105 ವರ್ಷ ವಯಸ್ಸಿನ ಅಜ್ಜಿ ಬಾಯಲ್ಲಿ ಮೂಡಿತು ಹೊಸ ಹಲ್ಲು; ತೊಟ್ಟಿಲೋತ್ಸವ ಮಾಡಿದ ಸಂಬಂಧಿಕರು

ಬೀದರ್: ಎ.12:ಇತ್ತೀಚಿನ ವರ್ಷಗಳಲ್ಲಿ ನೂರು ವರ್ಷ ಪೂರೈಸುವುದೇ ಅಪರೂಪ. ಅಂಥದ್ದರಲ್ಲಿ, ಶತಾಯುಷಿಯಾದವರಿಗೆ ಹೊಸ ಹಲ್ಲು ಚಿಗುರೊಡೆದರೆ? ಇದೊಂಥರಾ ವಿಶೇಷ ಅಲ್ಲವೇ? ಬೀದರ್ ಜಿಲ್ಲೆಯಲ್ಲೂ ಇಂಥದ್ದೇ ಒಂದು ವಿಶೇಷ ಕಂಡುಬಂದಿದೆ.

ಅಖಾಡದಲ್ಲಿ ತಾರೆಯರ ಮಿಂಚು ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಹಾರಕೂಡ ಗ್ರಾಮದ ಶತಾಯುಷಿ ಗಂಗಮ್ಮ ಗುರಪ್ಪ ಕಣ್ಣೂರ್ ಜನವಾಡ್ ಎಂಬ ಅಜ್ಜಿಗೆ ಹೊಸ ಹಲ್ಲು ಮೂಡಿದೆ. ಇಷ್ಟು ಇಳಿ ವಯಸ್ಸಿನಲ್ಲಿ ಹೊಸದಾಗಿ ಹಲ್ಲು ಚಿಗುರೊಡೆದರೆ ಅಂಥವರಿಗೆ ಈ ಭಾಗದಲ್ಲಿ ತೊಟ್ಟಿಲೋತ್ಸವ ಮಾಡಲಾಗುತ್ತದೆ.

105 ವರ್ಷ ವಯಸ್ಸು ತುಂಬಿರುವ ಗಂಗಮ್ಮ ಅವರಿಗೆ ತೊಟ್ಟಿಲೋತ್ಸವ ಮಾಡಿ ಗೌರವಿಸಲಾಯಿತು. ಸಂಬಂಧಿಕರು ಹಾಗೂ ಪರಿಚಿತರು ಅಜ್ಜಿಯನ್ನು ಚಿಕ್ಕಮಗುವಿನಂತೆ ತೊಟ್ಟಿಲಲ್ಲಿ ಕೂರಿಸಿ ತೊಟ್ಟಿಲು ತೂಗಿದರು. ಅಜ್ಜಿಯ ತಲೆ ಮೇಲೆ ಗುಲಾಬಿ ಹೂವಿನ ದಳಗಳ ಮಳೆ ಸುರಿಸಿದರು. ಈ ಸಂದರ್ಭದಲ್ಲಿ ಹಾರಕೂಡದ ಶ್ರೀ ಚನ್ನಬಸವೇಶ್ವರ ಸಂಸ್ಥಾನ ಹಿರೇಮಠದ ಡಾ. ಚನ್ನವೀರ ಶಿವಾಚಾರ್ಯ ಸ್ವಾಮೀಜಿ, ಕಣ್ಣೂರ ಜನವಾಡ ಪರಿವಾರದವರು, ಸ್ಥಳೀಯ ಗಣ್ಯರು ಉಪಸ್ಥಿತರಿದ್ದರು.