10 ದಿನಗಳ ಚೆಲುವನಾರಾಯಣಸ್ವಾಮಿಯ ಕೊಠಾರೋತ್ಸವ

ಮೇಲುಕೋಟೆ : ಚೆಲುವನಾರಾಯಣಸ್ವಾಮಿಯ ಕೊಠಾರೋತ್ಸವ ಸೋಮವಾರದಿಂದ ಆರಂಭವಾಗಿದ್ದು ಹತ್ತು ದಿನಗಳ ಕಾಲ ನೆರವೇರಲಿದೆ ಪ್ರತಿ ಸಂಜೆ ಸ್ವಾಮಿಗೆ ಚತುರ್ವೀದಿಗಳಲ್ಲಿ ಉತ್ಸವ ನೆರವೇರಲಿದ್ದು ಅನೂಚಾನಪದ್ದತಿಯಂತೆ ಆಚಾರ್ಯಪುರಷರ ಕುಟುಂಬಗಳಿಂದ ವಿಶೇಷ ಪುಷ್ಪಕೈಂಕರ್ಯ ಸೇವೆಗಳು ಪ್ರತಿ ದಿನವೂ ನಡೆಯಲಿದೆ
ಮೇಲುಕೋಟೆ ದೇವಾಲಯಗಳಲ್ಲಿ ಧನುರ್ಮಾಸದ ಬೆಳಗಿನ ಪೂಜೆಗಳು ಜನವರಿ 4 ರಂದು ಮುಕ್ತಾಯಗೊಂಡಿದ್ದು ಸಂಕ್ರಾಂತಿಯವರೆಗೆ ನಡೆಯುವ ಅಧ್ಯಯನೋತ್ಸವದಲ್ಲಿ 12 ಮಂದಿ ಆಳ್ವಾರುಗಳಿಗೆ ಕೊಠಾರ ಮಂಟಪದಲ್ಲಿ ವಿಶೇಷ ಪೂಜಾನುಷ್ಠಾನ ನಡೆಯಲಿದೆ. ಶನಿವಾರ ಭಾನುವಾರ ಸಹಸ್ರಾರು ಭಕ್ತರು ಆಗಮಿಸುತ್ತಿರುವ ಹಾಗೂ ಎಲ್ಲಾ ದೇವಾಲಯಗಳಲ್ಲಿ ರಥೋತ್ಸವಗಳೂ ನಡೆಯುತ್ತಿರುವ ಕಾರಣ ಮಂಡ್ಯ ಜಿಲ್ಲಾಧಿಕಾರಿ ಡಾ.ಎಂ.ವಿ ವೆಂಕಟೇಶ್ ಚೆಲುವನಾರಾಯಣಸ್ವಾಮಿ ಉತ್ಸವಗಳೂ ಎಂದಿನಂತೆ ನಡೆಯಲು ಅವಕಾಶ ನೀಡಿದ್ದಾರೆ. ಪ್ರತಿ ದಿನ ರಾತ್ರಿ 8 ಗಂಟೆಯೊಳಗೆ ಹೊರಭಾಗದಲ್ಲಿ ಉತ್ಸವ ಮುಕ್ತಾಯಮಾಡಬೇಕೆನ್ನುವ ಷರತ್ತಿನೊಂದಿಗೆ ಉತ್ಸವಗಳಿಗೆ ಅನುಮತಿ ನೀಡಿದ್ದಾರೆ
ಹತ್ತುದಿನಗಳಕಾಲ ನಡೆಯುವ ವಿಶೇಷ ಪುಷ್ಪಕೈಂಕರ್ಯ ಸೇವೆಯ ನಿಮಿತ್ತ ಕೊಠಾರೋತ್ಸವ ಪ್ರಥಮದಿನ ಬಳ್ಳೆಕೆರೆ ರಾಮಸ್ವಾಮಿ ಅಯ್ಯಂಗಾರ್ ಮತ್ತು ಶ್ರೀರಾಮಶರ್ಮ ಪುಷ್ಪಕೈಂಕರ್ಯ ಮತ್ತು ನೇಮಿಸೇವೆ ನಡೆಸಿದರು. ಜ.5ರಂದು ಕೃಷ್ಣಯ್ಯಂಗಾರ್ 6 ರಂದು ಒಂಬಾರ್ ಅಯ್ಯಂಗಾರ್ 7 ಆಯಿಜನನ್ಯಾಚಾರ್ಯ ತಿರುಮಾಳಿಗೈ 8 ರಂದು ತಿರುವಾಯಿಮೊಳಿ ಆಚ್ಚಾನ್ 9 ರಂದು ಕುಮಾರ್ ಶಿಂಗ್ಲಾಚಾರ್ 10 ರಂದು ವಿವೇಕೋಲ್ಲಾಸಿನಿಸಭಾ,11 ರಂದು ಸೋಸಲೆಯವರ ಪರ ಆಂಡವನ್ ಆಶ್ರಮ 12 ಅಂಗಡೀಬೀದಿ ಕೇಶವದೇವಸ್ಥಾನದ ಚಿಕ್ಕಯ್ಯರ ವಂಶ 13 ರಂದು ಮೈಸೂರು ಪರಕಾಲಮಠದಿಂದ ನೇಮಿಸೇವೆ ಪ್ರಕಾರ ಪುಷ್ಪಕೈಂಕರ್ಯಗಳು ನಡೆಯಲಿವೆ 13 ರಂದು ರಾತ್ರಿ ನಮ್ಮಾಳ್ವಾರ್ ಪರಮಪದ ಮಹೋತ್ಸವವನ್ನು ಪರಿಚಾರಕ ಎಂ.ಎ.ನರಸಿಂಹಯ್ಯಂಗಾರ್ ಕುಟುಂಬ ಶ್ರದ್ಧಾಭಕ್ತಿಯಿಂದ ನಡೆಸುತ್ತಾ ಬಂದಿದೆ.
ಸ್ಥಾನೀಕರ ಕೈಂಕರ್ಯ ಮಕರ ಸಂಕ್ರಾಂತಿ ಮತ್ತು ಅಂಗಮಣಿ ಉತ್ಸವ:
ಜನವರಿ 14ರ ಮಕರ ಸಂಕ್ರಾಂತಿಯಂದು ಶ್ರೀ ಚೆಲುವನಾರಾಯಣಸ್ವಾಮಿಯ ಸಂಕ್ರಾಂತಿ ಪುಷ್ಪಕೈಂಕರ್ಯ ಸಂಕ್ರಾಂತಿಫಲ ಪಠಣ ಮತ್ತು ವಸಂತರಾಗ ಮಹೋತ್ಸವಗಳನ್ನು 4 ನೇಸ್ಥಾನೀಕ ಶ್ರೀನಿವಾಸ ನರಸಿಂಹನ್ ಗುರೂಜಿ ಯತಿರಾಜದಾಸರ್ ಗುರುಪೀಠ ಮತ್ತು ಜನವರಿ 15 ರಂದು ಪ್ರಖ್ಯಾತ ಅಂಗಮಣಿ ಉತ್ಸವವನ್ನು ಪ್ರಥಮಸ್ಥಾನೀಕ ಕರಗಂ ನಾರಾಯಣ ಅಯ್ಯಂಗಾರ್ ಮತ್ತು 3 ನೇ ಸ್ಥಾನೀಕ ಸಜ್ಜೆಹಟ್ಟಿ ತಿರುನಾರಾಯಣ ಅಯ್ಯಂಗಾರ್ ಸ್ಥಾನಾಚಾರ್ಯ ಗುರುಪೀಠಗಳವತಿಯಿಂದ ಪರಂಪರಾಗತವಾಗಿ ನಡೆಸಲಾಗುತ್ತದೆ. ಉತ್ತರಾಯಣ ಪುಣ್ಯಕಾಲದ ಪ್ರಮುಖ ಉತ್ಸವಗಳಾದ ಮಕರ ಸಂಕ್ರಾಂತಿ ಮತ್ತು ಕನೂಹಬ್ಬ ಕೈಂಕರ್ಯಗಳೂ ಸಹ ಸ್ಥಾನೀಕರ ಸೇವೆಯಾಗಿವೆ