10130 ಮತದಾನ ಸಿಬ್ಬಂದಿಗೆ ಅಂತಿಮ ಹಂತದ ತರಬೇತಿ

ದಾವಣಗೆರೆ,ಮೇ.6; ರಾಜ್ಯ ವಿಧಾನಸಭಾ ಚುನಾವಣೆ ಮತದಾನವು ಮೇ 10 ರಂದು ನಡೆಯಲಿದ್ದು ದಾವಣಗೆರೆ ಜಿಲ್ಲೆಯ 7 ಕ್ಷೇತ್ರಗಳಲ್ಲಿ 1685 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು ಎಲ್ಲಾ ಮತಗಟ್ಟೆ ಸಿಬ್ಬಂದಿಗಳಿಗೆ ಅಂತಿಮ ಹಂತದ ತರಬೇತಿಯನ್ನು ಎಲ್ಲಾ ಕ್ಷೇತ್ರಗಳಲ್ಲಿ ಮೇ 5 ರಂದು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದ್ದಾರೆ.
103.ಜಗಳೂರು ಕ್ಷೇತ್ರ 262 ಮತಗಟ್ಟೆಗಳು, 105.ಹರಿಹರ 228, 106.ದಾವಣಗೆರೆ ಉತ್ತರ 242, 107 ದಾವಣಗೆರೆ ದಕ್ಷಿಣ 214, 108.ಮಾಯಕೊಂಡ 240, 109.ಚನ್ನಗಿರಿ 254 ಹಾಗೂ ಹೊನ್ನಾಳಿಯಲ್ಲಿ 245 ಮತಗಟ್ಟೆಗಳಿವೆ. ಪ್ರತಿ ಮತಗಟ್ಟೆಗೆ ಮತಗಟ್ಟೆ ಅಧಿಕಾರಿ, ಮೊದಲ ಮತಗಟ್ಟೆ ಅಧಿಕಾರಿ, ಎರಡನೇ ಮತಗಟ್ಟೆ ಅಧಿಕಾರಿ, ಮೂರನೇ ಮತಗಟ್ಟೆ ಅಧಿಕಾರಿ ಹಾಗೂ ನಾಲ್ಕನೇ ಮತಗಟ್ಟೆ ಅಧಿಕಾರಿಗಳು ಸೇರಿದಂತೆ ಪ್ರತಿ ಮತಗಟ್ಟೆಗೆ ಮತಗಟ್ಟೆ ಅಧಿಕಾರಿ ಸೇರಿದಂತೆ 5 ಜನ ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತದೆ. 1685 ಮತಗಟ್ಟೆಗಳಿಗೆ ಮತ್ತು ಹೆಚ್ಚುವರಿ ಸಿಬ್ಬಂದಿಯಾಗಿ ಒಟ್ಟು 10130 ಮತದಾನ ಸಿಬ್ಬಂದಿಗಳಿಗೆ ಎಲ್ಲಾ ತಾಲ್ಲೂಕುಗಳಲ್ಲಿ ಮೇ 5 ರಂದು ತರಬೇತಿಯನ್ನು ನೀಡಲಾಗಿದೆ.ಜಗಳೂರು ಸರ್ಕಾರಿ ಪದವಿ ಪೂರ್ವ ಕಾಲೇಜು, ಹರಿಹರ ಸೇಂಟ್ ಮೇರಿಸ್ ಕಾನ್ವೆಂಟ್ ಸ್ಕೂಲ್, ಹರಪನಹಳ್ಳಿ ರಸ್ತೆ, ದಾವಣಗೆರೆ ಉತ್ತರ ಮತ್ತು ದಕ್ಷಿಣ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಸಿದ್ದಗಂಗಾ ವಿದ್ಯಾಸಂಸ್ಥೆ, ಮಾಯಕೊಂಡ ತರಳಬಾಳು ವಿದ್ಯಾಸಂಸ್ಥೆ, ಅನುಭವ ಮಂಟಪ, ಹದಡಿ ರಸ್ತೆ, ಚನ್ನಗಿರಿ ಶ್ರೀ ಶಿವಲಿಂಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಹೊನ್ನಾಳಿ ಕ್ಷೇತ್ರದ ಮತದಾನ ಸಿಬ್ಬಂದಿಗಳಿಗೆ ಶ್ರೀಮತಿ ಗಂಗಮ್ಮ ಶ್ರೀ ವೀರಭದ್ರಪ್ಪಶಾಸ್ತ್ರಿ ಕೈಗಾರಿಕಾ ತರಬೇತಿ ಕೇಂದ್ರ, ಹಿರೇಕಲ್ಮಠ ಇಲ್ಲಿ ಶುಕ್ರವಾರ ತರಬೇತಿ ನಡೆಸಲಾಗಿದೆ.ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶಿವಾನಂದ ಕಾಪಶಿಯವರು  ದಾವಣಗೆರೆ ಉತ್ತರ ಮತ್ತು ದಕ್ಷಿಣ ಕ್ಷೇತ್ರಗಳ ಮತದಾನ ಸಿಬ್ಬಂದಿಗೆ ಸಿದ್ದಗಂಗಾ ವಿದ್ಯಾಸಂಸ್ಥೆಯಲ್ಲಿ ನಡೆದ ಮತದಾನ ತರಬೇತಿಯಲ್ಲಿ ಭಾಗವಹಿಸಿ ಮಾತನಾಡಿ ಮತಗಟ್ಟೆ ಸಿಬ್ಬಂದಿಗಳು ಮಾರ್ಗಸೂಚಿಗಳನ್ನು ಸರಿಯಾಗಿ ತಿಳಿದುಕೊಂಡು ಸಮಯಕ್ಕೆ ಸರಿಯಾಗಿ ಮಾಡುವ ಕೆಲಸಗಳನ್ನು ಅಚ್ಚುಕಟ್ಟಾಗಿ ಮತ್ತು ಪ್ರಾಮಾಣಿಕತೆಯಿಂದ ಮಾಡಬೇಕು. ಮತ್ತು ಯಾವುದೇ ಆತುರಕ್ಕೆ ಒಳಗಾಗದೇ ಸಮಚಿತ್ತರಾಗಿ ತರಬೇತಿಯನ್ನು ಪಡೆಯುವ ಮೂಲಕ ಗೊಂದಲಗಳನ್ನು ನಿವಾರಿಸಿಕೊಳ್ಳಬೇಕೆಂದು ತಿಳಿಸಿದರು.ಮತಗಟ್ಟೆ ಅಧಿಕಾರಿ ಸಂಪೂರ್ಣ ಮತಗಟ್ಟೆ ಉಸ್ತುವಾರಿ ನೋಡಿಕೊಳ್ಳುವರು. ಮೊದಲ ಮತಗಟ್ಟೆ ಅಧಿಕಾರಿ ಮತದಾರರ ಪಟ್ಟಿಯಲ್ಲಿ ಹೆಸರು ಮತ್ತು ಮತದಾರರ ಗುರುತಿನ ಚೀಟಿಯನ್ನು ಪರಿಶೀಲಿಸುತ್ತಾರೆ. ಎರಡನೇ ಮತಗಟ್ಟೆ ಅಧಿಕಾರಿ ನಿಗದಿತ ಬೆರಳಿಗೆ ಶಾಯಿಯ ಗುರುತನ್ನು ಹಾಕುತ್ತಾರೆ, ಮತದಾನದ ಚೀಟಿನೀಡಿ ಸಹಿ ಪಡೆದುಕೊಳ್ಳುತ್ತಾರೆ. ಮೂರನೇ ಮತಗಟ್ಟೆ ಅಧಿಕಾರಿ ಮತದಾನದ ಚೀಟಿ ಪಡೆದು ಬೆರಳಿಗೆ ಹಾಕಿರುವ ಶಾಯಿಯನ್ನು ಪರಿಶೀಲಿಸುತ್ತಾರೆ. ಮತ್ತು ಮತಯಂತ್ರಗಳ ಪರಿಶೀಲನೆಯನ್ನು ನೋಡಿಕೊಳ್ಳಲಾಗುತ್ತದೆ.ಮತದಾನ ಸಿಬ್ಬಂದಿಗಳು ತಮಗೆ ನೀಡಲಾದ ಮಾರ್ಗಸೂಚಿಗಳನ್ನು ಸರಿಯಾಗಿ ಅರ್ಥೈಸಿಕೊಂಡು ಕರ್ತವ್ಯ ನಿರ್ವಹಿಸಬೇಕು. ಹಾಗೂ ಚುನಾವಣಾ ಆಯೋಗವು ನೀಡಿರುವ ಎಲ್ಲಾ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕೆಂದರು.ತರಬೇತಿಯಲ್ಲಿ ದಾವಣಗೆರೆ ಉತ್ತರ ಚುನಾವಣಾಧಿಕಾರಿ ಶ್ರೀನಿವಾಸ್, ದಕ್ಷಿಣದ ಚುನಾವಣಾಧಿಕಾರಿ ರೇಣುಕಾ ಹಾಗೂ ಸಹಾಯಕ ಚುನಾವಣಾಧಿಕಾರಿಗಳು ಉಪಸ್ಥಿತರಿದ್ದರು.