
ಕೋಲಾರ, ಅ.೯- ಜಿಲ್ಲೆಯ ಸರ್ವೇ ಇಲಾಖೆಯಲ್ಲಿ ಶೇ.೫೦ಕ್ಕಿಂತ ಹೆಚ್ಚು ಹುದ್ದೆಗಳು ಖಾಲಿಯಿದ್ದು, ರೈತರ ಜಮೀನುಗಳ ಅಳತೆ,ಪೋಡಿ ಸಂಬಂಧಿಸಿದಂತೆ ಸುಮಾರು ೧೦ ಸಾವಿರ ಕಡತಗಳ ವಿಲೇವಾರಿ ನೆನೆಗುದಿಗೆ ಬಿದ್ದಿರುವ ಸಂದರ್ಭದಲ್ಲಿ ಇರುವ ಸಿಬ್ಬಂದಿಯನ್ನು ವರ್ಗಾವಣೆ ಮಾಡಿರುವ ಕುರಿತು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಈ ನಡುವೆ ಜಿಲ್ಲೆಯ ೬ ತಾಲ್ಲೂಕುಗಳಲ್ಲಿ ವಿವಿಧ ರೀತಿಯ ಪೋಡಿ ಪ್ರಕರಣ ವಿಲೇವಾರಿಗಾಗಿ ಬಾಕಿ ಇದ್ದು,ಸಾರ್ವಜನಿಕ ಹಿತ ದೃಷ್ಟಿಯಿಂದ ಹುದ್ದೆ ಭರ್ತಿ ಮಾಡುವವರೆಗೂ ವರ್ಗಾವಣೆಗೊಂಡಿರುವವರನ್ನು ಇಲ್ಲೇ ಮುಂದುವರೆಸಲು ರಾಜ್ಯ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಜಿಲ್ಲಾಧಿಕಾರಿಗಳು ಪತ್ರ ಬರೆದಿದ್ದಾರೆ ಎನ್ನಲಾಗಿದೆ
ಜಿಲ್ಲೆಯಲ್ಲಿ ೨೧ ಭೂಮಾಪಕರ ಹುದ್ದೆ ಖಾಲಿ ಇದೆ, ತಪಾಸಕರ ೧೧ ಹುದ್ದೇ ಖಾಲಿ ಇದ್ದು, ದೈನಂದಿನ ಹಾಗೂ ಸಾರ್ವಜನಿಕ ಕೆಲಸಗಳಾದ ಮೋಜಿಣಿ, ಕೆರೆ,ಸ್ಮಶಾನ, ಮುಜರಾಯಿ ದೇವಾಲಯ, ತತ್ಕಾಲ್‌ಪೋಡಿ, ಯೋಜನೆಯ ತಕರಾರರು ಪ್ರಕರಣಗಳು ಬಾಕಿ ಇದ್ದು, ಜಿಲ್ಲೆಯ ರೈತರು ಹಾಕಿರುವ ಅರ್ಜಿಗಳು ಬಾಕಿ ಇವೆ.
ವರ್ಗಾವಣೆ ಗೊಂಡಿರುವ ಭೂಮಾಪಕರು, ತಪಾಸಕರ ಹುದ್ದೆಗಳನ್ನು ಸಾರ್ವಜನಿಕ ಹಿತ ದೃಷ್ಟಿಯಿಂದ ಇರುವ ಜಾಗದಲ್ಲೇ ಮುಂದುವರೆಸಲು ಡಿಸಿಯವರು ಕೋರಿದ್ದಾರೆ.
ಕಂದಾಯ ಸಚಿವರ
ಜಿಲ್ಲೆಯಲ್ಲೇ ದುಸ್ಥಿತಿ
ಕಂದಾಯ ಸಚಿವರ ತವರು ಜಿಲ್ಲೆಯಲ್ಲೇ ಸರ್ವೇ ಇಲಾಖೆ ಖಾಲಿ ಮಾಡುವ ಪ್ರಯತ್ನ ನಡೆಯುತ್ತಿದ್ದು, ಈಗಾಗಲೇ ತಮ್ಮ ಜಮೀನುಗಳ ಪೋಡಿ,ಸರ್ವೇ ವಿಳಂಬದಿಂದ ರೋಸಿ ಹೋಗಿರುವ ರೈತರು ಬೀದಿಗಿಳಿಯುವ ಮುನ್ನಾ ಸರ್ಕಾರ ಮಾಡಿರುವ ವರ್ಗಾವಣೆಗಳನ್ನು ತಡೆಯುವ ಮೂಲಕ ಜಿಲ್ಲೆಗೆ ಮತ್ತಷ್ಟು ಸಿಬ್ಬಂದಿಯನ್ನು ತುಂಬುವ ಕೆಲಸ ಮಾಡಬೇಕಾಗಿದೆ.
ಅನ್ನದಾತ ತನ್ನ ಜಮೀನು ಅಳತೆ, ಹದ್ದುಬಸ್ತ್, ಪೋಡಿಗಾಗಿ ಅರ್ಜಿ ಸಲ್ಲಿಸಿ ವರ್ಷಗಳೇ ಉರುಳಿದ್ದರೂ ಸಿಬ್ಬಂದಿ ಕೊರತೆಯಿಂದಾಗಿ ಸರ್ವೇ ಇಲಾಖೆಯಲ್ಲಿ ಕೆಲಸಗಳು ಕುಂಟುತ್ತಾ ಸಾಗಿದ್ದು, ರೈತರು,ಸಾರ್ವಜನಿಕರ ಅಲೆದಾಟ ಮಾತ್ರ ತಪ್ಪಿಲ್ಲ.ಇಂತಹ ಸಂಕಷ್ಟದ ಸಂದರ್ಭದಲ್ಲೂ ಖಾಲಿ ಹುದ್ದೆ ಭರ್ತಿ ಮಾಡಬೇಕಾದ ಸರ್ಕಾರ ಇರುವ ಸಿಬ್ಬಂದಿಯನ್ನೇ ಹೊರ ಜಿಲ್ಲೆಗಳಿಗೆ ವರ್ಗಾವಣೆ ಮಾಡುವ ಮೂಲಕ ಸರ್ವೇ ಇಲಾಖೆಯಲ್ಲಿನ ಕೆಲಸಗಳು ಮತ್ತಷ್ಟು ನೆನೆಗುದಿಗೆ ಬೀಳುವಂತಾಗುತ್ತಿದೆ. ಸಿಬ್ಬಂದಿಯನ್ನು ಇಲ್ಲಿ ಉಳಿಸಿಕೊಳ್ಳಲು ಪ್ರಯತ್ನಿಸಬೇಕಾದ ಜಿಲ್ಲೆಯ ಶಾಸಕರು, ವಿಧಾನಪರಿಷತ್ ಸದಸ್ಯರು ಮಾತ್ರ ತುಟಿ ಬಿಚ್ಚುತ್ತಿಲ್ಲ ಎಂಬುದು ಸಾರ್ವಜನಿಕರ ಆಕ್ರೋಷವಾಗಿದೆ.
ಶೇ.೫೦ ಹುದ್ದೆಗಳು
ಖಾಲಿ… ಖಾಲಿ-
ಜಿಲ್ಲೆಯ ಆರು ತಾಲ್ಲೂಕುಗಳಿಗೆ ಇರಬೇಕಾದ ಆರು ಮಂದಿ ಭೂದಾಖಲೆಗಳ ಸಹಾಯಕ ನಿರ್ದೇಶಕರ ಹುದ್ದೆಗಳಿಗೆ ಮೂವರು ಮಾತ್ರ ಇದ್ದಾರೆ. ಮೂರು ತಾಲ್ಲೂಕುಗಳಲ್ಲಿ ಈ ಪ್ರಮುಖ ಹುದ್ದೆಗಳೇ ಖಾಲಿ ಇವೆ, ಆರು ತಾಲ್ಲೂಕುಗಳ ನಿರ್ವಹಣೆಗೆ ಡಿಡಿಎಲ್‌ಆರ್ ಕಚೇರಿಯಲ್ಲಿ ಇರುವುದು ಒಬ್ಬರೇ ಸೂಪರ್‌ವೈಸರ್ ಆರು ಮಂದಿಯ ಕೆಲಸ ಒಬ್ಬರೇ ನಿರ್ವಹಿಸಬೇಕಾಗಿದೆ.
ಶೇ.೫೦ಕ್ಕಿಂತ ಹೆಚ್ಚು ಹುದ್ದೆಗಳು ಖಾಲಲಿ ಇದ್ದರೂ ಅದನ್ನು ತುಂಬುವ ಪ್ರಯತ್ನವಂತೂ ಕಂದಾಯ ಇಲಾಖೆಯಲ್ಲಿ ಆಗುತ್ತಿಲ್ಲ.
೧೦ಸಾವಿರಕ್ಕೂಹೆಚ್ಚು
ಕಡತಗಳು ಬಾಕಿ
ಸರ್ವೇ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ರೈತರ ಅದ್ದುಬಸ್ತು, ಭೂ ಅಳತೆ, ಪೋಡಿ ಮತ್ತಿತರ ಕಾರಣಗಳಿಗೆ ರೈತರು ಸಲ್ಲಿಸಿರುವ ತತ್ಕಾಲ್ ಅಜಿಗಳೇ ೨೪೫೮ ಬಾಕಿ ಇದೆ, ಎಲಿನೇಷನ್‌ಗಾಗಿ ಬಂದಿರುವ ೧೩೯ ಅರ್ಜಿ ಬಾಕಿ ಇದೆ, ಹದ್ದುಬಸ್ತಿಗಾಗಿ ಬಂದಿರುವ ಸುಮಾರು ೨೧೪೯ ಅರ್ಜಿಗಳು ಬಾಕಿ ಉಳಿದಿದ್ದು, ಇಸ್ವತ್ತು ಸಂಬಂಧ ೬೫೮ ಅರ್ಜಿಗಳು ಸೇರಿದಂತೆ ೧೦ ಸಾವಿರಕ್ಕೂ ಅರ್ಜಿಗಳು ವಿವಿಧ ಹಂತಗಳಲ್ಲಿ ಬಾಕಿ ಉಳಿದಿದ್ದು, ಜೇಷ್ಟತೆ ಆಧಾರದಲ್ಲಿ ರೈತರ ಭೂಮಿ ಸರ್ವೇಗೆ ಸುಮಾರು ೨ ವರ್ಷವೇ ಕಾಯಬೇಕಾದ ಸ್ಥಿತಿ ಇದೆ.
ಸರ್ಕಾರಿ ಭೂಮಾಪಕರಿಗೆ ಕೆರೆ,ಸ್ಮಶಾನ, ಮುಜರಾಯಿ ಜಮೀನು, ವಕ್ ಆಸ್ತಿಯ ಸರ್ವೇ ನಡೆಸಲು ಸಮಯ ಸಾಕಾಗುತ್ತಿಲ್ಲ, ಇಂತಹ ಸಂದರ್ಭದಲ್ಲಿ ಇರುವ ಒಬ್ಬಿಬ್ಬರು ಸಿಬ್ಬಂದಿಯನ್ನು ಇತರೆ ಜಿಲ್ಲೆಗಳಿಗೆ ವರ್ಗಾವಣೆ ಮಾಡುವ ಹುನ್ನಾರ ನಿಜಕ್ಕೂ ರೈತ,ಜನವಿರೋಧಿಯಾಗಿದೆ.
ಜಿಲ್ಲಾಧಿಕಾರಿಗಳಿಗೆ ಇರುವ ಕಾಳಜಿ ನಮ್ಮ ಜನಪ್ರತಿನಿಧಿಗಳಿಗೆ ಇಲ್ಲದೇ ಹೋಗಿರುವುದು ಮಾತ್ರ ದುರಂತವೇ ಸರಿ.