10 ಫಲಾನುಭವಿಗಳಿಗೆ ಶೂನ್ಯ ಬಿಲ್ ನೀಡಿದ ಸಿಎಂ ಗೃಹಜ್ಯೋತಿ ಯೋಜನೆಗೆ ಸಿಎಂ ಸಿದ್ದು ಚಾಲನೆ

ಕಲಬುರಗಿ,ಆ 5: ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಪೈಕಿ ಒಂದಾಗಿರುವ ಗೃಹಜ್ಯೋತಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಲ್ಲಿನ ಎನ್.ವಿ.ಮೈದಾನದಲ್ಲಿ ಬೃಹತ್ ಜನಸಾಗರದ ಮಧ್ಯೆ ಚಾಲನೆ ನೀಡಿದರು.
ವೇದಿಕೆಯ ಮೇಲೆ ಪ್ರತಿಕೃತಿಯಾಗಿ ವ್ಯವಸ್ಥೆ ಮಾಡಿದ್ದ ಮನೆಯೊಂದರ ವಿದ್ಯುತ್ ಬಲ್ಬ್ ಹೊತ್ತಿಸುವ ಮೂಲಕ ಸಿಎಂ ಸಿದ್ದರಾಮಯ್ಯ ಅವರು ಯೋಜನೆಗೆ ಚಾಲನೆ ನೀಡಿದ ಬಳಿಕ 10 ಫಲಾನುಭವಿಗಳಿಗೆ ಔಪಚಾರಿಕವಾಗಿ ಶೂನ್ಯ ಬಿಲ್ ರಸೀದಿ ವಿತರಿಸಿ ಮಾತನಾಡುತ್ತಾ, ನಾವು ನುಡಿದಂತೆ ನಡೆದಿದ್ದೇವೆ ಎಂದರು.
ಇದೇ ವೇಳೆ ಬಿಜೆಪಿ ವಿರುದ್ಧ ಕಿಡಿಕಾರಿದ ಸಿಎಂ, ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತೇವೋ ಇಲ್ಲವೋ ಎಂಬ ಚಿಂತೆ ಬಿಜೆಪಿ ನಾಯಕರಿಗೆ ಕಾಡುತ್ತಿತ್ತು. ಆದರೆ, ನಾವು ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಈಗಾಗಲೇ ಶಕ್ತಿ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದಿದ್ದೇವೆ. ಇದೇ ಆಗಸ್ಟ್ 18ರಂದು ಮತ್ತೊಂದು ಮಹತ್ವಾಕಾಂಕ್ಷಿ ಯೋಜನೆ ಎಂದೇ ಬಿಂಬಿಸಲಾಗುತ್ತಿರುವ ಗೃಹಲಕ್ಷ್ಮಿ ಯೋಜನೆ ಸಹ ಅನುಷ್ಠಾನಕ್ಕೆ ಬರಲಿದೆ. ಇದೇ ರೀತಿಯಲ್ಲಿ ಅನ್ನಭಾಗ್ಯ ಯೊಜನೆಯಡಿ ಬಡ ಕುಟುಂಬದ ಪ್ರತಿ ವ್ಯಕ್ತಿಗೆ ಐದು ಕಿಲೋಗ್ರಾಂ ಅಕ್ಕಿ ಹಾಗೂ ಉಳಿದ ಐದು ಕಿ.ಗ್ರಾಂ ಅಕ್ಕಿಯ ಮೌಲ್ಯಕ್ಕೆ ತಕ್ಕಂತೆ ಫಲಾನುಭವಿಗಳ ಖಾತೆಗೆ ಹಣ ಸಂದಾಯ ಮಾಡಲಾಗುತ್ತಿದೆ. ಯುವ ನಿಧಿ ಯೋಜನೆ ಕೂಡ ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರುವುದರಲ್ಲಿ ಯಾವುದೇ ಅನುಮಾನ ಬೇಡ ಎಂದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗಕ್ಕೆ ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ 371(ಜೆ) ನೀಡುವ ಈ ಭಾಗದ ಜನರ ಮನೆಗಳಲ್ಲಿ ಜ್ಯೋತಿ ಬೆಳಗಿದ್ದಾರೆ. ಇದೇ ನಿಟ್ಟಿನಲ್ಲಿ ಪ್ರಸ್ತುತ ರಾಜ್ಯ ಸರಕಾರವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಜನರ ಆಶೋತ್ತರಗಳನ್ನು ಈಡೇರಿಸಲು ಐದು ಗ್ಯಾರಂಟಿಗಳನ್ನು ಪ್ರಾಮಾಣಿಕವಾಗಿ ಅನುಷ್ಠಾನಕ್ಕೆ ತರುತ್ತಿದೆ ಎಂದು ನುಡಿದರು.
ನಮ್ಮ ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯವಾಡಿದ್ದಾರೆ. ಆದರೆ ನಮ್ಮ ಶಕ್ತಿ ಯೋಜನೆಯಿಂದ ಕೋಟ್ಯಂತರ ಮಹಿಳೆಯರು ರಾಜ್ಯದ ದೇವಾಲಯಗಳ ದರ್ಶನ ಪಡೆದು ಶಕ್ತಿ ಪಡೆಯುತ್ತಿದ್ದಾರೆ. ಮತ್ತೊಂದೆಡೆ, ಕಾಪೆರ್Çರೇಟ್ ಸಂಸ್ಥೆಗಳ ಸಾವಿರಾರು ಕೋಟಿ ಸಾಲ ಮನ್ನಾ ಮಾಡಿರುವ ಪ್ರಧಾನಿ ಮೋದಿ, ಕರ್ನಾಟಕದ ಜನರಿಗೆ ಅಕ್ಕಿ ನೀಡಲು ಮುಂದಾಗಲಿಲ್ಲ ಎಂದು ಟೀಕಿಸಿದರು.
ಕಾಂಗ್ರೆಸ್ ಮತ್ತು ಜನರ ಮಧ್ಯೆ ದೇವರು ಹಾಗೂ ಭಕ್ತರ ಸಂಬಂಧವಿದೆ ಎಂದು ಡಿಕೆಶಿ ವ್ಯಾಖ್ಯಾನಿಸಿದರು.
ಇದಕ್ಕೂ ಮುಂಚೆ ದಿಕ್ಸೂಚಿ ಭಾಷಣ ಮಾಡಿದ ಇಂಧನ ಸಚಿವ ಕೆ.ಜೆ.ಜಾರ್ಜ್ ಮಾತನಾಡುತ್ತಾ, ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರು ಕರ್ನಾಟಕ ಸೇರಿದಂತೆ ದೇಶದ ಉದ್ದಗಲಕ್ಕೂ ನಡೆಸಿದ ಭಾರತ್ ಜೋಡೊ ಯಾತ್ರೆ ವೇಳೆ ದೇಶದ ಬಡವರು ಮತ್ತು ಮಧ್ಯಮ ವರ್ಗದವರ ಜೊತೆ ಚರ್ಚಿಸಿದಾಗ ಕೇಂದ್ರ ಸರಕಾರದ ತಪ್ಪು ಆರ್ಥಿಕ ನೀತಿಗಳಿಂದಾಗಿ ಜನರು ಎದುರಿಸುತ್ತಿರುವ ಆರ್ಥಿಕ ಸಂಕಷ್ಟ ಗಮನಿಸಿ ಐದು ಗ್ಯಾರಂಟಿ ಯೋಜನೆಗಳನ್ನು ರಾಜ್ಯದ ಜನರಿಗೆ ಒದಗಿಸುವ ಭರವಸೆ ನೀಡಿದ್ದರು. ಇದೀಗ ರಾಹುಲ್ ಅವರ ಒಂದೊಂದೇ ಸಲಹೆ ಜಾರಿಗೊಳಿಸುವ ಕೆಲಸವನ್ನು ರಾಜ್ಯ ಸರಕಾರ ಮಾಡುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಸ್ವಾಗತಿಸಿದರು. ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದರು. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್, ಐಟಿ-ಬಿಟಿ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಅರಣ್ಯ ಖಾತೆ ಸಚಿವ ಈಶ್ವರ ಖಂಡ್ರೆ, ಸಚಿವರಾದ ರಹೀಂಖಾನ್, ಶರಣಬಸಪ್ಪ ದರ್ಶನಾಪುರ, ಎಂ.ವೈ.ಪಾಟೀಲ್, ಕನೀಜ್ ಫಾತಿಮಾ, ವೆಂಕಟಪ್ಪ ನಾಯಕ, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶರಣಕುಮಾರ್ ಮೋದಿ, ಮುಖ್ಯಮಂತ್ರಿಗಳ ರಾಷ್ಟ್ರೀಯ ಕಾರ್ಯದರ್ಶಿ ಗೋವಿಂದರಾಜು, ಕಾಂಗ್ರೆಸ್ ಪಕ್ಷದ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಹಾಗೂ ಪಕ್ಷದ ವಕ್ತಾರೆ ಪುಷ್ಪಾ ಅಮರನಾಥ,
ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಇಂಧನ ಇಲಾಖೆಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಕರ್ನಾಟಕ ವಿದ್ಯುಚ್ಛಕ್ತಿ ನಿಗಮದ ಪ್ರಭಾರ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಬೀಳಗಿ, ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮೊಹ್ಮದ್ ರೋಷನ್, ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್.ಶ್ರೀಧರ್ ಹಾಗೂ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಪದ್ಮಾವತಿ ಡಿ., ಕಲಬುರಗಿ ಜಿಪಂ. ಸಿಇಒ ಭವರ್ ಸಿಂಗ್ ಮೀನಾ, ಮಹಾನಗರ ಪಾಲಿಕೆ ಆಯುಕ್ತ ಪಾಟೀಲ್ ಭುವನೇಶ್ ದೇವಿದಾಸ್, ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಪಾಂಡ್ವೆ, ಕೆ.ಕೆ.ಆರ್.ಡಿ.ಬಿ ಕಾರ್ಯದರ್ಶಿ ಅನಿರುದ್ಧ ಶ್ರವಣ್, ಪೆÇಲೀಸ್ ಕಮಿಷನರ್ ಆರ್.ಚೇತನ್, ಎಸ್ಪಿ ಇಶಾಪಂತ್ ಹಾಗೂ ಇತರರು ಉಪಸ್ಥಿತರಿದ್ದರು.


ಜನಸಾಗರಕ್ಕೆ ಊಟದ ವ್ಯವಸ್ಥೆ

ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಗೃಹಜ್ಯೋತಿ ಯೋಜನೆಯ ಚಾಲನಾ ಸಮಾವೇಶದಲ್ಲಿ ಸುಮಾರು 10 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಜನರನ್ನು ಕರೆ ತರಲು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವತಿಯಿಂದ ಬಸ್ ವ್ಯವಸ್ಥೆ ಮಾಡಲಾಗಿತ್ತು. ಸಮಾವೇಶದಲ್ಲಿ ಪಾಲ್ಗೊಂಡಿದ್ದ ಬೃಹತ್ ಜನಸಾಗರಕ್ಕೆ ಭರ್ಜರಿ ಊಟದ ವ್ಯವಸ್ಥೆ ಸಹ ಮಾಡಲಾಗಿತ್ತು.

ಗ್ರಾಪಂ.ಗಳಿಗೆ ಸ್ಪರ್ಧಾತ್ಮಕ ಪುಸ್ತಕಗಳ ವಿತರಣೆ
ಕಲಬುರಗಿ ಜಿಲ್ಲೆಯ ಎಲ್ಲ 261 ಗ್ರಾಮ ಪಂಚಾಯತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಾಲಯಗಳಿಗೆ ಯುಪಿಎಸ್ಸಿ ಮತ್ತು ಕೆಪಿಎಸ್ಸಿ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪುಸ್ತಕಗಳನ್ನು ಖರೀದಿಸಲು ಪೂರಕವಾಗಿ ಸಿ.ಎಸ್.ಆರ್ ಅನುದಾನದ ಅಡಿಯಲ್ಲಿ ಜಿಪಂ.ಗೆ 26 ಲಕ್ಷ ರೂ.ಗಳ ಚೆಕ್ ವಿತರಿಸಲಾಯಿತು. ಜಿಪಂ ಸಿಇಒ ಭವರ್ ಸಿಂಗ್ ಮೀನಾ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚೆಕ್ ಹಸ್ತಾಂತರಿಸಿದರು. ಪ್ರತಿ ಗ್ರಾಪಂ.ನಲ್ಲಿ ಒಟ್ಟು 41 ಸ್ಪರ್ಧಾತ್ಮಕ ಪುಸ್ತಕಗಳನ್ನು ಓದುಗರಿಗೆ ಒದಗಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರ ಒತ್ತಾಸೆಯ ಮೇರೆಗೆ ಈ ಪುಸ್ತಕಗಳನ್ನು ಒದಗಿಸಲಾಗುತ್ತಿದೆ.