10 ಸಾವಿರ‌ ರೂ ಕೋವಿಡ್ ರಿಸ್ಕ್ ಪ್ರೋತ್ಸಾಹಧನ 6 ತಿಂಗಳು ವಿಸ್ತರಣೆ

ಬೆಂಗಳೂರು, ಮೇ.27- ಕೊರೊನಾ ಯೋಧರಿಗೆ ನೀಡುತ್ತಿರುವ ಪ್ರೋತ್ಸಾಹ ಧನವನ್ನು ಏಪ್ರಿಲ್ 1ರಿಂದ ಅನ್ವಯವಾಗಿವಂತೆ 6 ತಿಂಗಳವರೆಗೆ ವಿಸ್ತರಿಸಲಾಗಿದೆ.

ಆರೋಗ್ಯ ಇಲಾಖೆ ಹಾಗೂ ಎನ್ಎಚ್ಎಂ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು, ತಜ್ಞರು, ಶುಶ್ರೂಷಕರು, ಪ್ರಯೋಗಶಾಲಾ ತಂತ್ರಜ್ಞರು, ಫಾರ್ಮಾಸಿಸ್ಟ್ ಗಳು ಹಾಗೂ ಡಿ-ಗ್ರೂಪ್ ನೌಕರರಿಗೆ ವಿಶೇಷ ಭತ್ಯೆ ನೀಡಲಾಗುವುದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ತಿಳಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು,ಕೋವಿಡ್ ಹೆಲ್ತ್ ಸೆಂಟರ್,ಕೋವಿಡ್ ಆಸ್ಪತ್ರೆ, ಮತ್ತು ಕೋವಿಡ್ ಕೇರ್ ಸೆಂಟರ್ ನಲ್ಲಿ ಪಿಪಿಇ ಕಿಟ್ ಧರಿಸಿ ಕರ್ತವ್ಯ ನಿರ್ವಹಿಸುವ ಗ್ರೂಪ್ ಡಿ ನೌಕರಿಗೆ 10 ಸಾವಿರ ಕೋವಿಡ್ ರಿಸ್ಕ್ ಪ್ರೊತ್ಸಾಹ ಧನವನ್ನು 6 ತಿಂಗಳು ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.

ಗುತ್ತಿಗೆ ಹಾಗೂ ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡಿರುವ ವೈದ್ಯರಿಗೆ 10000 ರೂಪಾಯಿ, ಶುಶ್ರೂಷಕರು ಮತ್ತು ಪ್ರಯೋಗಶಾಲಾ ತಂತ್ರಜ್ಞರಿಗೆ ತಲಾ 5000 ರೂಪಾಯಿ, ಪಿಪಿಇ ಕಿಟ್ ದರಿಸದೆ ಆಸ್ಪತ್ರೆ ಹೊರಗಡೆ ಕೆಲಸ ಮಾಡುವ ಡಿ-ಗ್ರೂಪ್ ಸಿಬ್ಬಂದಿಗೆ 3000 ರೂಪಾಯಿ ಮುಂದುವರೆಸಲಾಗುವುದು ಎಂದು ತಿಳಿಸಿದ್ದಾರೆ.

ಸ್ಟಾಪ್ ನರ್ಸ್ ಗಳಿಗೆ 8000 ಹೆಸರು ವಿಶೇಷ ಮತ್ತೆ ನೀಡಲು ಕೂಡ ನಿರ್ಧರಿಸಲಾಗಿದೆ ಎಂದು ಹೇಳಿರುವ ಅವರು ಇದರಿಂದ ಸಂಕಷ್ಟದ ಸಮಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು ವೈದ್ಯಕೀಯ ಸಿಬ್ಬಂದಿ ಧೈರ್ಯ ತುಂಬುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.

82.33 ಕೋಟಿ ರೂಪಾಯಿ:

ಕೋವಿಡ್ ರಿಸ್ಕ್ ಪ್ರೋತ್ಸಾಹ ಧನ ನೀಡಲು ರಾಜ್ಯ ಸರ್ಕಾರ 82.33 ಕೋಟಿ ನೀಡಲು ಒಪ್ಪಿಗೆ ನೀಡಿದೆ ಎಂದು ಅವರು ತಿಳಿಸಿದ್ದಾರೆ.