10 ದಿನದೊಳಗೆ ರಸ್ತೆ ಗುಂಡಿ ಮುಚ್ಚಲು ಕ್ರಮ:ಗೌರವ್ ಗುಪ್ತ

ಬೆಂಗಳೂರು, ಡಿ.28- ಬಿಬಿಎಂಪಿ ವ್ಯಾಪ್ತಿಯ ರಸ್ತೆಗಳಲ್ಲಿನ ಗುಂಡಿಗಳನ್ನು 10 ದಿನದೊಳಗೆ ಮುಚ್ಚಲು ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಆಡಳಿತಾಧಿಕಾರಿ ಗೌರವ್ ಗುಪ್ತ ಹೇಳಿದರು.

ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯ ಸಭಾಂಗಣದಲ್ಲಿ ಮೂಲಭೂತ ಸೌಕರ್ಯವಿಭಾಗದಿಂದ ರಸ್ತೆ ಗುಂಡಿ, ಬೀದಿ ದೀಪ ಅಳವಡಿಗೆ, ಯಾಂತ್ರಿಕ ಕಸ ಗುಡಿಸುವ ಯಂತ್ರ ಹಾಗೂ ವಾರ್ಷಿಕ ರಸ್ತೆ ನಿರ್ವಹಣೆ ಕುರಿತ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ ಪ್ರಗತಿಯಲ್ಲಿದ್ದು, ಈಗಾಗಲೇ ಬಹುತೇಕ ಕಡೆ ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ. ಆದರೆ, ಅದಕ್ಕೆ ಇನ್ನೂ ವೇಗ ನೀಡಿ ಗುಣಮಟ್ಟ ಮತ್ತು ಪ್ರಮಾಣ ಸರಿಯಾಗಿರುವಂತೆ ನೋಡಿಕೊಂಡು ನಿಗದಿತ ಸಮಯಲ್ಲಿ ಗುಂಡಿಗಳನ್ನು ಮುಚ್ಚಲು ಕ್ರಮವಹಿಸಬೇಕು.

ಈ ಸಂಬಂಧ ನಾಳೆಯಿಂದಲೇ ಡಾಂಬರು ಮಿಶ್ರಣ ಘಟಕ(ಹಟ್ ಮಿಕ್ಸ್ ಪ್ಲಾಂಟ್)ದಿಂದ ಎಲ್ಲಾ 8 ವಲಯಗಳಿಗೂ ಪ್ರತಿ ನಿತ್ಯ ಎರಡೆರಡು ಲೋಡ್‌ಗಳು ಕಳುಹಿಸಿ 10 ದಿನಗಳೊಳಗಾಗಿ ಉಳಿದೆಲ್ಲಾ ಗುಂಡಿಗಳನ್ನು ಮುಚ್ಚಬೇಕು ಎಂದು ಆಯಾ ವಲಯ ಮುಖ್ಯ ಅಭಿಯಂತರರುಗಳಿಗೆ ಸೂಚನೆ ನೀಡಿದರು.

ಬೀದಿ ದೀಪಗಳ:ಬೀದಿ ದೀಪಗಳ ನಿರ್ವಹಣೆ ಕಾರ್ಯವು ಅಪೇಕ್ಷಿತ ಮಟ್ಟದಲ್ಲಿ ನಿರ್ವಹಿಸುತ್ತಿಲ್ಲವಾದ್ದರಿಂದ, ಟೆಂಡರ್ ಪ್ರಕ್ರಿಯೆಗೆ ವೇಗೆ ನೀಡಿ ಬೀದಿ ದೀಪಗಳ ನಿರ್ವಹಣೆಗೆ ತ್ವರಿತವಾಗಿ ಕಾರ್ಯಾದೇಶ ನೀಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜೊತೆಗೆ ಬೀದಿ ದೀಪ ಅಳವಡಿಸುವ ಸಂಬಂಧ ಆಯಾ ವಲಯ ಮುಖ್ಯ ಅಭಿಯಂತರರುಗಳು ಆ ಬಗ್ಗೆ ಹೆಚ್ಚು ಗಮನವರಿಸಬೇಕು ಎಂದು ಹೇಳಿದರು.

ಇನ್ನು, ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆಗಳ ಸಮರ್ಪಕ ನಿರ್ವಹಣೆಗಾಗಿ ಈಗಾಗಲೇ ಟೆಂಡರ್ ಆಹ್ವಾನಿಸಿದ್ದು, ಟೆಂಡರ್ ಪ್ರಕ್ರಿಯೆಯನ್ನು ತ್ವರಿತಗೊಳಿಸಿ, ನಿರ್ವಹಣೆ ಕಾರ್ಯವನ್ನು ಪ್ರಾರಂಭಿಸಲು ಸೂಚಿಸಿದ ಅವರು, ಇದೇ ರೀತಿ ಪ್ರಮುಖ ಆರ್ಟಿರಿಯಲ್ ರಸ್ತೆಗಳಲ್ಲಿ ಕರ್ಬ್ ಸ್ಟೋನ್‌ಗಳಿಗೆ ಬಣ್ಣ ಬಳಿಯುವ ಹಾಗೂ ಲೈನ್ ಮಾರ್ಕಿಂಗ್ ಮಾಡುವ ಸಂಬಂಧ ಯೋಜನೆಯನ್ನು ರೂಪಿಸಿ ಸಮರೋಪಾದಿಯಲ್ಲಿ ಕೆಲಸ ಮಾಡಲು ಸೂಕ್ತಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಎಂ.ಆರ್.ವೆಂಕಟೇಶ್, ರಸ್ತೆ ಮೂಲಭೂತ ಸೌಕರ್ಯ ವಿಭಾಗದ ಮುಖ್ಯ ಅಭಿಯಂತರ ಪ್ರಹ್ಲಾದ್, ಯೋಜನಾ ವಿಭಾಗದ ಮುಖ್ಯ ಅಭಿಯಂತರ ರಮೇಶ್ ಸೇರಿದಂತೆ ಪ್ರಮುಖರಿದ್ದರು.