100 ಕೋಟಿ ಸಾಲದ ಆಸೆ ಹುಟ್ಟಿಸಿ 1.80 ಕೋಟಿ ವಂಚನೆ ಇಬ್ಬರು ಸೆರೆ

ಬೆಂಗಳೂರು,ಡಿ.೯-ಉದ್ಯಮಿಯೊಬ್ಬರಿಗೆ ಫ್ಯೂಚರ್ ಕ್ರೆಸ್ಟ್ ವೆಂಚರ್ಸ್ ಕಂಪನಿ ಹೆಸರಲ್ಲಿ ಸುಮಾರು ೧೦೦ ಕೋಟಿ ರೂಗಳ ಸಾಲದ ಆಸೆ ತೋರಿಸಿ ೧.೮೦ ಕೋಟಿ ರೂಗಳ ವಂಚನೆ ನಡೆಸಿದ ಇಬ್ಬರು ಖದೀಮರನ್ನು ಬಂಧಿಸಿರುವ ಹೆಚ್ ಎಸ್ ಆರ್ ಲೇಔಟ್ ಪೊಲೀಸರು ಪ್ರಮುಖ ಆರೋಪಿಗಾಗಿ ಶೋಧ ನಡೆಸಿದ್ದಾರೆ.
ವಂಚನೆಗೊಳಗಾದ ಉದ್ಯಮಿ ಮಂಥೆನಾ ತರುಣ್ ಗಾಂಧಿ ಅವರು ನೀಡಿದ ದೂರು ಆಧರಿಸಿ ನರೇಶ್ ಹಾಗೂ ಕೌಶಿಕ್ ನನ್ನು ಬಂಧಿಸಿ ಪ್ರಮುಖ ಆರೋಪಿ ಕಾರ್ತಿಕ್ ವೇಲನ್ ಬಂಧನಕ್ಕೆ ತೀವ್ರ ಶೋಧ ನಡೆಸಲಾಗಿದೆ.
ವಂಚನೆಯಲ್ಲಿ ೩೦ಲಕ್ಷ ರೂಗಳನ್ನು ಬ್ಯಾಂಕ್ ನಲ್ಲಿ ತಡೆಹಿಡಿಯಲಾಗಿದ್ದು ಉಳಿದ ೧ಕೋಟಿ ೫೦ಲಕ್ಷ ರೂಗಳೊಂದಿಗೆ ಕಾರ್ತಿಕ್ ವೇಲನ್ ಪರಾರಿಯಾಗಿದ್ದಾನೆ.
ಹೈದರಾಬಾದ್ ಮೂಲದ ಉದ್ಯಮಿ ಮಂಥೆನಾ ತರುಣ್ ಗಾಂಧಿಗೆ ಆರೋಪಿಗಳು ನೂರು ಕೋಟಿ ಸಾಲದ ಆಸೆ ತೋರಿಸಿ ೧ ಕೋಟಿ ೮೦ ಲಕ್ಷ ವಂಚನೆ ಮಾಡಿದ್ದರು.
ವ್ಯವಹಾರ ಮಾಡುವ ಸಲುವಾಗಿ ತರುಣ್ ಗಾಂಧಿ ಸಾಲಕ್ಕಾಗಿ ಹುಡುಕಾಡುತ್ತಿದ್ದರು. ಈ ವೇಳೆ ಪ್ಯೂಚರ್ ಕ್ರೆಸ್ಟ್ ವೆಂಚರ್ಸ್ ಕಂಪನಿ ಸಾಲ ಕೊಡುವುದಾಗಿ ಆಸೆ ತೋರಿಸಿದೆ. ಈ ಬಗ್ಗೆ ತರುಣ್ ಗಾಂಧಿ ತಮ್ಮ ಸಂಬಂಧಿಕರಿಂದ ಮಾಹಿತಿ ಪಡೆದಕೊಂಡಿದ್ದಾರೆ.
ಸಂಬಂಧಿಕರ ಮಾಹಿತಿಯನ್ನಾಧರಿಸಿ ಉದ್ಯಮಿ ತರುಣ್ ಗಾಂಧಿ ಕಂಪನಿ ಸಂಪರ್ಕಿಸಿದ್ದರು. ಈ ವೇಳೆ ನೂರು ಕೋಟಿ ಸಾಲ ಕೊಡಬೇಕಾದ್ರೆ ಮೂರು ತಿಂಗಳ ಬಡ್ಡಿ ಮುಂಗಡವಾಗಿ ನೀಡಬೇಕು ಎಂದಿತ್ತು ಕಂಪನಿ. ಅದನ್ನು ನಂಬಿ ಮೂರು ತಿಂಗಳ ಬಡ್ಡಿ ೧ ಕೋಟಿ ೮೦ ಲಕ್ಷ ರೂ. ಗಳನ್ನು ತರುಣ್ ಗಾಂಧಿ ತಕ್ಷಣವೇ ನೀಡಿಬದ್ದರು.
ಆದರೆ ನಂತರ ಸಾಲವೂ ನೀಡದೆ, ತಾನು ನೀಡಿದ್ದ ಹಣವೂ (ಬಡ್ಡಿ ೧ ಕೋಟಿ ೮೦ ಲಕ್ಷ ರೂ) ನೀಡದೆ ಕಂಪನಿ ಅಧಿಕಾರಿಗಳು ಪರಾರಿಯಾಗಿದ್ದರು. ಕಂಪನಿಯ ಮುಖ್ಯಸ್ಥ ಕಾರ್ತಿವೇಲನ್ ಪೋನ್ ಸ್ವಿಚ್ ಅಪ್ ಮಾಡಿಕೊಂಡು ಅಡಗಿ ಕುಳಿತಿದ್ದ.
ಈ ಹಿನ್ನೆಲೆಯಲ್ಲಿ ಮಂಥೆನಾ ತರುಣ್ ಗಾಂಧಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನು ಬಂಧಿಸಿ ಪ್ರಕರಣದ ಮುಖ್ಯ ಆರೋಪಿ ಕಾರ್ತಿವೇಲನ್ ಗಾಗಿ ಹುಡುಕಾಟ ನಡೆಸಿದ್ದಾರೆ.