10 ಸಾವಿರ ಹಾಸಿಗೆಯ ಕೋವಿಡ್ ಕೇರ್ ಆಸ್ಪತ್ರೆ ಏನಾಯಿತು?

ಬೆಂಗಳೂರು, ಏ. ೨೬- ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ಕಳೆದ ವರ್ಷ ತುಮಕೂರು ರಸ್ತೆಯಲ್ಲಿರುವ ಬೆಂಗಳೂರು ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಸ್ಥಾಪಿಸಿದ್ದ ೧೦ ಸಾವಿರ ಹಾಸಿಗೆಗಳ ಕೋವಿಡ್ ಕೇರ್ ಆಸ್ಪತ್ರೆ ಕಥೆ ಏನಾಯಿತು ಎಂಬುದನ್ನು ಸರ್ಕಾರ ಜನರಿಗೆ ತಿಳಿಸಬೇಕು ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ.
ಯುದ್ಧ ಕಾಲೇ ಶಸ್ತ್ರಾಭ್ಯಾಸ ಎಂಬಂತೆ ಸೋಂಕಿತರ ಚಿಕಿತ್ಸೆಗೆ ಸರ್ಕಾರ ಈಗ ಪಡಿಪಾಟಲು ಬೀಳುತ್ತಿದೆ. ಬಿಐಇಸಿಯಲ್ಲಿ ಸ್ಥಾಪಿಸಿದ್ದ ಕೋವಿಡ್ ಕೇರ್ ಆಸ್ಪತ್ರೆ ಕಥೆ ಏನಾಯಿತು ಎಂಬುದನ್ನು ತಿಳಿಸಲಿ ಎಂದು ಅವರು ಟ್ವಿಟ್ಟರ್‌ನಲ್ಲಿ ಆಗ್ರಹಿಸಿದ್ದಾರೆ.
ಕಳೆದ ವರ್ಷ ಕೋಟ್ಯಂತರ ರೂ. ಖರ್ಚು ಮಾಡಿ ಈ ಕೋವಿಡ್ ಕೇರ್ ಆಸ್ಪತ್ರೆಯನ್ನು ನಿರ್ಮಿಸಲಾಗಿತ್ತು. ಈಗ ಈ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿಲ್ಲವೇ, ಅದರ ಸ್ಥಿತಿ ಏನಾಗಿದೆ ಎಂಬುದನ್ನು ಸರ್ಕಾರ ಜನರ ಮುಂದಿಡಲಿ ಎಂದು ಟ್ವೀಟ್‌ನಲ್ಲಿ ಒತ್ತಾಯಿಸಿದರು.
ಸೋಂಕಿತರು ಬೆಡ್ ಇಲ್ಲದೆ ಪರದಾಡುತ್ತಿದ್ದಾರೆ. ಬೆಡ್‌ಗಾಗಿ ಸರ್ಕಾರ ಮತ್ತು ಖಾಸಗಿ ಆಸ್ಪತ್ರೆಗಳ ನಡುವೆ ಕಚ್ಚಾಟ ನಡೆದಿದೆ. ಖಾಸಗಿ ಆಸ್ಪತ್ರೆಗಳು ಸರ್ಕಾರದ ಆದೇಶವನ್ನು ಧಿಕ್ಕರಿಸುವ ಮಾತುಗಳನ್ನಾಡಿವೆ. ಸರ್ಕಾರ ಸೋಂಕಿತರ ಚಿಕಿತ್ಸೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಲ್ಲೂ ಸಂಪೂರ್ಣ ಸೋತಿದೆ. ಹೀಗಾದರೆ ಸೋಂಕಿತರ ಪಾಡೇನು ಎಂದು ಅವರು ಪ್ರಶ್ನಿಸಿದ್ದಾರೆ.