ಸಂಜೆವಾಣಿ ನ್ಯೂಸ್
ಮೈಸೂರು: ಜು.21:- ರಾಜ್ಯದ ಸಮಸ್ಯೆಗಳನ್ನು ವಿಧಾನಸಭೆಯಲ್ಲಿ ಚರ್ಚಿಸುವ ಬದಲು ಸರ್ಕಾರದ ಗ್ಯಾರಂಟಿಯನ್ನು ಸಹಿಸಲಾಗದೇ ಸ್ವೀಕರ್ ಮುಂದೆ ಗಲಾಟೆ ಮಾಡಿದ ಬಿಜೆಪಿಯ 10 ಶಾಸಕರನ್ನು ಶಾಶ್ವತವಾಗಿ ಸದನದಿಂದ ಅಮಾನತು ಮಾಡಿ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಒತ್ತಾಯಿಸಿದರು.
ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಪ್ರಚಾರ ಸಿಗಬಾರದೆಂದು ಗಲಾಟೆ ಮಾಡಿದ್ದಾರೆ. ಬಿಜೆಪಿಯವರು ಏನೇ ಮಾಡಿದರೂ ಜನರು ಅವರನ್ನು ನಂಬುವುದಿಲ್ಲ. ಜನರಿಗೂ ಇವರ ನಾಟಕ ಗೊತ್ತಾಗಿದೆ ಎಂದು ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಲೇವಡಿ ಮಾಡಿದರು.
ಎಚ್.ಡಿ.ಕುಮಾರಸ್ವಾಮಿ ಹತಾಶರಾಗಿ ಬಟ್ಟೆ ಬಿಚ್ಚಿಕೊಂಡು ಹೋರಾಡುತ್ತಿದ್ದಾರೆ. ಜೆಡಿಎಸ್ ಪಕ್ಷ ಕೆಲವೇ ದಿನಗಳಲ್ಲಿ ಮೂರು ಹೋಳಾಗುತ್ತದೆ. ಜೆಡಿಎಸ್ ನ 9 ಶಾಸಕರು ಕಾಂಗ್ರೆಸ್ ಬಾಗಿಲು ತಟ್ಟುತ್ತಿದ್ದಾರೆ. ಯಾವುದೇ ಅಧಿಕಾರದ ಆಸೆ ಇಲ್ಲದೆ ಕಾಂಗ್ರೆಸ್ ಗೆ ಬರಲು ತಯಾರಾಗಿದ್ದಾರೆ. ಜೆಡಿಎಸ್ ಮುಗಿದ ಅಧ್ಯಾಯ, ಕುಮಾರಸ್ವಾಮಿ ಇದರ ಬಗ್ಗೆ ಯೋಚಿಸಲಿ. ಯುಪಿಎ – ಎನ್ ಡಿಎ ಒಕ್ಕೂಟ ಇಬ್ಬರು ಜೆಡಿಎಸ್ ಕ್ಯಾರೆ ಎನ್ನುತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಮೈಸೂರು – ಬೆಂಗಳೂರು ಹೆದ್ದಾರಿಗೆ ಪ್ರತಾಪ್ ಸಿಂಹ ಹೋದರೆ ಜನ ಹೊಡೆಯುತ್ತಾರೆ. ಅವೈಜ್ಞಾನಿಕ ರಸ್ತೆ, ದುಬಾರಿ ಟೋಲ್ ಶುಲ್ಕದಿಂದ ವಾಹನ ಸವಾರರು ರೊಚ್ಚಿಗೇಳುತ್ತಿದ್ದಾರೆ. ಪ್ರತಾಪಸಿಂಹ ಅವರು ಕಾಂಗ್ರೆಸ್ ಪಕ್ಷವನ್ನು ಬೈಯುವ ಕೆಲಸ ಬಿಟ್ಟರೆ, ಯಾವ ಅಭಿವೃದ್ಧಿ ಕೆಲಸ ಮಾಡಿಲ್ಲ. ಸಂಸದರಾಗಿ ಮೈಸೂರು-ಕೊಡುಗೆ ಜಿಲ್ಲೆಗೆ ನಿಮ್ಮ ಕೊಡುಗೆ ಏನು ಎಂದು ಜನರ ಮುಂದೆ ತೋರಿಸಿ ಎಂದು ಕಿಡಿಕಾರಿದರು.
ಪ್ರತಿಪಕ್ಷ ನಾಯಕ ಸ್ಥಾನ ಸಿಗಲಿಲ್ಲ ಎಂದು ಪ್ರತಿಭಟನೆ ವೇಳೆಯಲ್ಲಿ ಬಸವನಗೌಡ ಪಾಟೀಲ್ ಯತ್ನಾಳ್ ಕುಸಿದು ಬಿದ್ದಿದ್ದಾರೆ. ಯತ್ನಾಳ್ ಅವರನ್ನು ನೋಡಲು ಸಿಎಂ ಸಿದ್ದರಾಮಯ್ಯ ಸಮೇತ ಎಲ್ಲರೂ ಹೋಗಿದ್ದಾರೆ. ಇನ್ನೂ 3 ದಿನ ಬರೀ ಇವರನ್ನು ನೋಡುವುದೇ ನಡೆಯುತ್ತದೆ ಎಂದು ಲೇವಡಿ ಮಾಡಿದರು. ಶಂಕಿತ ಭಯೋತ್ಪಾದಕರನ್ನು ಬಂಧಿಸಿದಕ್ಕೆ ಬೆಂಗಳೂರು ನಗರ ಪೆÇಲೀಸ್ ಕಮಿಷನರ್ ಗೆ ಅಭಿನಂದನೆ ಸಲ್ಲಿಸುತ್ತೇನೆ. ಬಂಧಿತರು ರೌಡಿಶೀಟರ್‍ಗಳಾಗಿದ್ದವರು. ಬಿಜೆಪಿ ಅವಧಿಯಲ್ಲಿ ಹೆಚ್ಚು ರೌಡಿಶೀಟರ್ ಗಳ ಹೆಸರು ಕೈ ಬಿಡಲಾಗಿತ್ತು. ಯಾವ ಕಾರಣಕ್ಕೆ ಹೆಸರು ಕೈ ಬಿಡಲಾಗಿತ್ತು? ಎಂಬುವುದು ಬಿಜೆಪಿಯವರಿಗೆ ಗೊತ್ತು ಎಂದು ಹೇಳಿದರು.
ಕೇಂದ್ರದ ಕೆಲಸ ಮಾಡಿ
ಮೈಸೂರು- ಕುಶಾಲನಗರ ರಸ್ತೆ ನಿರ್ಮಾಣ ಡಿಪಿಆರ್ ಸಹ ಆಗಿಲ್ಲ. ಹೀಗಿರುವಾಗ 2024 ಕ್ಕೆ ಮುಗಿಯಲಿದೆ ಎನ್ನುವ ಪ್ರಚಾರ ಪಡೆಯುತ್ತಿದ್ದಾರೆ. ಇನ್ನೂ ವಿಮಾನ ನಿಲ್ದಾಣದ ರನ್ ವೇ ವಿಸ್ತೀರ್ಣ ದ ಕಥೆಯೂ ನಿಂತಲ್ಲೇ ನಿಂತಿದೆ. ಒಂದಿಬ್ಬರೂ ಅಧಿಕಾರಿಗಳನ್ನು ಕರೆದೊಯ್ದು ಏಜೆನ್ಸಿಯವರೊಂದಿಗೆ ವಸ್ತು ಪ್ರದರ್ಶನದಲ್ಲಿ ಸಭೆ ನಡೆಸಿದ್ದಿರಿ. ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವ ವಸ್ತು ಪ್ರದರ್ಶನದಲ್ಲಿ ನಿಮಗೇನೂ ಕೆಲಸ? ಕೇಂದ್ರದ ವ್ಯಾಪ್ತಿಗೆ ಬರುವ ಅಭಿವೃದ್ಧಿ ಕೆಲಸಗಳ ಕುರಿತು ಚರ್ಚೆ ಮಾಡಿ ಎಂದು ಲಕ್ಷ್ಮಣ್ ಸಲಹೆ
ನೀಡಿದರು.
ಕೇಂದ್ರ ಬಿಜೆಪಿಗೆ ಸೋಲಿನ ಹತಾಶೆ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ದೆಹಲಿಯಲ್ಲಿ ಕರೆದಿದ್ದ 36 ಮಿತ್ರ ಪಕ್ಷಗಳ ಪೈಕಿ ಅಧಿಕೃತ ರಾಷ್ಟ್ರೀಯ ಪಕ್ಷಗಳೇ ಇಲ್ಲ. ಒಬ್ಬ ಮುಖ್ಯಮಂತ್ರಿ, ಒಬ್ಬ ಎಂಎಲ್ ಎ ಸಹ ಇಲ್ಲದೆ ರಾಜ್ಯಕ್ಕೂ ಸೀಮಿತವಾಗಿರದ ಪಕ್ಷಗಳನ್ನು ಕರೆದು ಸಭೆ ನಡೆಸಿರುವುದು ನೋಡಿದರೆ ಬಿಜೆಪಿಗೆ ಸೋಲಿನ ಹತಾಶೆ ಶುರುವಾಗಿದೆ. ನಮ್ಮ ಮೈತ್ರಿಕೂಟದ ಸಭೆಗೆ ಅಧಿಕೃತ 26 ರಲ್ಲಿ 16ರಾಷ್ಟ್ರೀಯ ಪಕ್ಷಗಳಿದ್ದವು. ಈ ಪೈಕಿ 7 ಕ್ಕೂ ಹೆಚ್ಚು ಮುಖ್ಯಮಂತ್ರಿಗಳೂ ಪಾಲ್ಗೊಂಡಿದ್ದರು. ಇದು ದೇಶದೆಲ್ಲೆಡೆ ಆಡಳಿತವಿರೋಧಿ ಅಲೆಯಾಗಿದೆ. ಇದು ಬಿಜೆಪಿಗರ ನಿದ್ದೆ ಕೆಡಿಸಿದೆ ಎಂದು ಲಕ್ಷ್ಮಣ್ ಹೇಳಿದರು.
ಗೋಷ್ಠಿಯಲ್ಲಿ ನಗರಾಧ್ಯಕ್ಷ ಆರ್.ಮೂರ್ತಿ, ಗ್ರಾಮಾಂತರ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಪ್ರಧಾನ ಕಾರ್ಯದರ್ಶಿ ಎಂ. ಶಿವಣ್ಣ , ಜಿಪಂ ಮಾಜಿ ಅಧ್ಯಕ್ಷ ಬಿ.ಎಂ.ರಾಮು, ಕಾರ್ಯದರ್ಶಿ ಈಶ್ವರ್ ಚಕ್ಕಡಿ, ಮಾಧ್ಯಮ ವಕ್ತಾರ ಕೆ.ಮಹೇಶ್, ದ್ಯಾವಪ್ಪ ನಾಯಕ ಮತ್ತಿತರರು ಇದ್ದರು.