10, 12ನೇ ತರಗತಿ ಪರೀಕ್ಷೆ ವಾರದಲ್ಲಿ ನಿರ್ಧಾರ

ಬೆಂಗಳೂರು, ಜೂ. ೨- ಕೇಂದ್ರ ಸರ್ಕಾರ ಸಿಬಿಎಸ್‌ಇಯ ೧೦ ಮತ್ತು ೧೨ನೇ ತರಗತಿಗಳ ಪರೀಕ್ಷೆಗಳನ್ನು ರದ್ದು ಮಾಡಿರುವ ಬೆನ್ನಲ್ಲೆ ರಾಜ್ಯದಲ್ಲೂ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳು ರದ್ದು ಮಾಡುವ ಒತ್ತಡಗಳು ಹೆಚ್ಚಿದ್ದು, ಪರೀಕ್ಷೆಗಳ ಸಂಬಂಧ ಸರ್ಕಾರ ಇನ್ನೊಂದೆರೆಡು ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಿದೆ.
ರಾಜ್ಯದಲ್ಲಿ ಕೊರೊನಾದ ಈ ಪರಿಸ್ಥಿತಿಯಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ನಡೆಸಬೇಕೇ ಬೇಡವೇ ಎಂಬ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಶಿಕ್ಷಣ ಸಚಿವ ಸುರೇಶ್‌ಕುಮಾರ್ ಈಗಾಗಲೇ ಹೇಳಿದ್ದು, ಇನ್ನೆರೆಡು ದಿನಗಳಲ್ಲಿ ತಜ್ಞರು ಹಾಗೂ ಅಧಿಕಾರಿಗಳ ಜತೆ ಸಭೆ ನಡೆಸುವುದಾಗಿ ತಿಳಿಸಿದ್ದಾರೆ.
ಕೇಂದ್ರದ ಬಿಜೆಪಿ ಸರ್ಕಾರ ೧೦ ಮತ್ತು ೧೨ನೇ ತರಗತಿ ಪರೀಕ್ಷೆಗಳನ್ನು ರದ್ದು ಮಾಡಿರುವುದರಿಂದ ರಾಜ್ಯದಲ್ಲೂ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ರದ್ದು ಮಾಡುವ ಒತ್ತಡಗಳು ಹೆಚ್ಚಿದ್ದು, ಹಲವು ಸಚಿವರುಗಳು ಕೊರೊನಾದ ಈ ಸಂದರ್ಭದಲ್ಲಿ ಪರೀಕ್ಷೆ ಬೇಡ, ಪರೀಕ್ಷೆ ನಡೆಸದೆ ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡುವುದು ಸೂಕ್ತ ಎಂಬ ಸಲಹೆಯನ್ನು ಮುಖ್ಯಮಂತ್ರಿಗಳಿಗೆ ನೀಡಿದ್ದಾರೆ ಎನ್ನಲಾಗಿದೆ. ಈ ಪರಿಸ್ಥಿತಿಯಲ್ಲಿ ಪರೀಕ್ಷೆ ನಡೆಸಿ ವಿದ್ಯಾರ್ಥಿಗಳಿಗೆ ಸೋಂಕು ತಗುಲಿದರೆ ಸರ್ಕಾರಕ್ಕೆ ಕೆಟ್ಟ ಹೆಸರು, ಹಾಗಾಗಿ ಅನಗತ್ಯ ಗೊಡವೆ ಬೇಡ ಕೇಂದ್ರಸರ್ಕಾರದ ಮಾದರಿಯಲ್ಲೇ ರದ್ದು ಮಾಡೋಣ ಎಂಬುದು ಕೆಲ ಸಚಿವರುಗಳ ನಿಲುವಾಗಿದೆ.
ಶಿಕ್ಷಣ ಸಚಿವ ಸುರೇಶ್‌ಕುಮಾರ್ ಮೊದಲಿನಿಂದಲೂ ಪರೀಕ್ಷೆ ನಡೆಸುವ ನಿಲುವನ್ನು ಹೊಂದಿದ್ದು, ಕೊರೊನಾ ನಿಯಂತ್ರಣಕ್ಕೆ ಬಂಎದ ನಂತರ ಪರೀಕ್ಷೆ ನಡೆಸುವುದು ಸೂಕ್ತ. ಮಕ್ಕಳಿಗೆ ಲಸಿಕೆ ನೀಡಿ ಪರೀಕ್ಷೆ ನಡೆಸಬಹುದೇ ಎಂಬ ಬಗ್ಗೆಯೂ ಚರ್ಚೆಗಳನ್ನು ನಡೆಸಿದ್ದಾರೆ.
ಅಂತಿಮವಾಗಿ ತಜ್ಞರ ಸಲಹೆ ಆಧರಿಸಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳ ಹಣೆಬರಹ ನಿರ್ಧಾರವಾಗಲಿದೆ.