10 ಸಾವಿರ ಪ್ಯಾಕೇಜ್ ಘೋಷಣೆಗೆ ಒತ್ತಾಯ

ಕೋಲಾರ,ಮೇ.೨೦: ಅಸಂಘಟಿತ ಕಾರ್ಮಿಕರಿಗೆ ಲಾಕ್ ಡೌನ್ ಪ್ಯಾಕೇಜ್‌ನಿಂದ ಕರೊನಾದಿಂದ ಸಾಯುವವನಿಗೆ ಆಕ್ಸಿಜನ್ ನೀಡಿದಂತಾಗಿದೆ. ೧೦ ಸಾವಿರ ರೂಗಳ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಕರ್ನಾಟಕ ಪ್ರದೇಶ ಅಸಂಘಟಿತ ಕಾರ್ಮಿಕ ಪರಿಷತ್ ಅಧ್ಯಕ್ಷ ಕೆ.ವಿ ಸುರೇಶ್‌ಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಕಳೆದ ಬಾರಿ ಲಾಕ್‌ಡೌನ್ ಪ್ಯಾಕೇಜ್ ೫ ಸಾವಿರ ರೂಗಳನ್ನು ಆಟೋ ಚಾಲಕರಿಗೆ, ಟ್ಯಾಕ್ಸಿ ಚಾಲಕರಿಗೆ, ಕ್ಷೌರಿಕರಿಗೆ, ದೋಬಿಗಳಿಗೆ, ಕಟ್ಟಡ ಕಾರ್ಮಿಕರಿಗೆ ಸಮಾನವಾಗಿ ನೀಡಲಾಗಿತ್ತಾದರೂ ಈ ಕಾರ್ಮಿಕರಿಗೆ ಸಮರ್ಪಕ ಪರಿಹಾರ ನೀಡಿರಲಿಲ್ಲ. ಇಂತಹ ಸಂದರ್ಭದಲ್ಲಿ ಮತ್ತೊಮ್ಮೆ ಕರೋನಾ ೨ನೇ ಅಲೆ ಸುನಾಮಿಯ ರೀತಿಯಲ್ಲಿ ಅಪ್ಪಳಿಸುತ್ತಿದ್ದು, ಇದರ ಹೊಡೆತ ಸಮಾಜದ ಕೆಳ ವರ್ಗದವರಾದ ಶ್ರಮಿಕ ವರ್ಗದ ಮೇಲೆ ನೇರ ಪರಿಣಾಮ ಬೀರುತ್ತದೆ.
ಅಸಂಘಟಿತ ಕಾರ್ಮಿಕರಿಗೆ ಕಳೆದ ಬಾರಿ ನೀಡಿದ್ದ ಪರಿಹಾರ ೫ ಸಾವಿರ ಕಡಿತ ಮಾಡಿ ೩ ಸಾವಿರ ರೂಗಳನ್ನು ಮಾಡಿರುವುದು ಸಮಾಧಾನಕರ. ಜೊತೆಯಲ್ಲೇ ಟೈಲರ್, ಮೆಕಾನಿಕ್, ಮನೆ ಕೆಲಸ ಮಾಡುವವರಿಗೆ, ಚಿನಿವಾರರಿಗೆ, ಕಮ್ಮಾರರಿಗೆ, ಕುಂಬಾರರಿಗೆ, ಚಿಂದಿ ಆಯುವವರಿಗೆ, ಬೀದಿ ಬದಿ ವ್ಯಾಪಾರಸ್ಥರಿಗೆ ೨ ಸಾವಿರ ರೂಗಳ ಪರಿಹಾರ ನೀಡಿರುವುದು ಸಮಾಧಾನಕರವಾಗಿದೆ.
ಈ ಬಾರಿಯ ಕರೋನಾ ಹೆಮ್ಮಾರಿಯ ರುದ್ರ ನರ್ತನ ಕಾರ್ಮಿಕರ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದು, ಜೀವನಾಧಾರದೊಂದಿಗೆ ಜೀವವನ್ನು ಕಸಿದುಕೊಳ್ಳುತ್ತಿದ್ದು, ಶ್ರಮಿಕ ವರ್ಗದವರ ಜೀವನ ಅತಿ ದುರ್ಬರವಾಗಿದೆ. ಆದ್ದರಿಂದ ಶ್ರಮಿಕ ವರ್ಗಕ್ಕೆ ೧೦ ಸಾವಿರ ರೂಗಳ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಕರ್ನಾಟಕ ಪ್ರದೇಶ ಅಸಂಘಟಿತ ಕಾರ್ಮಿಕ ಪರಿಷತ್ ಆಗ್ರಹಿಸುತ್ತದೆ.