10 ರೂಪಾಯಿಯ ನಾಣ್ಯದ ಚಲಾವಣೆಗೆ ಯಾವುದೇ ಸಮಸ್ಯೆಯಿಲ್ಲ…

ದಾವಣಗೆರೆ. ಮಾ.೯; ಹತ್ತು ರೂಪಾಯಿ ನಾಣ್ಯ ಸೇರಿದಂತೆ ಯಾವುದೇ ನಾಣ್ಯಗಳ ಚಲಾವಣೆಗೆ ಯಾವುದೇ ಸಮಸ್ಯೆಯಿಲ್ಲ. ಸಾರ್ವಜನಿಕರು ನಿರ್ಭೀತರಾಗಿ ನಾಣ್ಯಗಳ ಚಲಾವಣೆ ಮಾಡಬಹುದೆಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪ್ರಬಂಧಕ ಮೋನಿ ರಾಜ ಬ್ರಹ್ಮ ತಿಳಿಸಿದರು. ಅವರು ತೋಳಹುಣಸೆಯ ಕೆನರಾ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಕೇಂದ್ರದಲ್ಲಿ ದಾವಣಗೆರೆ ಲೀಡ್ ಬ್ಯಾಂಕ್ ಕಛೇರಿ ಹಾಗೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಜಂಟಿಯಾಗಿ ಆಯೋಜಿಸಿದ್ದ “ಕರೆನ್ಸಿ ಸಪ್ತಾಹ” ವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ನಕಲಿ ನಾಣ್ಯಗಳು ಮಾರುಕಟ್ಟೆಯಲ್ಲಿ ಚಲಾವಣೆಯಾಗುತ್ತಿದೆ ಎಂಬ ಸುಳ್ಳು ಸುದ್ದಿಯಿಂದಾಗಿ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ನಾಣ್ಯಗಳ ಚಲಾವಣೆಗೆ ಹಿಂದೇಟು ಹಾಕುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಆದರೆ ಜನರು ಯಾವುದೇ ಗೊಂದಲವಿಲ್ಲದೇ ಎಲ್ಲಾ ರೀತಿಯ ನಾಣ್ಯಗಳನ್ನು ಚಲಾವಣೆ ಮಾಡಬಹುದೆಂದು ಅವರು ತಿಳಿಸಿದರು. ಹಾಗೆಯೇ ಹರಿದ ಹಾಗೂ ಚಲಾವಣೆಗೆ ಯೋಗ್ಯವಲ್ಲದ ಹಳೆಯ ನೋಟುಗಳನ್ನು ಸಾರ್ವಜನಿಕರು ಯಾವುದೇ ಬ್ಯಾಂಕಿನಲ್ಲಿ ಬದಲಾವಣೆ ಅಥವಾ ತಮ್ಮ ಖಾತೆಗೆ ಜಮಾ ಮಾಡಬಹುದಾಗಿದೆ. ಯಾವುದೇ ಬ್ಯಾಂಕಿನ ಸಿಬ್ಬಂದಿ ನಿರಾಕರಿಸುವಂತಿಲ್ಲ ಎಂದು ತಿಳಿಸಿದರು.ಲೀಡ್ ಬ್ಯಾಂಕ್ ವಿಭಾಗೀಯ ವ್ಯವಸ್ಥಾಪಕಿ ಹೆಚ್.ರವಿಕಲಾ ಮಾತನಾಡಿ ನೋಟುಗಳು ಹಾಗೂ ನಾಣ್ಯಗಳ ವ್ಯವಹಾರದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲೋಸುಗ ಈ “ಕರೆನ್ಸಿ ಸಪ್ತಾಹ” ವನ್ನು ಮಾರ್ಚ್ 06 ರಿಂದ ಮಾರ್ಚ್ 10 ರವರೆಗೆ ದೇಶದಾದ್ಯಂತ ಆಯೋಜಿಸಲಾಗುತ್ತಿದೆ. ನಾಣ್ಯಗಳನ್ನು ಸ್ವೀಕರಿಸಲು ವ್ಯಾಪಾರಸ್ಥರು, ಸಾರ್ವಜನಿಕರು ಸೇರಿದಂತೆ ಯಾರೂ ಸಹ ನಿರಾಕರಿಸುವುದು ಅಪರಾಧವಾಗುತ್ತದೆ ಎಂದರು.ಕಾರ್ಯಕ್ರಮದಲ್ಲಿ ಲೀಡ್ ಬ್ಯಾಂಕ್ ಸಿಬ್ಬಂದಿಗಳಾದ ಸುಧೀರ್ ರೆಡ್ಡಿ, ಪಿ.ಮೂರ್ತಿ ನಾಯ್ಕ್, ಕೆ.ರಾಘವೇಂದ್ರ ನಾಯರಿ, ಕೆನರಾ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕ ಗಣೇಶ್ ರಾವ್, ಸಾರ್ವಜನಿಕರು, ಸ್ವ ಸಹಾಯ ಸಂಘದ ಸದಸ್ಯೆಯರು,  ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.