100 ಆಹಾರ ಸಂಸ್ಕರಣಾ ಘಟಕಗಳ ಸ್ಥಾಪನೆ:ಸಿ.ಎಂ ಬಸವರಾಜ ಬೊಮ್ಮಾಯಿ


ಸಂಜೆವಾಣಿ ವಾರ್ತೆ
ಗಂಗಾವತಿ, ಮಾ.15: ರೈತರ ಅಭಿವೃದ್ಧಿಗಾಗಿ ಬೆಳೆದಿರುವ ಬೆಳೆಗಳನ್ನು ಸ್ಥಳೀಯ ಮಟ್ಟದಲ್ಲಿಯೇ ಸಂಸ್ಕರಣ ಮಾಡಿ, ಬೆಳೆಗಳಿಗೆ ಬ್ರ್ಯಾಂಡ್ ಸೃಷ್ಠಿಸುವ ಉದ್ದೇಶದಿಂದ ಕೊಪ್ಪಳ ಜಿಲ್ಲೆಯಲ್ಲಿ 100 ಆಹಾರ ಸಂಸ್ಕರಣಾ ಘಟಕಗಳನ್ನು ಸ್ಥಾಪನೆ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು ಹೇಳಿದರು.
ನಗರದ ಸಿಬಿಎಸ್ ತಾಲೂಕು ಕ್ರೀಡಾಂಗಣದಲ್ಲಿ ರಾಜ್ಯ ಸರಕಾರ ಹಾಗೂ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡ ಕೇಂದ್ರ ಹಾಗೂ ರಾಜ್ಯ ಸರಕಾರದ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.
ರೈತರು ಆರ್ಥಿಕವಾಗಿ ಬಲಿಷ್ಠರಾಗದರೆ ಮಾತ್ರ ರಾಜ್ಯ ಹಾಗೂ ದೇಶ ಆರ್ಥಿಕವಾಗಿ ಬಲಿಷ್ಠವಾಗಲು ಸಾಧ್ಯವಾಗುತ್ತದೆ. ಅದೇ ಉದ್ದೇಶದಿಂದ ನರೇಂದ್ರ ಮೋದಿಯವರಿಗೆ ರೈತರಿಗೆ ಹೆಚ್ಚಿನ ಆದ್ಯತೆಯನ್ನು ನೀಡಿ, ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹವನ್ನು ನೀಡಲು ಕಿಸಾನ್ ನಿಧಿ ಯೋಜನೆಯನ್ನು ಜಾರಿ ಮಾಡಿದ್ದಾರೆ. ಈ ಯೋಜನೆಯಲ್ಲಿ ಜಿಲ್ಲೆಯ ಸಾವಿರ ರೈತರು ಸಹಾಯಧನವನ್ನು ಪಡೆದುಕೊಂಡಿದ್ದಾರೆ. ಇನ್ನೂ ರೈತರ ಬೆಳೆದಿರುವ ಬೆಳೆಗಳಿಗೆ ಬೆಲೆ ದೊರೆಯಲು ಹಾಗೂ ಬ್ರ್ಯಾಂಡ್ ಸೃಷ್ಠಿ ಮಾಡಬೇಕು ಎನ್ನುವ ಉದ್ದೇಶದಿಂದ ಸಂಸ್ಕರಣಾ ಘಟಕಗಳನ್ನು ಸ್ಥಾಪನೆ ಮಾಡಲಾಗುವುದು. ಜಿಲ್ಲೆಯಲ್ಲಿ ಕೊಪ್ಪಳ ಏತನೀರಾವರಿ ಯೋಜನೆ, ಗಂಗಾವತಿಯ ಕೆರೆಗಳನ್ನು ತುಂಬಿಸುವುದು, ತುಂಗಭದ್ರಾ ಯೋಜನೆ, ತುಂಗಾ ಮೇಲ್ದಂಡೆ ಯೋಜನೆ, ಸಿಂಗಟಾಲೂರು ಯೋಜನೆ, ಎನ್‍ಎಲ್‍ಬಿಸಿ ಯೋಜನೆಗಳಿಂದ 7 ಲಕ್ಷ ಎಕರೆಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು. ಕಾಂಗ್ರೆಸ್ ಪಕ್ಷವು 60 ವರ್ಷಗಳ ಕಾಲ ಅಧಿಕಾರವನ್ನು ನಡೆಸಿದರು ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ. ಸದ್ಯ ಚುನಾವಣೆ ಆಗಮಿಸಿದ ವೇಳೆಯಲ್ಲಿ ಜನರ ಮುಂದೆ ಹೋಗಿ ಗ್ಯಾರಂಟಿ ಕಾರ್ಡ್‍ಗಳನ್ನು ನೀಡುವ ಕೆಲಸಕ್ಕೆ ಮುಂದಾಗಿಲ್ಲ. ಅಧಿಕಾರ ಅವಧಿಯಲ್ಲಿ ಕೆಲಸ ಮಾಡದೆ ಈ ಗ್ಯಾರಂಟಿ ನೀಡಲು ಹೊರಟಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ದೇಶದಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಸಾಧ್ಯವಿಲ್ಲ. ಅವರು ಏನಿದ್ದರು ಜನರ ಮೂಗಿಗೆ ತುಪ್ಪವನ್ನು ಹಚ್ಚುವ ಕೆಲಸವನ್ನು ಮಾಡುತ್ತಾರೆ. ಜನರು ಅವರನ್ನು ನಂಬಬಾರದು ಎಂದು ಸಿಎಂ ಹೇಳಿದರು.
ನಂತರ ಕಾರ್ಯಕ್ರಮದಲ್ಲಿ ವಿವಿಧ ಯೋಜನೆಯಗಳ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಿ, ಆಯ್ಕೆಯಾಗಿರುವ ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು, ಸಹಾಯಧನ ಚೆಕ್, ವಿದ್ಯಾರ್ಥಿಗಳಿಗೆ ಲ್ಯಾಪ್‍ಟ್ಯಾಪ್ ವಿತರಣೆ ಮಾಡಲಾಯಿತು.ಈ ವೇಳೆ ಸಚಿವರಾದ ಆನಂದ್‍ಸಿಂಗ್, ಹಾಲಪ್ಪ ಆಚಾರ್, ಶಶಿಕಲಾ ಜೊಲ್ಲೆ, ಸಂಸದ ಸಂಗಣ್ಣ ಕರಡಿ, ಶಾಸಕ ಬಸವರಾಜ ದಡೇಸೂಗುರು, ಪರಣ್ಣ ಮುನವಳ್ಳಿ, ಎಂಎಲ್‍ಸಿ ಹೇಮಲತಾ ನಾಯಕ, ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು, ಸಿಇಒ ರಾಹುಲ್ ರತ್ನಂ ಪಾಂಡೆ ಸೇರಿದಂತೆ ಅನೇಕರು ಇದ್ದರು.