105ನೇ ದಿನಕ್ಕೆ ಕಾಲಿಟ್ಟ ರೈತರಿಂದ ಅನಿರ್ಧಿಷ್ಟಾವಧಿ ಧರಣಿ


ಸಂಜೆವಾಣಿ ವಾರ್ತೆ
ಕುರುಗೋಡು. ಏ.02: ಸಮೀಪದ ಕುಡತಿನಿ ಪಟ್ಟಣದಲ್ಲಿ ಭೂಮಿ ಕಳೆದುಕೊಂಡ ಸಂತ್ರಸ್ತರ ಅನಿರ್ದಿಷ್ಟವದಿ ಹೋರಾಟ ವಿವಿಧ ಕನ್ನಡ ಪರ ಸಂಘಟನೆಗಳ ನೇತೃತ್ವದಲ್ಲಿ ಸತತ ವಾಗಿ 105 ನೇ ದಿನಕ್ಕೆ ಕಾಲಿಟ್ಟಿದೆ.
ಈ ಹೋರಾಟಕ್ಕೆ ನಮ್ಮ ಕರ್ನಾಟಕ ರಕ್ಷಣೆ ವೇದಿಕೆ ಅಧ್ಯಕ್ಷ ಸಂಪತ್ ಕುಮಾರ ಬೆಂಬಲ ವ್ಯಕ್ತಪಡಿಸಿ ಮಾತನಾಡಿ, ನಡೆಯುತ್ತಿರುವ ಹೋರಾಟ ನ್ಯಾಯ ಸಿಗುವವರೆಗೂ ನಿರಂತರ ಹೋರಾಟ ಮಾಡುತ್ತೇವೆ , ಮಿತ್ತಲ್, ಉತ್ತಮ್ ಗಾಲ್ವಾ ಹಾಗೂ  ಎನ್. ಎಂ. ಡಿ. ಸಿ ಕಂಪನಿಗಳಿಗೆ 2010 ರಲ್ಲಿ ವಶಪಡಿಸಿಕೊಂಡ 13 ಸಾವಿರ ಎಕರೆ ಜಮೀನುಗಳನ್ನು 12 ವರ್ಷ ಕಳೆದರೂ ಕಾರ್ಖಾನೆಗಳನ್ನು ಸ್ಥಾಪಿಸದೇ, ಉದ್ಯೋಗ ನೀಡದೇ ಇತ್ತ ಜಮೀನು ಉಳುಮೆ ಮಾಡಲು ಅವಕಾಶವಿಲ್ಲದೇ ಕುಡತಿನಿ, ವೇಣಿವೀರಾಪುರ, ಹರಗಿನಡೋಣಿ, ಜಾನೆಕುಂಟೆ, ಕೊಳಗಲ್ಲ, ಯರಂಗಳಿ ಗ್ರಾಮಗಳ ಸಾವಿರಾರು ಕುಟುಂಬಗಳು ವಿವಿಧ ಸೌಲಭ್ಯಗಳಿಂದ ವಂಚಿತರಾಗಿ ಜಮೀನುಗಳು ಇಲ್ಲದೇ ಬದುಕು ಅಡಕತ್ತರಿಯಲ್ಲಿ ಸಿಲುಕಿ ಜೀವನ ಸಾಗಿಸುವುದು ದುಸ್ತರವಾಗಿದೆ ಎಂದರು.
ಆದ್ದರಿಂದ ಸರ್ಕಾರ ಕೂಡಲೇ ಕಾರ್ಖಾನೆಗಳನ್ನು ಸ್ಥಾಪಿಸಬೇಕು ಇಲ್ಲವೇ ನಮ್ಮ ಜಮೀನುಗಳನ್ನು ವಾಪಸ್ಸು ನೀಡಬೇಕು ಅಲ್ಲಿಯವರೆಗೆ ಮಾಸಿಕ 25 ಸಾವಿರ ಉದ್ಯೋಗ ಭತ್ಯೆ ನೀಡಬೇಕೆಂದು ಸರ್ಕಾರ ಮತ್ತು ಕಂಪನಿಗಳನ್ನು ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಈ ಮಧ್ಯದಲ್ಲಿ ಕ್ಷೇತ್ರದ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಬಿ.ಶ್ರೀರಾಮು, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿ ಯವರು ಹೋರಾಟ ನಿರತ ರೈತರ ಸ್ಥಳಕ್ಕೆ ಬೇಟಿ ನೀಡಿ ವಿವಿಧ ಭರವಸೆಗಳನ್ನು ನೀಡಿ ಹೋಗಿ 40 ದಿನಗಳು ಕಳೆದಿವೆ ಆದರೆ ಭರವಸೆಗಳು ಕಾರ್ಯ ರೂಪಕ್ಕೆ ಬಾರದೆ ಹುಸಿಯಾಗಿ ಉಳಿದಿವೆ.
ಅದೇರೀತಿ ರೈತರು ಅಧಿವೇಶನದ ಸಂದರ್ಭದಲ್ಲಿ ಕೈಗಾರಿಕಾ ಸಚಿವ ಮುರುಗೇಶ್  ನಿರಾಣಿ ಯವರನ್ನು ಬೇಟಿ ಮಾಡಿ ತಮ್ಮ ಅಳಲು ತೊಡಗಿಕೊಂಡರೂ ಅದು ಕೂಡ ಈಡೇರದೆ ರೈತರ ಸಮಸ್ಯೆ ಮಾತ್ರ ಸಮಸ್ಯೆಯಾಗಿಯೇ ಉಳಿದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಜನಪ್ರತಿನಿಧಿಗಳು ರೈತರ ಬಗ್ಗೆ ನಿರ್ಲಕ್ಷ್ಯ ತೋರಿರುವುದು ನಿಜಕ್ಕೂ ದುರದೃಷ್ಟದ ಸಂಗತಿ ಎಂದರು.
ಇಂತಹ ಮನೋಭಾವದಿಂದ ಹೊರ ಬಂದು ತಮ್ಮನ್ನು ಆಯ್ಕೆ ಮಾಡಿದ ಕ್ಷೇತ್ರದ ರೈತರ ಸಮಸ್ಯೆಗಳನ್ನು ಶೀಘ್ರದಲ್ಲಿ ಆಲಿಸಿ ಬಗೆರಿಸುವ ಕೆಲಸ ಮಾಡಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರೈತರಿಂದ ತೀವ್ರ ವಿರೋಧ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂರ್ಭದಲ್ಲಿ ವಿವಿಧ ಕನ್ನಡಪರ ಸಂಘಟನೆಗಳು, ಪಟ್ಟಣದ ರೈತರು, ಆತ್ತಮುತ್ತಲಿನ ಗ್ರಾಮಗಳ ರೈತರು ಇತರರು ಇದ್ದರು.