವ ಸೇವೆ ಎಲ್ಲಾ ಸೇವೆಗಳನ್ನು ಮೀರಿಸುವಂತಹದು ಇಂತಹ ಸೇವೆ ಮಾಡುವ 108ರ ಅಂಬ್ಯುಲೆನ್ಸ್ ಚಾಲಕ ಹಾಗೂ ಇಎಂಟಿ ಗಳ ಸೇವೆ ಶ್ಲಾಘನೀಯ ಎಂದು ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ ವಿನಯ್ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ 108ರ ಅಂಬ್ಯುಲೆನ್ಸ್  ಚಾಲಕರ ದಿನಾಚರಣೆ ನಿಮಿತ್ತ  ಆಂಬ್ಯುಲೆನ್ಸ್ ವಾಹನ ಚಾಲಕರು ಶುಕ್ರವಾರ ಆಯೋಜಿಸಿದ  ಕಾರ್ಯಕ್ರಮ ಉದ್ಘಾಟಿಸಿ ನೆರವೇರಿಸಿ ಮಾತನಾಡುತ್ತಾ  ತಮಗೆ ಯಾವುದೇ ತೊಂದರೆ ಇದ್ದರೂ ಸಾರ್ವಜನಿಕರ ಸೇವೆಗೆ ಸದಾ ಮಿಡಿಯುವ ಹೃದಯವಂತರು ಆಂಬ್ಯುಲೆನ್ಸ್ ಚಾಲಕರು.  ಆಂಬ್ಯುಲೆನ್ಸ್ ವಾಹನದಲ್ಲೇ ಸುರಕ್ಷಿತವಾಗಿ ಅನೇಕ ಹೆರಿಗೆಗಳನ್ನು ಮಾಡಿ ತಾಯಿ ಮತ್ತು ಮಗುವಿನ ಪ್ರಾಣ ರಕ್ಷಣೆ ಹಾಗೂ ಕೊರೋನಾ ಸಂದರ್ಭದಲ್ಲಿ ಜೀವದ ಹಂಗು ತೊರೆದು ದುಡಿದ ಕಾಯಕಜೀವಿಗಳು ಎಂದರೆ ತಪ್ಪಾಗದು ಎಂದು  ತಿಳಿಸಿದರು.
ಉತ್ತಮ ಚಾಲಕರಿಗೆ ಸನ್ಮಾನ : ವಿಜಯನಗರ ಜಿಲ್ಲೆಯಲ್ಲಿ 108ರ ಅಂಬ್ಯುಲೆನ್ಸ್ ನಲ್ಲಿ ಅನೇಕ ತುರ್ತು ಸಂದರ್ಭದಲ್ಲಿ ಉತ್ತಮ ಸೇವೆಗೈದ ಮೂವರನ್ನು ಗುರುತಿಸಿ ಇದೇ ಸಂದರ್ಭದಲ್ಲಿ ಕೂಡ್ಲಿಗಿ ವಿಜಯಕುಮಾರ, ಕೊಟ್ಟೂರು ಅಲ್ಲಾಭಕ್ಷಿ ಹಾಗೂ ಹಗರಿಬೊಮ್ಮನಹಳ್ಳಿ ರುದ್ರಗೌಡ  ಇವರುಗಳನ್ನು ಉತ್ತಮ 108ರ ಅಂಬ್ಯುಲೆನ್ಸ್ ಪೈಲೆಟ್ ಗಳೆಂದು ಸನ್ಮಾನಿಸಲಾಯಿತು ಅಲ್ಲದೆ ಚಾಲಕರ ದಿನಾಚರಣೆ ಸಂದರ್ಭದಲ್ಲಿ ಕೂಡ್ಲಿಗಿ ಪತ್ರಕರ್ತರನ್ನು ಸನ್ಮಾನ ಮಾಡಲಾಯಿತು.
ಪತ್ರಕರ್ತರ ಸಂಘದ  ಅಧ್ಯಕ್ಷ ಮಂಜು ಮಯೂರ, ವೀರೇಶ,ಸರಕಾರಿ ಆಸ್ಪತ್ರೆ ಅಧೀಕ್ಷಕ ವೀರಭದ್ರಯ್ಯ ಇತರರು ಮಾತನಾಡಿದರು. ಈ ಸಂದರ್ಭದಲ್ಲಿ ೧೦೮ ಆಂಬ್ಯುಲೆನ್ಸ್ ವಾಹನ ಚಾಲಕರ ಸಂಘದ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್, ಜಿಲ್ಲಾ ಅಧಿಕಾರಿ ಸಂತೋಷ ಗುಳೆದ್  ಅಲ್ಲಾಬಕ್ಷಿ, ಸಂತೋಷ್ ಕುಮಾರ್, ವಿಜಯಕುಮಾರ್, ನಾಗವೇಣಿ ಸೇರಿ ಇತರರಿದ್ದರು.