100 ವಿದ್ಯಾರ್ಥಿಗಳಿಗೆ ನೀಟ್ ಅಧ್ಯಯನ ಸಾಮಗ್ರಿ ಉಚಿತ

ಬೀದರ್:ಜು.1: ಕಲ್ಯಾಣ ಕರ್ನಾಟಕದ ಕನ್ನಡ ಮಾಧ್ಯಮದ 100 ನೀಟ್ ಪುನರಾವರ್ತಿತ ವಿದ್ಯಾರ್ಥಿಗಳಿಗೆ ನೀಟ್ ಅಧ್ಯಯನ ಸಾಮಗ್ರಿ ಉಚಿತವಾಗಿ ಕೊಡಲಾಗುವುದು ಎಂದು ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ತಿಳಿಸಿದ್ದಾರೆ.

ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ವತಿಯಿಂದ ಜುಲೈ 2 ರಂದು ನಗರದ ಶಹಾಪುರ ಗೇಟ್ ಸಮೀಪದ ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜಿನಲ್ಲಿ ನಡೆಯಲಿರುವ ಪುನರಾವರ್ತಿತ ನೀಟ್ ಉಚಿತ ತರಬೇತಿಯ ಸಂದರ್ಶನಕ್ಕೆ ಹಾಜರಾಗುವ ಕನ್ನಡ ಮಾಧ್ಯಮದ 100 ವಿದ್ಯಾರ್ಥಿಗಳಿಗೆ ತಲಾ ರೂ. 3 ಸಾವಿರ ಮೌಲ್ಯದ ಪಠ್ಯ ಸಾಮಗ್ರಿ ನೀಡಲಾಗುವುದು ಎಂದು ಹೇಳಿದ್ದಾರೆ.

ಸಂದರ್ಶನದಲ್ಲಿ ಆಯ್ಕೆಯಾಗುವ 75 ಅಭ್ಯರ್ಥಿಗಳಿಗೆ ನೀಟ್ ಉಚಿತ ತರಬೇತಿ ಕೊಡಲಾಗುವುದು ಎಂದು ತಿಳಿಸಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ನೀಟ್‍ನಲ್ಲಿ 350ಕ್ಕೂ ಅಧಿಕ ಅಂಕ ಗಳಿಸಿದ ಕಲ್ಯಾಣ ಕರ್ನಾಟಕ ಭಾಗದ ಕನ್ನಡ ಮಾಧ್ಯಮದ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬಹುದು. ಸಂದರ್ಶನಕ್ಕಾಗಿ ಶಾಹೀನ್ ಕಾಲೇಜಿನಲ್ಲಿ ನೇರವಾಗಿ ಹೆಸರು ನೋಂದಣಿ ಮಾಡಬಹುದು ಎಂದು ಹೇಳಿದ್ದಾರೆ.

ಹೆಸರು ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 18001216235 ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.